ದೊಡ್ಡಬಳ್ಳಾಪುರ: ವೇಗವಾಗಿ ಬೆಳೆಯುತ್ತಿರುವ ನಗರದಲ್ಲಿ ವಾಹನ ದಟ್ಟಣೆ ನಿಯಂತ್ರಿಸಲು ಸಂಚಾರ ಪೊಲೀಸ್ ಠಾಣೆ ಪ್ರಾರಂಭಕ್ಕೆ ದೊಡ್ಡಬಳ್ಳಾಪುರ-ಬೆಂಗಳೂರು ರಾಜ್ಯ ಹೆದ್ದಾರಿಯ ರೈಲ್ವೆ ನಿಲ್ದಾಣ ಸಮೀಪ ಭೂಮಿ ಮಂಜೂರಾಗಿದ್ದರೂ ರಾಜಕೀಯ ಮೇಲಾಟದಿಂದಾಗಿ ಮುಂದಕ್ಕೆ ಹೋಗುತ್ತಲೇ ಇದೆ.
ನಗರದ ಬೆಳವಣಿಗೆಯ ವೇಗಕ್ಕೆ ತಕ್ಕಂತೆ ಪೊಲೀಸ್ ಸಿಬ್ಬಂದಿ ಇಲ್ಲದೆ ಸಂಚಾರ ವ್ಯವಸ್ಥೆ ಅರಾಜಕತೆಯಾಗಿದೆ. ಪ್ರತಿ ದಿನ ನಗರದ ಪ್ರಮುಖ ವೃತ್ತಗಳಲ್ಲಿ ಉಂಟಾಗುವ ವಾಹನ ದಟ್ಟಣೆಯಲ್ಲಿ ವಾಹನ ಸವಾರರ ರಸ್ತೆ ಜಗಳಗಳು ಸಾಮಾನ್ಯವಾಗುತ್ತಿವೆ.
ನಗರ ಇಂದು ಸುಮಾರು 8 ಕಿ.ಮೀ ವ್ಯಾಪ್ತಿಯನ್ನು ಮೀರಿ ವಿಸ್ತಾರವಾಗಿ ಬೆಳೆದಿದೆ. ಅಷ್ಟೇ ವೇಗವಾಗಿ ನಗರದ ಜನಸಂಖ್ಯೆ, ವಾಹನಗಳ ಸಂಖ್ಯೆಯು ಹೆಚ್ಚಾಗುತ್ತಲೇ ಇದೆ. ಆದರೆ ನಗರದ ಒಳಗಿನ ರಸ್ತೆಗಳು ಮಾತ್ರ ಶತಮಾನಗಳ ಹಿಂದೆ ಇದ್ದಷ್ಟೇ ಇವೆ ಹೊರತು ಒಂದೇ ಒಂದು ರಸ್ತೆಯೂ ಸಹ ವಿಸ್ತರಣೆಯಾಗಿಲ್ಲ.
ಹೀಗಾಗಿ ನಗರದ ಪ್ರಮುಖ ರಸ್ತೆಗಳಲ್ಲಿ ನಡೆದಾಡುವುದು ಸಹ ಕಷ್ಟವಾಗುವಷ್ಟು ಸಂಚಾರ ದಟ್ಟಣೆ ಮಿತಿ ಮೀರಿ ಹೋಗಿದೆ. ಶಾಲಾ ಕಾಲೇಜು, ಸರ್ಕಾರಿ ಕಚೇರಿಗಳು ಕೆಲಸ ನಿರ್ವಹಿಸುವ ಸಂದರ್ಭದಲ್ಲಿ ವಾಹನ ಸವಾರರು ಒಂದೊಂದು ವೃತ್ತದಲ್ಲೂ ವಾಹನ ದಟ್ಟಣೆಯಿಂದ ಹಿಡಿಶಾಪ ಹಾಕತ್ತಿದ್ದಾರೆ.
ನಗರದ ಸುತ್ತ ಹೊಸದಾಗಿ ಅಂತರರಾಷ್ಟ್ರೀಯ ಕೈಗಾರಿಕೆಗಳು ಸ್ಥಾಪನೆಯಾಗಿವೆ. ಈ ಕೈಗಾರಿಕೆಗಳಿಗೆ ಕನಿಷ್ಠ 30 ರಿಂದ 40 ಸಾವಿರ ಕಾರ್ಮಿಕರ ಅಗತ್ಯ ಇದೆ ಎಂದು ಹೇಳಲಾಗುತ್ತಿದೆ. ಈ ಕೈಗಾರಿಕೆಗಳು ಇನ್ನು ಪೂರ್ಣ ಪ್ರಮಾಣದಲ್ಲಿ ಕಾರ್ಯಾರಂಭ ಮಾಡಿಲ್ಲ. ಆದರೆ ಈಗಾಗಲೇ ಸಂಚಾರ ದಟ್ಟಣೆ ಹೆಚ್ಚಾಗಿದೆ.
