ADVERTISEMENT

ದೊಡ್ಡಬಳ್ಳಾಪುರ | ₹240ಕ್ಕೆ ಜಿಗಿದ ಬೀನ್ಸ್‌: ದುಬಾರಿಯಾದ ಕೊತ್ತಂಬರಿ, ಮೂಲಂಗಿ

ನಟರಾಜ ನಾಗಸಂದ್ರ
Published 28 ಮೇ 2024, 6:42 IST
Last Updated 28 ಮೇ 2024, 6:42 IST
ದೊಡ್ಡಬಳ್ಳಾಪುರದ ಎಪಿಎಂಸಿ ತರಕಾರಿ ಮಾರುಕಟ್ಟೆ
ದೊಡ್ಡಬಳ್ಳಾಪುರದ ಎಪಿಎಂಸಿ ತರಕಾರಿ ಮಾರುಕಟ್ಟೆ   

ದೊಡ್ಡಬಳ್ಳಾಪುರ(ಬೆಂಗಳೂರು ಗ್ರಾಮಾಂತರ): ಏಪ್ರಿಲ್‌ನಲ್ಲಿ ದುಬಾರಿಯಾಗಿದ್ದ ಬೀನ್ಸ್‌ ಮತ್ತೆ ದ್ವಿ ಶತಕ ಭಾರಿಸಿ ₹250ರತ್ತ ಮುನ್ನಗುತ್ತಿದೆ. ತರಕಾರಿಗಳಲ್ಲಿಯೇ ಕಡಿಮೆ ಬೆಲೆ ಸಿಗುತ್ತಿದ್ದ ಮೂಲಂಗಿ ₹80ಕ್ಕೆ ಏರಿಕೆಯಾಗಿದ್ದು, ಕೊತ್ತಂಬರಿ ಮತ್ತು ದಂಟಿನ ಸೊಪ್ಪು ಕೂಡ‌ ಬೆಲೆ ಏರಿಕೆಯ  ಸ್ಪರ್ಧೆಗೆ ಇಳಿದಿವೆ.

ಇಲ್ಲಿನ ಕೃಷ್ಣರಾಜೇಂದ್ರ ಹಾಗೂ ಎಪಿಎಂಸಿ ತರಕಾರಿ ಮಾರುಕಟ್ಟೆಯಲ್ಲಿ ಕಳೆದ 15 ದಿನಗಳ ಹಿಂದೆ ಇದ್ದ ತರಕಾರಿಗಳ ಬೆಲೆ ಈಗ ದ್ವಿಗುಣಗೊಂಡಿವೆ.

ಕಳೆದ ಎರಡು ಮೂರು ತಿಂಗಳ ಹಿಂದೆ ಮಳೆ ಸರಿಯಾಗಿ ಬೀಳದ ಕಾರಣ ಹೆಚ್ಚಿನ ರೈತರು ತರಕಾರಿ ಬೆಳೆದಿಲ್ಲ. ಅಲ್ಲದೆ ಈಚಿನ ದಿನಗಳಲ್ಲಿ ಮದುವೆ ಸಮಾರಂಭಗಳು ಹೆಚ್ಚಾಗಿ ನಡೆಯುತ್ತಿರುವ ಹಿನ್ನೆಲೆ ತರಕಾರಿಗಳ ಬೇಡಿಕೆ ಹೆಚ್ಚಿದೆ. ಅಲ್ಲದೆ ಕಳೆದ 15 ದಿನಗಳಲ್ಲಿ ಬಿದ್ದ ಮಳೆಗೆ ಕೆಲವು ರೈತರು ಬೆಳೆದಿದ್ದ ತರಕಾರಿ ಬೆಳೆಗಳು ಬೆಳೆಗಳು ನೆಲಕಚ್ಚಿವೆ. ಈ ಎಲ್ಲ ಕಾರಣಗಳಿಂದ ತರಕಾರಿಗಳು ಗಗನಕುಸುಮವಾಗಿವೆ.

ADVERTISEMENT

₹100 ಇದ್ದ ಬೀನ್ಸ್‌, ₹240ಕ್ಕೆ ಏರಿಕೆಯಾಗಿದೆ. ₹20–22 ಇದ್ದ ಟೊಮೆಟೊ ₹40–₹50, ಕ್ಯಾರೇಟ್‌ ₹80, ಹಗಲಕಾಯಿ ₹100, ಬಟಾಣಿ ₹200ಕ್ಕೆ ಏರಿಕೆಯಾಗಿದೆ. ಮೂಲಂಗಿ ಕೂಡ ₹80 ಆಗಿದೆ. ಕೊತ್ತಂಬರಿ ಸೊಪ್ಪು ಒಂದು‌ ಕಟ್ಟಿಗೆ ₹80, ₹10–₹20ಕ್ಕೆ ಮಾರಾಟ ಆಗುತ್ತಿದ್ದ ದಂಟ್ಟಿನ ಸೊಪ್ಪಿನ ಒಂದು ಕಟ್ಟು ₹50 ಆಗಿದೆ.

