ADVERTISEMENT

ದೊಡ್ಡಬಳ್ಳಾಪುರ: 48,933 ಜಾನುವಾರಿಗೆ ಲಸಿಕೆ

4ನೇ ಸುತ್ತಿನ ಕಾಲುಬಾಯಿ ಲಸಿಕೆ ಕಾರ್ಯಕ್ರಮಕ್ಕೆ ಚಾಲನೆ

​ಪ್ರಜಾವಾಣಿ ವಾರ್ತೆ
Published 28 ಸೆಪ್ಟೆಂಬರ್ 2023, 14:09 IST
Last Updated 28 ಸೆಪ್ಟೆಂಬರ್ 2023, 14:09 IST
ದೊಡ್ಡಬಳ್ಳಾಪುರ ತಾಲ್ಲೂಕಿನ ಪಿಂಡಕೂರುತಿಮ್ಮನಹಳ್ಳಿಯಲ್ಲಿ 4ನೇ ಸುತ್ತಿನ ಕಾಲು ಬಾಯಿ ಜ್ವರ ನಿಯಂತ್ರಣ ಲಸಿಕಾ ಅಭಿಯಾನಕ್ಕೆ ಕೆಎಂಎಫ್‌ ನಿರ್ದೇಶಕ ಬಿ.ಸಿ.ಆನಂದಕುಮಾರ್ ಚಾಲನೆ ನೀಡಿದರು
ದೊಡ್ಡಬಳ್ಳಾಪುರ ತಾಲ್ಲೂಕಿನ ಪಿಂಡಕೂರುತಿಮ್ಮನಹಳ್ಳಿಯಲ್ಲಿ 4ನೇ ಸುತ್ತಿನ ಕಾಲು ಬಾಯಿ ಜ್ವರ ನಿಯಂತ್ರಣ ಲಸಿಕಾ ಅಭಿಯಾನಕ್ಕೆ ಕೆಎಂಎಫ್‌ ನಿರ್ದೇಶಕ ಬಿ.ಸಿ.ಆನಂದಕುಮಾರ್ ಚಾಲನೆ ನೀಡಿದರು   

ದೊಡ್ಡಬಳ್ಳಾಪುರ: ರಾಸುಗಳಿಗೆ ಲಸಿಕೆ ಹಾಕುವುದರಿಂದ ಕಾಲುಬಾಯಿ ರೋಗವನ್ನು ಸಂಪೂರ್ಣವಾಗಿ ತಡೆಗಟ್ಟಬಹುದು. ಈಗ ಪ್ರಾರಂಭವಾಗಿರುವ 4ನೇ ಸುತ್ತಿನ ಲಸಿಕಾ ಅಭಿಯಾನ ಅ.25ರವರೆಗೆ ನಡೆಯಲಿದ್ದು, ಎಲ್ಲಾ ಜಾನುವಾರುಗಳಿಗೆ ಲಸಿಕೆ ಕೊಡಿಸಬೇಕಿದೆ ಎಂದು ಕೆಎಂಎಫ್ ನಿರ್ದೇಶಕ ಬಿ.ಸಿ.ಆನಂದಕುಮಾರ್ ಹೇಳಿದರು.

ತಾಲ್ಲೂಕಿನ ಪಿಂಡಕೂರುತಿಮ್ಮನಹಳ್ಳಿ ಡೈರಿ ಆವರಣದಲ್ಲಿ ಪಶುಪಾಲನೆ ಮತ್ತು ಪಶುವೈದ್ಯಕೀಯ ಸೇವಾ ಇಲಾಖೆಯಿಂದ ಬೆಂಗಳೂರು ಹಾಲು ಒಕ್ಕೂಟದ ಸಹಯೋಗದೊಂದಿಗೆ ಜಾನುವಾರು ರೋಗಗಳ ನಿಯಂತ್ರಣ ಕಾರ್ಯಕ್ರಮದ 4ನೇ ಸುತ್ತಿನ ಕಾಲು ಬಾಯಿ ಜ್ವರ ನಿಯಂತ್ರಣ ಲಸಿಕಾ ಅಭಿಯಾನಕ್ಕೆ ಚಾಲನೆ ನೀಡಿ ಮಾತನಾಡಿದರು.

ಈ ರೋಗಕ್ಕೆ ಯಾವುದೇ ನಿರ್ದಿಷ್ಟ ಚಿಕಿತ್ಸೆ ಇಲ್ಲದ ಕಾರಣ,  ಕಾಲು-ಬಾಯಿ ರೋಗ ನಿಯಂತ್ರಿಸಲು ರಾಸುಗಳಿಗೆ ಲಸಿಕೆ ಹಾಕಿಸುವುದೇ ಏಕೈಕ ಮಾರ್ಗವಾಗಿದೆ. ರೈತರು ಸರ್ಕಾರದ ಹಾಗೂ ಬಮೂಲ್‍ನ ಸೌಲಭ್ಯಗಳನ್ನು ಸದುಪಯೋಗಪಡಿಸಿಕೊಂಡು ಮುಂದೆ ಆಗಬಹುದಾದ ತೊಂದರೆಗಳಿಂದ ರಾಸುಗಳನ್ನು ರಕ್ಷಿಸಿಕೊಳ್ಳಬೇಕಿದೆ ಎಂದು ತಿಳಿಸಿದರು.

