ದೊಡ್ಡಬಳ್ಳಾಪುರ: ಮಳೆಗಾಲಕ್ಕಿಂತಲೂ ಈ ಬಾರಿ ಬೇಸಿಗೆಯ ವಾತಾವರಣವೇ ಹೆಚ್ಚಾಗಿತ್ತು. ಹಾಗಾಗಿ ತಾಲ್ಲೂಕಿನ ಬೆಟ್ಟಗಳಲ್ಲಿ, ಬೆಟ್ಟದ ತಪ್ಪಲಿನ ಹಾಗೂ ಇತರೆಡೆಯ ಕುರುಚಲು ಕಾಡುಗಳಲ್ಲಿ ಒಣಗಿ ನಿಂತಿರುವ ಹುಲ್ಲಿಗೆ ಬೆಂಕಿ ಬಿದ್ದು ಹೆಚ್ಚಿನ ಪರಿಸರ ನಾಶ, ಸಣ್ಣಪುಟ್ಟ ಪ್ರಾಣಿಗಳು ಮೃತಪಡುವ ಅಪಾಯಗಳು ದಟ್ಟವಾಗಿದೆ.
ನಮ್ಮ ಕಾಡುಗಳ ಹಸಿರು ಮತ್ತು ವನ್ಯ ಸಂಪತ್ತು ರಕ್ಷಣೆಗೆ ಅರಣ್ಯ ಇಲಾಖೆಗೆ ಜತೆ ಎಲ್ಲರು ಟೊಂಕಕಟ್ಟಿ ನಿಲ್ಲಬೇಕಿದೆ...
–ಇದು ತಾಲ್ಲೂಕಿನ ವಿದ್ಯಾರ್ಥಿಗಳ ಮನದ ಮಾತು. ಕಾಡ್ಚಿಚ್ಚಿನಿಂದ ಅರಣ್ಯ ರಕ್ಷಣೆ ಮಾಡಬೇಕಿರುವ ಕುರಿತು ‘ಪ್ರಜಾವಾಣಿ’ಯೊಂದಿಗೆ ಮಾತನಾಡಿದ್ದಾರೆ.
ಈ ಹಿಂದಿನ ವರ್ಷಗಳಲ್ಲೂ ಸಾಕಷ್ಟು ಬೆಟ್ಟಗಳು, ಕುರುಚಲು ಕಾಡುಗಳು ಜನರ ಮೂಡು ನಂಬಿಕೆಯು ಸೇರಿದಂತೆ ಇತರೆ ಕಾರಣಗಳಿಂದಾಗಿ ಸುಟ್ಟು ಹೋಗಿವೆ. ಈಗ ಮತ್ತೆ ಕಡು ಬೇಸಿಗೆಯ ದಿನಗಳು ಪ್ರಾರಂಭವಾಗಿವೆ. ಕಾಡ್ಗಿಚ್ಚಿಗೆ ಸುತ್ತಮುತ್ತಲಿನ ಪರಿಸರ ಬಲಿಯಾಗದಂತೆ ರಕ್ಷಿಸುವ ಕಾರ್ಯಗಳು ನಡೆಯಬೇಕಿದೆ ಎನ್ನುತ್ತಾರೆ ಅವರು.
ತಾಲ್ಲೂಕಿನಲ್ಲಿ ಹೆಸರಾಂತ ಮಾಕಳಿ ಬೆಟ್ಟ, ದೇವರ ಬೆಟ್ಟ, ಜಾಲಿಗೆ ಬೆಟ್ಟ,ಹುಲುಕುಡಿ ಬೆಟ್ಟ, ಉಜ್ಜನಿ ಬೆಟ್ಟಗಳ ಸಾಲು, ಹಾಗೆಯೇ ತಾಲ್ಲೂಕಿನ ಪೂರ್ವ ದಿಕ್ಕಿನ ಗಡಿ ಭಾಗದ ಪಂಚಗಿರಿ (ನಂದಿಗಿರಿ, ಚನ್ನಗಿರಿ, ಸ್ಕಂದಗಿರಿ, ದಿಬ್ಬಗಿರಿ, ಬ್ರಹ್ಮಗಿರಿ) ಶ್ರೇಣಿಗಳು ಇವೆ. ಗಂಡ್ರಗೊಳ್ಳಿಪುರ ಅರಣ್ಯ, ಸಾಸಲು ಅರಣ್ಯ ಪ್ರದೇಶಗಳು ಇವೆ.
