ದೊಡ್ಡಬಳ್ಳಾಪುರ: ಸಂಜೆ ವೇಳೆ ಚಿರುಮುರಿ, ನಿಪ್ಪಟ್ಟ ಮಸಾಲೆ, ಟೊಮೆಟೊ, ಸೌತೆಕಾಯಿ ಮಸಾಲೆ, ಬನ್‌ಮಸಾಲ ಹೀಗೆಯೇ ಈ ಪಟ್ಟಿ ಬೆಳೆಯುತ್ತ ಹೋಗುತ್ತದೆ. ಹೌದು ನಗರದ ಪ್ರಮುಖ ವೃತ್ತಗಳ ರಸ್ತೆ ಬದಿಯಲ್ಲಿ ಹಾಗೂ ಶಾಶ್ವತ ಅಂಗಡಿಗಳಲ್ಲಿ ದಶಕಗಳಿಂದಲೂ ಚಿರುಮುರಿ ಹಾಕುವುದನ್ನೇ ಮುಖ್ಯ ವ್ಯಾಪಾರವಾಗಿಸಿಕೊಂಡಿರುವ ಕುಟುಂಬಗಳು ತಮ್ಮದೇ ಸ್ವತಂತ ಮಸಾಲೆ ತಯಾರಿಕೆಯ ವಿಶೇಷ ರುಚಿ, ಸ್ವಾದದಿಂದಲೇ ಗುರುತಿಸಿಕೊಂಡಿವೆ.
ಹೀಗಾಗಿಯೇ ಸಂಜೆ ವೇಳೆ ಮಕ್ಕಳೊಂದಿಗೆ ಮನೆಮಂದಿಯಲ್ಲೇ ಹೋಗಿ ತರಹೇವಾರಿ ಚಿರುಮುರಿ, ಬೇಲ್‌ಪುರಿ, ಮಸಾಲೆಪುರಿ ಸವಿದು ಬರುವುದು ಎಲ್ಲರ ಮನೆಯಲ್ಲೂ ಸಾಮಾನ್ಯ. ಚಿರುಮುರಿ ಪ್ರಿಯರು ಬಹುತೇಕ ವ್ಯಾಪಾರಿಗಳನ್ನು ಹುಡುಕಿಕೊಂಡು ಹೋಗಿ ಚಿರುಮರಿ ಸವಿಯುತ್ತಾರೆ.
ಸ್ವಂತವಾಗಿ ತಯಾರಿಸುವ ವಿಭಿನ್ನ ರುಚಿಯ ಮಸಾಲೆಗಳಿಂದ ಚಿರುಮುರಿ ಸಿದ್ಧಮಾಡಿಕೊಡಲು ಅಂಗಡಿಗಳಲ್ಲಿ ದೊರೆಯುವ ಸಿದ್ಧ ಮಸಾಲೆಯನ್ನು ಯಾರೂ ಬಳಸುವುದಿಲ್ಲ. ತಾವೇ ಕಂಡುಕೊಂಡಿರುವ ವಿವಿಧ ಬಗೆಯ ಸೊಪ್ಪುಗಳು, ಮಸಾಲೆ ಪದಾರ್ಥಗಳನ್ನು ಬಳಸಿಕೊಂಡು ಸ್ವಂತ ಕೈ ರುಚಿಯ ಸಮಾಲೆಯಿಂದ ಚಿರುಮುರಿ ಮಿಶ್ರಣ ಮಾಡಿಕೊಡುತ್ತಾರೆ. ಹೀಗಾಗಿಯೇ ಗ್ರಾಹಕರು ವಿಭಿನ್ನ ರುಚಿಯ ಚಿರುಮುರಿ ಸವಿಯಲು ದೂರವಾದರು ಹುಡುಕಿಕೊಂಡು ಹೋಗುತ್ತಾರೆ.
ನಗರದ ರುಮಾಲೆ ಛತ್ರದ ವೃತ್ತದಲ್ಲಿನ ಚಿರುಮುರಿ ಆರಾಧ್ಯ, ಕೋರ್ಟ್ ರಸ್ತೆಯ ರೋಜಿಪುರ ವೃತ್ತದ ಚಿರುಮುರಿ ಕುಮಾರ, ಮುತ್ಯಾಲಮ್ಮ ದೇವಾಲಯ ಸಮೀಪದ ಉಮೇಶ್, ಜಾಲಪ್ಪ ಕಾಲೇಜು ಬಳಿಯ ಮಂಜುನಾಥ್, ಕೊಂಗಾಡಿಯಪ್ಪ ಕಾಲೇಜು ರಾಜು, ಹಳೇ ವಿಜಯಬ್ಯಾಂಕ್ ಸಮೀಪದ ಬಾಲರಾಜು, ಕೊಂಗಾಡಿಯಪ್ಪ ಮುಖ್ಯ ರಸ್ತೆಯ ಅಮವಾಸೆ ಚುರುಮುರಿ, ಕಲ್ಲುಪೇಟೆ ರಾಜಣ್ಣ, ಚೌಕ ವೃತ್ತದ ಚೇತನ್, ಆಂಧ್ರದೇವಾಗ ಛತ್ರದ ರಾಮಿ, ನೆಲದಾಂಜನೇಯಸ್ವಾಮಿ ದೇವಾಲಯ ಸಮೀಪ ದೀವಾಕರ್ ನಾಗ್, ಸ್ಕೌಟ್ ಕ್ಯಾಂಪ್ ರಸ್ತೆಯಲ್ಲಿನ ಕಾಂತರಾಜು, ತೇರಿನಬೀದಿಯಲ್ಲಿನ ಗಂಗಾಧರ್ ಸೇರಿದಂತೆ ನಗರದ ಹತ್ತಾರು ಕಡೆಗಳಲ್ಲಿ ಚಿರುಮುರಿ ವ್ಯಾಪಾರದಿಂದಲೇ ಗುರುತಿಸಿಕೊಂಡು ಬದುಕು ಕಟ್ಟಿಕೊಂಡಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.