ಎರಡು ಮೂರು ತಿಂಗಳಿಂದ ಸುಡು ಬಿಸಿಲು ಹಾಗೂ ತೀವ್ರ ವಿದ್ಯುತ್‌ ಕೊರತೆಯಿಂದ ತರಕಾರಿ ಬೆಳೆಯಲು ಸಾಧ್ಯವಾಗಿಲ್ಲ. ನೆಟ್ಟ ತರಕಾರಿ ಸಸಿಗಳು ಸಹ ಬಿಸಿಲಿನ ತೀವ್ರತೆಗೆ ಬಾಡಿ ಹೋಗಿ ಬೆಳೆದಿಲ್ಲ. ಹೀಗಾಗಿ ಹೆಚ್ಚಿನ ರೈತರು ತರಕಾರಿ ಬೆಳಗಳತ್ತ ಆಸಕ್ತಿ ತೋರಲಿಲ್ಲ. 

ನೆರಳು, ನೀರಿನ ಸೌಲಭ್ಯ ಹೊಂದಿದ್ದ ರೈತರು ಬೆಳೆದಿದ್ದ ತರಕಾರಿ ಬೆಳೆಗ ಒಂದು ವಾರದಿಂದ ಬಿರುಗಾಳಿ ಸಮೇತ ಸುರಿದ ಮಳೆಗೆ ಎಲ್ಲಾ ರೀತಿಯ ತರಕಾರಿಗಳು ನಾಶ ಆಗಿವೆ.  ಇದೇ ಸಂದರ್ಭದಲ್ಲಿ ಮದುವೆ, ಊರ ಜಾತ್ರೆ ಸಮಾರಂಭಗಳು ಆರಂಭ ಆಗಿರುವ ಹಿನ್ನೆಲೆಯಲ್ಲಿ ತರಕಾರಿಗೆ ಹೆಚ್ಚಿನ ಬೇಡಿಕೆ ಬಂದಿದೆ. ಆದರೆ ಪೂರೈಕೆ ಕಡಿಮೆಯಾಗಿದೆ. ಈ ಎಲ್ಲಾ ಕಾರಣಗಳಿಂದ ತರಕಾರಿಗಳು ದುಬಾರಿಯಾಗಿವೆ.

ಆಷಾಢ ಮಾಸ ಆರಂಭ ಆಗುವವರೆಗೂ ತರಕಾರಿ ದುಬಾರಿಯಾಗಿರಲಿದೆ. ಇನ್ನೂ ಒಂದು ತಿಂಗಳ ವರೆಗೆ ಈಗಿನ ಬೆಲೆಯಲ್ಲಿ ಐದಾರು ರೂಪಾಯಿ ಏರಿಪೇರಿನಂತೆ ಬೆಲೆ ಮುಂದುವರೆಯಲಿದೆ ಎನ್ನುತ್ತಾರೆ ವ್ಯಾಪಾರಿಗಳು.

ದೊಡ್ಡಬಳ್ಳಾಪುರ ಕೃಷ್ಣರಾಜೇಂದ್ರ ಮಾರುಕಟ್ಟೆಯಲ್ಲಿ ತರಕಾರಿ ಬೆಲೆ

ತರಕಾರಿ; ಹಿಂದಿನ ಬೆಲೆ; ಈಗಿನ ಬೆಲೆ(1ಕೆ.ಜಿ.ಗೆ)

