ADVERTISEMENT

ಹೊಲಕ್ಕೆ ದಾರಿ ಬಿಡಿಸಿಕೊಡಲು ಆಗ್ರಹಿಸಿ ಪ್ರತಿಭಟನೆ

​ಪ್ರಜಾವಾಣಿ ವಾರ್ತೆ
Published 19 ಜುಲೈ 2024, 15:57 IST
Last Updated 19 ಜುಲೈ 2024, 15:57 IST
ದೊಡ್ಡಬಳ್ಳಾಪುರ ತಾಲ್ಲೂಕು ಕಚೇರಿ ಮುಂದೆ ಮೇಲಿನನಾಯಕರಂಡಹಳ್ಳಿ ಗ್ರಾಮಸ್ಥರು ಕೃಷಿ ಜಮೀನುಗಳಿಗೆ ಹೋಗಲು ದಾರಿ ಬಿಡಿಸುವಂತೆ ಆಗ್ರಹಿಸಿ ಪ್ರತಿಭಟನೆ ನಡೆಸಿದರು
ದೊಡ್ಡಬಳ್ಳಾಪುರ ತಾಲ್ಲೂಕು ಕಚೇರಿ ಮುಂದೆ ಮೇಲಿನನಾಯಕರಂಡಹಳ್ಳಿ ಗ್ರಾಮಸ್ಥರು ಕೃಷಿ ಜಮೀನುಗಳಿಗೆ ಹೋಗಲು ದಾರಿ ಬಿಡಿಸುವಂತೆ ಆಗ್ರಹಿಸಿ ಪ್ರತಿಭಟನೆ ನಡೆಸಿದರು   

ದೊಡ್ಡಬಳ್ಳಾಪುರ: ತಮ್ಮ ಹೊಲಗಳಿಗೆ ಓಡಾಡಲು ದಾರಿ ಬಿಡಿಸಿಕೊಡಲು ಆಗ್ರಹಿಸಿ ಮೇಲಿನನಾಯಕರಂಡಹಳ್ಳಿಯ ಗ್ರಾಮದ ರೈತರು ತಾಲ್ಲೂಕು ಕಚೇರಿ ಮುಂದೆ ಪ್ರತಿಭಟನೆ ನಡೆಸಿದರು.

ಗ್ರಾಮದಲ್ಲಿ ಸುಮಾರು 150ಕ್ಕು ಹೆಚ್ಚಿನ ಭೂ ರಹಿತ ಹಿಡುವಳಿದಾರ ಕುಟುಂಬಗಳು ದಶಕಗಳಿಂದಲೂ ಸಾಗುವಳಿ ಮಾಡುತ್ತಿದ್ದ ಜಮೀನಿಗೆ ಈಗ ಹೋಗಲು ದಾರಿ ಇಲ್ಲದಂತೆ ಆಗಿದೆ. ಸರ್ಕಾರವೇ ಹಂಚಿಕೆ ಮಾಡಿರುವ ಜಮೀನುಗಳಿಗೆ ಈಗ ಕೆಲ ಬಲಾಡ್ಯರು ದಾರಿಯನ್ನು ಬಿಡದೆ ಅಡ್ಡಿಪಡಿಸುತ್ತಿದ್ದಾರೆ. ಈಗಷ್ಟೇ ಮುಂಗಾರು ಕೃಷಿ ಚಟುವಟಿಕೆಗಳು ಪ್ರಾರಂಭವಾಗಿದೆ. ತುರ್ತು ಕ್ರಮ ಕೈಗೊಂಡು ರೈತರು ತಮ್ಮ ಹೊಲಗಳಿಗೆ ಹೋಗಲು ದಾರಿ ಬಿಡಿಸಿಕೊಡಬೇಕು ಎಂದು ಒತ್ತಾಯಿಸಿದರು.

‘ನಮ್ಮೂರಿನ ಸರ್ಕಾರಿ ಗೋಮಾಳದಲ್ಲಿ ಸಾಗುವಳಿ ಮಾಡುತ್ತಿರುವ ರೈತರು ಹೊಲಗಳಿಗೆ ಹೋಗಲು ಕಾಲುದಾರಿ, ಬಂಡಿದಾರಿಗಳನ್ನು ಸಹ ಬಂದ್‌ ಮಾಡಲಾಗಿದೆ. ಇದರಿಂದ ಜಮೀನುಗಳು ಇದ್ದು ಸಹ ಇಲ್ಲದಂತಹ ಸ್ಥಿತಿ ನಿರ್ಮಾಣವಾಗಿದೆ. ಗೋಮಾಳದಲ್ಲಿ ಭೂಮಿ ಮಂಜೂರಾಗಿರುವ ಎಲ್ಲಾ ರೈತರಿಗು ಅನುಕೂಲವಾಗುವಂತೆ ದಾರಿ ಬಿಡಿಸಿಕೊಡಲು ತಹಶೀಲ್ದಾರ್‌ ಅವರಿಗೆ ನಾಲ್ಕು ವರ್ಷಗಳಿಂದಲು ಮನವಿ ಸಲ್ಲಿಸುತ್ತಿದ್ದರೂ ಸಹ ಯಾವುದೇ ಕ್ರಮ ಕೈಗೊಂಡಿಲ್ಲ’ ಎಂದು ಕೆಆರ್‌ಎಸ್ ಪಕ್ಷದ ಜಿಲ್ಲಾ ಅಧ್ಯಕ್ಷ ಬಿ.ಶಿವಶಂಕರ್, ಗ್ರಾಮದ ಮುಖಂಡ ಶ್ರೀನಿವಾಸ್ ಅಸಮಾಧಾನ ವ್ಯಕ್ತಪಡಿಸಿದರು.

ADVERTISEMENT

ಜಿಲ್ಲಾ ಉಸ್ತುವಾರಿ ಸಚಿವರ ಕ್ಷೇತ್ರಕ್ಕೆ ಸೇರಿರುವ ಮೇಲಿನನಾಯಕರಂಡಹಳ್ಳಿ ಗ್ರಾಮದ ದಾರಿ ಸಮಸ್ಯೆ ಕುರಿತು ಜನಸಂಪರ್ಕ ಸಭೆಯಲ್ಲೂ ಹಲವು ಬಾರಿ ಮನವಿ ಸಲ್ಲಿಸಲಾಗಿದೆ. ಇದುವರೆಗೂ ದಾರಿ ಬಿಡಿಸಿಕೊಡುವುದರಲಿ ಕನಿಷ್ಠ ಉತ್ತರವು ಸಹ ಬಂದಿಲ್ಲ. ಜನಸಂಪರ್ಕ ಸಭೆಗಳನ್ನು ಜನರನ್ನು ಮೆಚ್ಚಿಸಲು ನಡೆಸುವುದೇ ಹೊರತು, ಜನರ ಕಷ್ಟಗಳನ್ನು ಪರಿಹರಿಸಲು ಇಲ್ಲದಾಗಿದೆ. ಬೇಸಾಯ ಮಾಡುವ ಭೂಮಿ ಹಾಗೂ ಗ್ರಾಮದಲ್ಲಿನ ಸ್ಮಶಾನ ಜಾಗಕ್ಕೂ ಹೋಗಲು ಸಹ ದಾರಿ ಇಲ್ಲದಾಗಿದೆ ‌ಎಂದು ಬೇಸರಿಸಿದರು.

ಪ್ರತಿಭಟನೆಯಲ್ಲಿ ಮೇಲಿನನಾಯಕರಂಡಹಳ್ಳಿ ಗ್ರಾಮದ ರೈತರು ಭಾಗವಹಿಸಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.