ದೊಡ್ಡಬಳ್ಳಾಪುರ: ಅಂತರರಾಷ್ಟ್ರೀಯ ಮಟ್ಟದಲ್ಲಿ ಹೆಸರು ಮಾಡುತ್ತಿರುವ ದೊಡ್ಡಬಳ್ಳಾಪುರ ಈಗ ‘ಗುಂಡಿಪುರ’ ವಾಗಿ ಬದಲಾಗಿದೆ. ಪ್ರತಿ ದಿನವು ಹತ್ತಾರು ಜನ ಬೈಕ್ ಸವಾರರು ಬಿದ್ದು ಕೈ, ಕಾಲುಗಳನ್ನು ಮುರಿದುಕೊಂಡು ಮನೆ ಸೇರುತ್ತಿದ್ದು ನಗರಸಭೆಯ ಆಡಳಿತ ವೈಖರಿಗೆ ಹಿಡಿಶಾಪ ಹಾಕುತ್ತಿದ್ದಾರೆ.
ದಾಬಸ್‌ಪೇಟೆ-ದೊಡ್ಡಬಳ್ಳಾಪುರ ನಡುವೆ ಕ್ವೀನ್ ಸಿಟಿ ನಿರ್ಮಾಣಕ್ಕೆ ಮುಖ್ಯಮಂತ್ರಿಗಳು ಇತ್ತೀಚೆಗಷ್ಟೆ ಚಾಲನೆ ನೀಡಿದ್ದಾರೆ. ಅಂತರರಾಷ್ಟ್ರೀಯ ಖ್ಯಾತಿ ಹೊಂದಿರುವ ಐ ಪೋನ್ ತಯಾರಿಕಾ ಕಂಪನಿ ದೊಡ್ಡಬಳ್ಳಾಪುರ-ದೇವನಹಳ್ಳಿ ಎರಡೂ ತಾಲ್ಲೂಕುಗಳ ಗಡಿಯಲ್ಲಿ ಪ್ರಾರಂಭವಾಗಿದೆ. ಸಾವಿರಾರು ಜನ ಕಾರ್ಮಿಕರು ಸೇರಿದಂತೆ ಸಾರ್ವಜನಿಕರು ನಗರದ ಪ್ರಮುಖ ರಸ್ತೆಗಳ ಮೂಲಕ ಸಂಚರಿಸುತ್ತಿದ್ದಾರೆ. ಇಷ್ಟೆಲ್ಲಾ ಅಭಿವೃದ್ದಿಯ ವೇಗಕ್ಕೆ ತಕ್ಕಂತೆ ಮೂಲ ಸೌಕರ್ಯ ಸೌಲಭ್ಯಗಳ ಅಭಿವೃದ್ಧಿ ಕಡೆಗೆ ಆದ್ಯತೆ ನೀಡಿದೆ ಸ್ಥಳೀಯ ಆಡಳಿತ ಗಾಡನಿದ್ರೆಗೆ ಜಾರಿದೆ.
ಗುಂಡಿಪುರದ ದರ್ಶನಕ್ಕೆ ನಗರದ ಯಾವುದೂ ಗಲ್ಲಿ, ಸಂದಿ ರಸ್ತೆಗಳಿಗೆ ಹೋಗಬೇಕಿಲ್ಲ. ತಾಲ್ಲೂಕು ಕಚೇರಿ ಬಾಗಿಲ ಮುಂದೆಯೇ ಹಾದು ಹೋಗಿರುವ ನೆಲಮಂಗಲ, ಚಿಕ್ಕಬಳ್ಳಾಪುರ ರಸ್ತೆಯಲ್ಲಿ ನಡೆದುಕೊಂಡು ಸಹ ಹೋಗಲು ಸಾಧ್ಯ ಇಲ್ಲದಷ್ಟು ಗುಂಡಿಗಳು ಬಿದ್ದಿವೆ.
