ADVERTISEMENT

ದೊಡ್ಡಬಳ್ಳಾಪುರ | ಸರ್ಕಾರಿ ಹಾಸ್ಟೆಲ್‌ ಸೇರಲು ನೂಕುನುಗ್ಗಲು

ವಿಜಯಪುರ, ರಾಯಚೂರು, ಬಳ್ಳಾರಿ ವಿದ್ಯಾರ್ಥಿನಿಯರೇ ಹೆಚ್ಚು

ನಟರಾಜ ನಾಗಸಂದ್ರ
Published 8 ಅಕ್ಟೋಬರ್ 2024, 6:40 IST
Last Updated 8 ಅಕ್ಟೋಬರ್ 2024, 6:40 IST
ದೊಡ್ಡಬಳ್ಳಾಪುರ ಕೊಡಿಗೇಹಳ್ಳಿ ರಸ್ತೆಯಲ್ಲಿ ಇರುವ ಸರ್ಕಾರಿ ಮೆಟ್ರಿಕ್‌ ನಂತರದ ಬಾಲಕಿಯರ ವಿದ್ಯಾರ್ಥಿ ನಿಲಯದೊಳಗಿನ ಕಾರಿಡಾರ್‌
ದೊಡ್ಡಬಳ್ಳಾಪುರ ಕೊಡಿಗೇಹಳ್ಳಿ ರಸ್ತೆಯಲ್ಲಿ ಇರುವ ಸರ್ಕಾರಿ ಮೆಟ್ರಿಕ್‌ ನಂತರದ ಬಾಲಕಿಯರ ವಿದ್ಯಾರ್ಥಿ ನಿಲಯದೊಳಗಿನ ಕಾರಿಡಾರ್‌   

ದೊಡ್ಡಬಳ್ಳಾಪುರ: ತಾಲ್ಲೂಕಿನಲ್ಲಿ ಇರುವ ಸರ್ಕಾರದ ಸುಸಜ್ಜಿತ ವಿದ್ಯಾರ್ಥಿನಿಲಯ, ಅಚ್ಚುಕಟ್ಟುತನ, ಸುರಕ್ಷತೆಗೆ ಮಾರು ಹೋಗಿರುವ ಪೋಷಕರು ಮಕ್ಕಳನ್ನು ವಿದ್ಯಾರ್ಥಿ ನಿಲಯಗಳಿಗೆ ದಾಖಲಿಸುತ್ತಿದ್ದಾರೆ. ಸ್ಥಳೀಯರಷ್ಟೇ ಅಲ್ಲದೆ ದೂರದ ಉತ್ತರ ಕರ್ನಾಟಕದ ಜಿಲ್ಲೆಗಳಿಂದಲೂ ಇಲ್ಲಿನ ಹಾಸ್ಟೆಲ್‌ಗಳಿಗೆ ಹೆಚ್ಚಿನ ಸಂಖ್ಯೆಯಲ್ಲಿ ದಾಖಲಾಗಿದ್ದಾರೆ.

ನಗರ ಸೇರಿದಂತೆ ತಾಲ್ಲೂಕಿನಲ್ಲಿ ಒಟ್ಟು 8 ವಿದ್ಯಾರ್ಥಿನಿಲಯಗಳು ಇವೆ. ಇದರಲ್ಲಿ ಎರಡು ಬಾಲಕಿಯರು, 6 ಬಾಲಕರ ವಿದ್ಯಾರ್ಥಿ ನಿಲಯಗಳು ಇವೆ. ಇವುಗಳ ಪೈಕಿ 2 ಮೆಟ್ರಿಕ್‌ ನಂತರ, 6 ಮೆಟ್ರಿಕ್‌ ಪೂರ್ವ ವಿದ್ಯಾರ್ಥಿ ನಿಲಯ ಇವೆ. 2 ಮೆಟ್ರಿಕ್‌ ನಂತರದ ವಿದ್ಯಾರ್ಥಿ ನಿಲಯಗಳಲ್ಲಿ 221 ಜನ ವಿದ್ಯಾರ್ಥಿಗಳು, 6 ಮೆಟ್ರಿಕ್‌ ಪೂರ್ವ ವಿದ್ಯಾರ್ಥಿ ನಿಲಯಗಳಲ್ಲಿ 575 ಜನ ವಿದ್ಯಾರ್ಥಿಗಳು 2024-25ನೇ ಸಾಲಿನ ಶೈಕ್ಷಣಿಕ ವರ್ಷದಲ್ಲಿ ವಿದ್ಯಾಭ್ಯಾಸ ಮಾಡುತ್ತಿದ್ದಾರೆ.