ADVERTISEMENT

ತಾಲ್ಲೂಕು ಮುಖ್ಯ ಪಶುವೈದ್ಯಾಧಿಕಾರಿ ಡಾ.ವಿಶ್ವನಾಥ್ ಮಾತನಾಡಿ, ತಾಲ್ಲೂಕಿನ ಎಲ್ಲಾ ಗ್ರಾಮಗಳ ಸುಮಾರು 48,933 ಸಾವಿರ ದನ ಮತ್ತು ಎಮ್ಮೆಗಳಿಗೆ ಮುಂಜಾಗ್ರತಾ ಕ್ರಮವಾಗಿ ಲಸಿಕೆ ಹಾಕಲಾಗುತ್ತಿದೆ. ತಾಲ್ಲೂಕಿಗೆ 27,250 ಡೋಸ್‍ಗಳ ಲಸಿಕೆ ಸರಬರಾಜಾಗಿದ್ದು, ನಿತ್ಯ ಲಸಿಕೆ ಹಾಕಲಾಗುತ್ತದೆ ಎಂದು ತಿಳಿಸಿದರು.

ಬಮೂಲ್ ಉಪವ್ಯವಸ್ಥಾಪಕ ಡಾ.ಎಲ್.ಬಿ.ನಾಗರಾಜ್, ಪಿಂಡಕೂರುತಿಮ್ಮನಹಳ್ಳಿ ಎಂಪಿಸಿಎಸ್ ಅಧ್ಯಕ್ಷ ಆನಂದ್, ಕಾರ್ಯದರ್ಶಿ ರವಿಕುಮಾರ್ ಇದ್ದರು.

ಹಾಲಿನ ಪ್ರಮಾಣ ಕಡಿಮೆ ಆಗುವುದಿಲ್ಲ

ರೈತರು ರಾಸುಗಳಿಗೆ ಲಸಿಕೆ ಹಾಕಿಸಿಕೊಳ್ಳುವುದರಿಂದ ರಾಸುಗಳಲ್ಲಿನ ಹಾಲಿನ ಪ್ರಮಾಣ ಕಡಿಮೆ ಆಗುವುದಿಲ್ಲ ಎಂದು ಮುಖ್ಯ ಪಶುವೈದ್ಯಾಧಿಕಾರಿ ಡಾ.ವಿಶ್ವನಾಥ್ ಹೇಳಿದರು.

ಖನಿಜ ಮಿಶ್ರಣ ರೋಗ ನಿರೋಧಕ ಶಕ್ತಿ ವೃದ್ಧಿಸುವ ಔಷಧಿ ಬಳಸುವುದರಿಂದ ಜಾನುವಾರುಗಳು ನಿಶ್ಯಕ್ತಿಯಾಗುವುದನ್ನು ತಪ್ಪಿಸಬಹುದು. ಕಾಲು ಬಾಯಿ(ಗೆರಸಲು) ಜ್ವರ ರೋಗವು ವೈರಾಣುವಿನಿಂದ ಉಂಟಾಗಲಿದ್ದು ಇದು ಸೀಳು ಗೊರಸುಗಳುಳ್ಳ ರಾಸುಗಳಲ್ಲಿ ಕಂಡುಬರುತ್ತದೆ ಎಂದರು.

ಲಸಿಕೆ ಹಾಕುವ ಸಮಯ ಪ್ರತಿ ದಿನ ಬೆಳಿಗ್ಗೆ 6.30 ಗಂಟೆಯಿಂದ 11 ಗಂಟೆಯವರೆಗೆ ನಿಗದಿತ ವೇಳಾಪಟ್ಟಿಯಂತೆ ಗ್ರಾಮಗಳಿಗೆ ಭೇಟಿ ನೀಡಿ ಜಾನುವಾರುಗಳಿಗೆ ಉಚಿತವಾಗಿ ವೈದ್ಯರು ಲಸಿಕೆ ನೀಡಲಿದ್ದಾರೆ.

ತಾಲ್ಲೂಕಿನಲ್ಲಿ 24 ತಂಡಗಳಲ್ಲಿ ಒಟ್ಟು 100 ಸಿಬ್ಬಂದಿಗಳು ರಾಸುಗಳಿಗೆ ಲಸಿಕೆ ಹಾಕಲಿದ್ದಾರೆ. ರೈತರು ಸಾಕಾಣಿಕೆ ಮಾಡಿರುವ 3 ತಿಂಗಳ ಮೇಲ್ಪಟ್ಟ ಎಲ್ಲಾ ರಾಸುಗಳಿಗೆ ಕಡ್ಡಾಯವಾಗಿ ಲಸಿಕೆ ಹಾಕಿಸಿಕೊಳ್ಳುವ ಮೂಲಕ ಕಾರ್ಯಕ್ರಮವನ್ನು ಯಶಸ್ವಿಗೊಳಿಸಬೇಕು ಎಂದು ಮನವಿ ಮಾಡಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.