ಇಷ್ಟೊಂದು ದೊಡ್ಡ ಮಟ್ಟದಲ್ಲಿ ಹಾಳಾಗಿರುವ ರಸ್ತೆ ಮೂಲಕವೇ ತಾಲ್ಲೂಕು ಕಚೇರಿಗೆ ಪ್ರತಿ ದಿನವು ಉಪವಿಭಾಗದ ದಂಡಾಧಿಕಾರಿಗಳು ಹಾಗೂ ಉಪವಿಭಾಗಾಧಿಕಾರಿ, ತಾಲ್ಲೂಕು ದಂಡಾಧಿಕಾರಿಗಳು ಹಾಗೂ ತಹಶೀಲ್ದಾರ್ ಸೇರಿದಂತೆ ತಾಲ್ಲೂಕು ಹಂತದ ಹತ್ತಾರು ಇಲಾಖೆಗಳ ಅಧಿಕಾರಿಗಳು ಸಂಚರಿಸುತ್ತಾರೆ. ಆದರೆ ರಸ್ತೆಯಲ್ಲಿ ಗುಂಡಿಗಳು ಮಾತ್ರ ಕಣ್ಣಿಗೆ ಬೀಳದೆ ಇರುವ ಬಗ್ಗೆ ಹೊರಗಿನ ಊರುಗಳಿಂದ ತಾಲ್ಲೂಕು ಕಚೇರಿಗೆ ಬರುವ ಸಾರ್ವಜನಿಕರು ಆಶ್ಚರ್ಯ ವ್ಯಕ್ತಿಪಡಿಸುತ್ತಿದ್ದಾರೆ. ಅಲ್ಲದೆ ತಾಲ್ಲೂಕು ಕಚೇರಿ ಮುಂದಿನ ರಸ್ತೆಯ ಗುಂಡಿಗಳ ಸ್ಥಿತಿಯೇ ಹೀಗಾದರೆ ಅಧಿಕಾರಿಗಳ ಕಣ್ಣಿಗೆ ಬೀಳದೆ ದೂರದ ಗ್ರಾಮಗಳ ಹಾಗೂ ನಗರದ ಒಳಗಿನ ಗಲ್ಲಿ ರಸ್ತೆಗಳು ಡಾಂಬರು ಕಂಡು ಅದೆಷ್ಟು ವರ್ಷಗಳು ಕಳೆದಿರಬೇಡ ಎಂದು ಪ್ರಶ್ನಿಸುತ್ತಿದ್ದಾರೆ.
ಜನ ಏನಂತಾರೆ ನಗರಸಭೆಯಲ್ಲಿ ಹಣ ಇಲ್ಲವೇ?
ನಗರಸಭೆ ವ್ಯಾಪ್ತಿಯಲ್ಲಿನ ರಸ್ತೆಗಳಿಗೆ ಡಾಂಬರು ಹಾಕಿಸುವಷ್ಟು ಹಣ ನಗರಸಭೆ ಆಡಳಿತದ ಬಳಿ ಇಲ್ಲದೆ ಇರಬಹುದು. ಆದರೆ ಗುಂಡಿಗಳನ್ನು ಮುಚ್ಚಿಸಲು ಅಗತ್ಯ ಇರುವಷ್ಟು ಹಣವು ಇಲ್ಲದೇ ಇರುವಷ್ಟು ಕನಿಷ್ಠ ಮಟ್ಟಕ್ಕೆ ಬ್ಯಾಂಕ್ ಬ್ಯಾಲನ್ಸ್ ಕುಸಿತವಾಗಿರಬಹುದೆ ? ನಗರಸಭೆ ಆಡಳಿತ ಗಾಡ ನಿದ್ರೆಯಲ್ಲಿ ಇದೆ. ಗುಂಡಿಗಳನ್ನು ಶಾಶ್ವತವಾಗಿ ಮುಚ್ಚಿವುದು ಪ್ರಥಮ ಆದ್ಯತೆಯಾಗಬೇಕು.
–ಜಿ.ಸತ್ಯನಾರಾಯಣ ಹಿರಿಯ ಕನ್ನಡಪರ ಹೋರಾಟಗಾರ.