ನಮ್ಮಲ್ಲಿ ಜನ ಸಂಖ್ಯೆಗೆ ತಕ್ಕಷ್ಟು ನಗರ ಪೊಲೀಸ್ ಠಾಣೆಯಲ್ಲಿ ಸಿಬ್ಬಂದಿ ಇಲ್ಲ. ನಗರದಲ್ಲಿನ ಪ್ರಮುಖ ರಸ್ತೆಗಳು ಅತ್ಯಂತ ಕಿರಿದಾಗಿವೆ. ಹಾಗಾಗಿ ಸಂಚಾರ ವ್ಯವಸ್ಥೆ ಸರಿದಾರಿಗೆ ತರುವುದು ಕಷ್ಟ.ಅಲ್ಲದೆ ನಗರಕ್ಕೆ ಪ್ರತ್ಯೇಕ ಸಂಚಾರಿ ಪೊಲೀಸ್ ಠಾಣೆ ಮಂಜೂರಾಗದ ಹೊರತು ಕಾನೂನು ಸುವ್ಯವಸ್ಥೆ,ಸಂಚಾರಿ ವ್ಯವಸ್ಥೆ ಎಲ್ಲವನ್ನು ಒಬ್ಬರೇ ನಿಬಾಯಿಸುವುದು ಕಷ್ಟ ಎನ್ನುತ್ತಾರೆ ಪೊಲೀಸರು.
ಪ್ರತ್ಯೇಕ ಪೊಲೀಸ್ ಠಾಣೆ ಅಗತ್ಯ
ವೇಗವಾಗಿ ಬೆಳೆಯುತ್ತಿರುವ ನಗರದ ಹೊರ ಭಾಗದ ಬಾಶೆಟ್ಟಿಹಳ್ಳಿ ಕೈಗಾರಿಕಾ ಪ್ರದೇಶ ಐದು ಹಂತಗಳಲ್ಲಿ ಬೆಳೆದ ನಂತರ ಎಲ್ಲಾ ರೀತಿಯ ವಾಹನಗಳ ಸಂಖ್ಯೆಯಲ್ಲಿ ಹೆಚ್ಚಳವಾಗುತ್ತಲೇ ಇದೆ. ಉತ್ತರ ಭಾರತವು ಸೇರಿದಂತೆ ದೇಶದ ವಿವಿಧ ರಾಜ್ಯಗಳಿಂದಲು ಸಾವಿರಾರು ಜನ ಕಾರ್ಮಿಕರು ಇಲ್ಲಿನ ಕೈಗಾರಿಕೆಗಳಿಗೆ ಬಂದಿದ್ದಾರೆ. ಕೈಗಾರಿಕಾ ಪ್ರದೇಶದ ಸುತ್ತ ನೂರಾರು ಪಿ.ಜಿ ಹಾಗೂ ಕಾರ್ಮಿಕರ ವಸತಿ ಗೃಹಗಳು ನಿರ್ಮಾಣವಾಗಿವೆ. ಈ ಎಲ್ಲವುಗಳ ಮೇಲೆ ಸೂಕ್ತ ನಿಗಾವಹಿಸಲು ಕೈಗಾರಿಕಾ ಪ್ರದೇಶಕ್ಕೆ ಪ್ರತ್ಯೇಕ ಪೊಲೀಸ್ ಠಾಣೆ ಸ್ಥಾಪನೆ ತುರ್ತು ಅಗತ್ಯವಾಗಿದೆ. ಕೈಗಾರಿಕಾ ಪ್ರದೇಶದಲ್ಲಿನ ಗಾರ್ಮೆಂಟ್ಸ್ ಹಾಗೂ ಇತರೆ ಕೈಗಾರಿಕೆಗಳಿಗೆ ಕಾರ್ಮಿಕರು ಹೋಗಿ ಬರುವ ಡಿ.ಕ್ರಾಸ್ ವೃತ್ತ ರಂಗಪ್ಪ ವೃತ್ತ ರೈಲ್ವೆ ನಿಲ್ದಾಣದ ವೃತ್ತ ಹಳೇ ಸರ್ಕಾರಿ ಆಸ್ಪತ್ರೆ ವೃತ್ತ ನಗರದಲ್ಲಿನ ಮುಖ್ಯ ರಸ್ತೆಯ ಚೌಕದ ವೃತ್ತ ಸೌಂದರ್ಯ ಮಹಲ್ ವೃತ್ತ ತಾಲ್ಲೂಕು ಕಚೇರಿ ವೃತ್ತ ರುಮಾಲೆ ವೃತ್ತ ಮುಗುವಾಳಪ್ಪ ವೃತ್ತ ಈ ಸ್ಥಳಗಳಲ್ಲಿ ವಾಹನಗಳು ಸಿಲುಕಿಕೊಂಡರೆ ಕನಿಷ್ಠ ಅರ್ಧ ಗಂಟೆಗಳ ಕಾಲದವರು ವಾಹನ ದಟ್ಟಣೆ ಉಂಟಾಗಲಿದೆ.
ಇಚ್ಛಾಶಕ್ತಿ ಕೊರತೆ; ಹೆಚ್ಚಿದ ಅಪಘಾತ
ನಗರ ಠಾಣೆ ಪೊಲೀಸರು ಸಂಚಾರ ಅವ್ಯವಸ್ಥೆ ಸರಿಪಡಿಸುವ ಕಡೆಗೆ ಜನಪ್ರತಿನಿಧಿಗಳು ಮತ್ತು ಅಧಿಕಾರಿಗಳು ಇಚ್ಛಾಶಕ್ತಿ ಕೊರತೆಯಿಂದ ನಗರ ವ್ಯಾಪ್ತಿಯಲ್ಲಿ ಅಪಘಾತ ಹೆಚ್ಚಾಗುತ್ತಿದೆ. ಹಿರಿಯ ನಾಗರೀಕರು ನಗರದಲ್ಲಿನ ಮುಖ್ಯ ರಸ್ತೆ ಬದಿಗಳಲ್ಲೂ ಸಹ ನಡೆದುಕೊಂಡು ಹೋಗಲು ಸ್ಥಳ ಇಲ್ಲದಾಗಿದೆ.
–ಜನಪರ ಮಂಜು, ಸ್ಥಳೀಯ ನಿವಾಸಿ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.