ಈ ಬೆಟ್ಟದ ಸಾಲುಗಳಿಗೆ ಸೌದೆ, ಸಣ್ಣ ಪುಟ್ಟ ಪ್ರಾಣಿಗಳ ಬೇಟೆ ಸೇರಿದಂತೆ ಇತರೆ ಆಸೆಗಳಿಂದಾಗಿ ಕಿಡಿಗೇಡಿಗಳು ಬೆಂಕಿ ಹಾಕುತ್ತಾರೆ. ಪ್ರತಿ ವರ್ಷವು ಸಸಿಗಳನ್ನು ನೆಟ್ಟು ಬೆಳೆಸುವಷ್ಟೇ ಪ್ರಾಮುಖ್ಯತೆಯನ್ನು ಬೆಳೆದಿರುವ ಸಸಿಗಳು ಬೆಂಕಿಗೆ ಆಹುತಿಯಾಗದಂತೆ ರಕ್ಷಿಸುವ ಕಡೆಗೂ ಅಷ್ಟೇ ಕಾಳಜಿ ವಹಿಸಬೇಕಾದ ತುರ್ತು ಅಗತ್ಯವಿದೆ ಎನ್ನುವುದು ಪರಿಸರವಾದಿಗಳ ಆಗ್ರಹವಾಗಿದೆ.
ದೇಶದ ಉಪಗ್ರಹಗಳ ತಂತ್ರಜ್ಞಾನದಲ್ಲಿ ಕ್ರಾಂತಿಕಾರಕ ಬೆಳವಣಿಗೆ ಉಪಯೋಗವು ಈಗ ಅರಣ್ಯ ಇಲಾಖೆಗೂ ಲಭ್ಯವಾಗುತ್ತಿದೆ. ಯಾವುದೇ ಅರಣ್ಯ ಪ್ರದೇಶದಲ್ಲಿ ಬೆಂಕಿ ಕಾಣಿಸಿಕೊಂಡ ತಕ್ಷಣ ಉಪಗ್ರಹದ ಮೂಲಕ ಎಚ್ಚರಿಕೆ ಸಂದೇಶ ರಾಜ್ಯದ ಅರಣ್ಯ ಇಲಾಖೆಯ ಬೆಂಕಿ ನಿಯಂತ್ರಣ ಕೊಠಡಿಗೆ ಬರಲಿದೆ. ಅಲ್ಲಿಂದ ತಾಲ್ಲೂಕು ಹಂತದದಲ್ಲಿನ ಅರಣ್ಯ ಇಲಾಖೆ ಅಧಿಕಾರಿಗಳು ಸೇರಿದಂತೆ ಸಿಬ್ಬಂದಿಯ ಮೊಬೈಲ್‌ಗಳಿಗೆ ಸಂದೇಶ ರವಾನೆಯಾಗಲಿದೆ. ಇದರಿಂದ ತಕ್ಷಣ ಎಚ್ಚೆತ್ತುಕೊಂಡು ಬೆಂಕಿ ನಂದಿಸುವ ಮೂಲಕ ಹೆಚ್ಚಿನ ನಾಶವಾಗುವುದನ್ನು ತಡೆಯಲು ಸಹಕಾರಿಯಾಗಿದೆ.
ತಾಲ್ಲೂಕಿನ ಅರಣ್ಯದಂಚಿನ ಬೆಟ್ಟದ ತಪ್ಪಲಿನ ಗ್ರಾಮಗಳಲ್ಲಿ ಬೆಂಕಿ ನಂದಿಸುವ ಪ್ರಾಮುಖ್ಯತೆ ಬೆಂಕಿ ಕಾಣಿಸಿಕೊಂಡ ತಕ್ಷಣ ಕೈಗೊಳ್ಳಬೇಕಿರುವ ಕ್ರಮಗಳ ಬಗ್ಗೆ ಸಾರ್ವಜನಿಕರಲ್ಲಿ ಅರಿವು ಮೂಡಿಸುವ ಜಾಗೃತಿ ಜಾಥಾ ನಡೆಸಲಾಗುತ್ತಿದೆ. ಅರಣ್ಯ ಬೆಟ್ಟದ ಸಮೀಪದ ರಸ್ತೆ ಬದಿಯಲ್ಲಿ ಬೀಡಿ ಸಿಗರೇಟ್ ಬಿಸಾಡುವುದರಿಂದ ಕಾಣಿಸಿಕೊಳ್ಳುವ ಬೆಂಕಿ ಬೇರೆಡೆಗೆ ವ್ಯಾಪಿಸದಂತೆ ತಡೆಯಲು ಹುಲ್ಲು ಪೋದೆ ಗಿಡಗಳನ್ನು ಕಿತ್ತು ಸ್ವಚ್ಛ ಮಾಡಲಾಗುತ್ತಿದೆಕೃಷ್ಣೇಗೌಡ ವಲಯ ಅರಣ್ಯ ಅಧಿಕಾರಿ ದೊಡ್ಡಬಳ್ಳಾಪುರ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.