ಬೀನ್ಸ್‌;₹100; ₹240

ಟೊಮೆಟೊ; ₹22; ₹50

ಕ್ಯಾರೇಟ್‌; ₹60; ₹80

ಮೂಲಂಗಿ; ₹40;₹80

ನವೀಲ್‌ ಕೋಸ್‌; ₹40;₹60

ಬೀಟ್‌ರೋಟ್‌; ₹30;₹60

ಬಟಾಣಿ; ₹150;₹200

ಬೆಂಡೆಕಾಯಿ; ₹40;₹60

ಹಸಿಮೆಣಸಿನಕಾಯಿ;₹80;₹120

ಹಗಲಕಾಯಿ; ₹70; ₹100

ಕೊತ್ತಂಬರಿ ಸೊಪ್ಪು (1ಕಟ್ಟು); ₹30; ₹80

ದಂಟಿನ ಸೊಪ್ಪು (1ಕಟ್ಟು); ₹25; ₹50

ಮಾರುಕಟ್ಟೆಗೆ ಹೆಚ್ಚು ತರಕಾರಿ ಬರುತ್ತಿಲ್ಲ. ಚಿಕ್ಕಬಳ್ಳಾಪುರದಲ್ಲಿ ಪೈಪೋಟಿಗೆ ಬಿದ್ದು ಹರಾಜಿನಲ್ಲಿ ಖರೀದಿ ಮಾಡಿಕೊಂಡು ಬಂದು ಮಾರಾಟ ಮಾಡುತ್ತಿದ್ದೇವೆ.
ಲಾವಣ್ಯ ವ್ಯಾಪಾರಿ ವಿಜಯಪುರ
ನನಗೆ ದಿನಕೂಲಿ ₹300. ತರಕಾರಿ ಖರೀದಿಗೆ ಒಂದು ದಿನದ ಕೂಲಿ ತೆರಬೇಕಿದೆ. ಹೀಗಾಗಿ 10 ಗ್ರಾಂ 200 ಗ್ರಾಂ ಖರೀಸುತಿದ್ದೇನೆ.
ನಂಜುಂಡ ಕಾರ್ಮಿಕ ವಿಜಯಪುರ
ಆನೇಕಲ್‌ನಲ್ಲಿ ಬಟಾಣಿ ಕೆ.ಜಿಗೆ ₹210
ಆನೇಕಲ್ ತಾಲ್ಲೂಕಿನಲ್ಲಿ ತರಕಾರಿ ಮತ್ತು ಸೊಪ್ಪಿನ ಬೆಲೆಯಲ್ಲಿ ಭಾರಿ ಏರಿಕೆಯಾಗಿದೆ. ಕೊತ್ತಂಬರಿ ಸೊಪ್ಪು ಮತ್ತು ಬೀನ್ಸ್‌ ಬೆಲೆ ಶೇ 200ರಷ್ಟು ಏರಿಕೆಯಾಗಿದೆ. ಫಾರ್ಮ್‌ ಬಟಾಣಿ ಕೆ.ಜಿಗೆ ₹210 ನಾಟಿ ₹400ಕ್ಕೆ ಮಾರಾಟ  ಆಗುತ್ತಿದೆ. ₹20–30ಕ್ಕೆ ಮಾರಾಟ ಆಗುತ್ತಿದ್ದ ಕೊತ್ತಂಬರಿ ಒಂದು ಕಟ್ಟು ಈಗ ₹80ಕ್ಕೆ ಏರಿಕೆಯಾಗಿದೆ. ಬೀನ್ಸ್‌ ₹180ರಿಂದ ₹210 ಟೊಮೆಟೊ ₹60-70 ಶುಂಠಿ ₹180-220 ಕ್ಯಾರೆಟ್‌ ₹100-120 ಬೆಳ್ಳುಳ್ಳಿ ₹180- ₹200ಗೆ ಮಾರಾಟ ಆಗುತ್ತಿದೆ. ಶತಕದತ್ತ ಸೊಪ್ಪಿನ ಬೆಲೆ: ವಿಜಯಪುರ ಹೋಬಳಿಯಲ್ಲಿ ಸೊಪ್ಪಿನ ಬೆಲೆ ಶತಕದತ್ತ ಮುಖ ಮಾಡಿದೆ. ಬೀನ್ಸ್‌ ಬೆಲೆ ₹240 ಆಗಿದ್ದು ಎಲ್ಲ ತರಕಾರಿಗಳ ಬೆಲೆಯಲ್ಲಿ ₹20 ಏರಿಕೆಯಾಗಿದೆ‌. ₹10–20ಕ್ಕೆ ಸಿಗುತ್ತಿದ್ದು ಒಂದು ಕಟ್ಟು ಸೊಪ್ಪು ₹5080ಕ್ಕೆ ಏರಿಕೆಯಾಗಿದೆ. ಕೊತ್ತಂಬರಿ ₹80 ಪುದೀನಾ ₹40  ದಂಟಿನ ಸೊಪ್ಪು ₹40ಕ್ಕೆ ಏರಿಕೆಯಾಗಿದೆ. ಬದನೆಕಾಯಿ ₹60 ಬೆಂಡೆಕಾಯಿ ₹80 ಬಿಟ್‌ರೂಟ್ ₹60 ಹೀರೆಕಾಯಿ ₹80 ಸೌತೆಕಾಯಿ ₹60 ದಪ್ಪ ಮೆಣಸಿಕಾಯಿ ₹80 ಗೋರಿಕಾಯಿ ₹80ಕ್ಕೆ ಎರಿಕೆಯಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.