ಇಲ್ಲಿನ ಗುಂಡಿಗಳು ಕಾಣಿಸುತ್ತಿಲ್ಲವೇ? ಬಿಬಿಎಂಪಿ ವ್ಯಾಪ್ತಿಲ್ಲಿನ ಗುಂಡಿಗಳನ್ನು ಮುಚ್ಚುವಂತೆ ಗಡುವು ನೀಡುವ ರಾಜ್ಯ ಸರ್ಕಾರ ಬೆಂಗಳೂರಿಗೆ ಕೂಗಳತೆ ದೂರದಲ್ಲಿನ ದೊಡ್ಡಬಳ್ಳಾಪುರ ನಗರದಲ್ಲಿನ ಗುಂಡಿಗಳು ಮಾತ್ರ ಏಕೆ ಕಾಣಿಸುತ್ತಿಲ್ಲ. ಬೆಂಗಳೂರು ನಗರದಲ್ಲಿ ವಾಸ ಮಾಡುವ ಜನರ ಜೀವಗಳಿಗೆ ಮಾತ್ರ ಬೆಲೆ ಇದೆಯೇ ? ಹೆಚ್ಚಿನ ಸಾವು ನೋವುಗಳು ಸಂಭವಿಸುವ ಮುನ್ನ ಸ್ಥಳೀಯ ಆಡಳಿತ ಎಚ್ಚೆತ್ತುಕೊಳ್ಳಬೇಕು. ಗುಂಡಿಗಳನ್ನು ಮುಚ್ಚುವುದು ಸ್ಥಳೀಯ ಆಡಳಿತದ ಸಹಜ ಪ್ರಕ್ರಿಯೆ ಆಗಬೇಕು. ಆದರೆ ಸಣ್ಣ ಕೆಲಸಕ್ಕು ಸಾರ್ವಜನಿಕರು ಬೇಡಿಕೊಳ್ಳುವ ಸ್ಥಿತಿಗೆ ಬಂದಿದೆ ಅಂದರೆ ಅಲ್ಲಿ ಆಡಳಿತ ನಿರ್ಜೀವಗೊಂಡಿರುವುದರ ಸಂಕೇತವಾಗಿದೆ.
–ಗಿರೀಶ್ ಸಾಮಾಜಿಕ ಕಾರ್ಯಕರ್ತ
ಜನರ ಗುಂಡಿ ಮುಚ್ಚಲಿದ್ದಾರೆ ನಗರಸಭೆಯಿಂದ ಗುಂಡಿಗಳನ್ನು ಮುಚ್ಚುವುದು ಅಂದರೆ ಜಲ್ಲಿ ಪುಡಿಯನ್ನು ಹಾಕುವುದು ಮತ್ತೆ ಒಂದೆರಡು ದಿನಗಳಲ್ಲಿಯೇ ಗುಂಡಿ ಯಥಾಸ್ಥಿಗೆ ಬರುತ್ತದೆ. ಇಂತಹ ಕಳಪೆ ಕೆಲಸ ಮಾಡುವ ಮೂಲಕ ಜನರ ತೆರಿಗೆ ಹಣ ವ್ಯರ್ಥ ಮಾಡುವ ಬದಲಿಗೆ ನಗರಸಭೆಯಲ್ಲಿ ಗುಂಡಿಗಳನ್ನು ಮಚ್ಚಲು ಹಣ ಇಲ್ಲವೆಂದು ಸಾರ್ವಜನಿಕ ಪ್ರಕಟಣೆ ನೀಡಿದರೆ ಜನರೇ ಗುಂಡಿಗಳನ್ನು ಮುಚ್ಚಿ ತಮ್ಮ ಜೀವ ಉಳಿಸಿಕೊಳ್ಳವ ಕೆಲಸ ಮಾಡುತ್ತಾರೆ. ರಾಜಧಾನಿಗೆ ಹತ್ತಿರದ ನಗರವೊಂದರ ಬೆಳವಣಿಗೆ ರೀತಿ ಇದಲ್ಲ. ಅಭಿವೃದ್ಧಿಯ ಪರಿಕಲ್ಪನೆ ಇಲ್ಲದ ಆಡಳಿತದ ವೈಖರಿಗೆ ಹಿಡಿದ ಕೈಗನ್ನಡಿಯಾಗಿದೆ ‘ಗುಂಡಿಪುರ’(ದೊಡ್ಡಬಳ್ಳಾಪುರ).
–ರಾಘವೇಂದ್ರ ದೊಡ್ಡಬಳ್ಳಾಪುರ ನಿವಾಸಿ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.