ಸರ್ಕಾರ ಇಲ್ಲಿನ ವಿದ್ಯಾರ್ಥಿ ನಿಲಯಗಳಿಗೆ ಮಂಜೂರು ಮಾಡಿರುವ ಸ್ಥಾನಗಳ ಸಂಖ್ಯೆ 727, ಆದರೆ, ದಾಖಲಾಗಿರುವುದು 796 ಜನ ವಿದ್ಯಾರ್ಥಿಗಳು. ಇತರ ಜಿಲ್ಲೆಗಳಲ್ಲಿ ಮಂಜೂರಾಗಿರುವ ಸ್ಥಾನಗಳು ಭರ್ತಿಯಾಗದೆ ಖಾಲಿ ಉಳಿದಿರುತ್ತವೆ ಎನ್ನುತ್ತಾರೆ ಸರ್ಕಾರಿ ವಿದ್ಯಾರ್ಥಿ ನಿಲಯದ ವಾರ್ಡ್‌ಯೊಬ್ಬರು.

ADVERTISEMENT

ಆರ್ಥಿಕವಾಗಿ ಹಿಂದಳಿವರು ಹಾಗೂ ಗ್ರಾಮೀಣ ಪ್ರದೇಶದ ವಿದ್ಯಾರ್ಥಿಗಳ ವಿದ್ಯಾಭ್ಯಾಸಕ್ಕಾಗಿ ಸರ್ಕಾರ ವಿದ್ಯಾರ್ಥಿ ನಿಲಯಗಳಿಗೆ ಹೆಚ್ಚಿನ ಆರ್ಥಿಕ ನೆರವು, ಸೌಲಭ್ಯ ಕಲ್ಪಿಸಿದೆ. ಆದರೆ, ಇತರ ತಾಲ್ಲೂಕುಗಳಿಗೆ ಹೋಲಿಕೆ ಮಾಡಿದರೆ ಇಲ್ಲಿನ ಹಾಸ್ಟೆಲ್‌ಗಳ ನಿರ್ವಹಣೆಯಲ್ಲಿ ವೈಯಕ್ತಿಕ ಆಸಕ್ತಿಯಿಂದಾಗಿ ತಾಲ್ಲೂಕಿನ ವಿದ್ಯಾರ್ಥಿ ನಿಲಯಗಳಿಗೆ ಸರ್ಕಾರ ಮಂಜೂರು ಮಾಡಿರುವ ಸ್ಥಾನಗಳಿಗಿಂತಲೂ ಹೆಚ್ಚಿನ ಸಂಖ್ಯೆಯಲ್ಲಿ ವಿದ್ಯಾರ್ಥಿಗಳು ದಾಖಲಾಗುತ್ತಿದ್ದಾರೆ.

ಸಮಾಜ ಕಲ್ಯಾಣ ಇಲಾಖೆಯ ಅಂಕಿ–ಅಂಶದಂತೆ ಶೇ60ರಷ್ಟು ವಿದ್ಯಾರ್ಥಿಗಳು ಹೊರಗಿನವರು. ಶೇ40ರಷ್ಟು ವಿದ್ಯಾರ್ಥಿಗಳು ಸ್ಥಳೀಯರಾಗಿದ್ದಾರೆ. ಹೊರಗಿನವರ ಪೈಕಿ ಹೆಚ್ಚಿನ ವಿದ್ಯಾರ್ಥಿಗಳು ಉತ್ತರ ಕರ್ನಾಟಕದ ವಿಜಯಪುರ, ರಾಯಚೂರು, ಬಳ್ಳಾರಿ ಜಿಲ್ಲೆ ವಿದ್ಯಾರ್ಥಿಗಳಾಗಿದ್ದಾರೆ. ಅದರಲ್ಲೂ ಹೆಣ್ಣು ಮಕ್ಕಳ ವಸತಿ ನಿಲಯಗಳಿಗೆ ಉತ್ತರ ಕರ್ನಾಟಕದ ವಿದ್ಯಾರ್ಥಿನಿಯರ ದಾಖಲಾತಿ ಸಂಖ್ಯೆ ಹೆಚ್ಚಾರುವುದು ವಿಶೇಷವಾಗಿದೆ.

ಹೈಟೆಕ್‌ ನಿರ್ವಹಣೆ: ನಗರದ ಕೊಡಿಗೇಹಳ್ಳಿ ರಸ್ತೆಯಲ್ಲಿನ ಸರ್ಕಾರಿ ಮೆಟ್ರಿಕ್‌ ನಂತರದ ಬಾಲಕಿಯರ ಹಾಗೂ ತಾಲ್ಲೂಕು ಪಂಚಾಯಿತಿ ಸಮೀಪದ ಮೆಟ್ರಿಕ್‌ ಪೂರ್ವ ಬಾಲಕಿಯರ ವಿದ್ಯಾರ್ಥಿ ನಿಲಯಗಳು ಖಾಸಗಿ ಶಾಲಾ, ಕಾಲೇಜುಗಳ ವಿದ್ಯಾರ್ಥಿ ನಿಲಯ ಮೀರಿಸುವಷ್ಟು ಹೈಟೆಕ್‌ ಸೌಲಭ್ಯ ಹಾಗೂ ನಿರ್ವಹಣೆ ಹೊಂದಿದೆ. 

24 ಗಂಟೆ ಸಿಸಿಟಿವಿ ಕಣ್ಗಾವಲು, ಬಿಸಿ ನೀರಿನ ಸೌಲಭ್ಯ, ಸ್ವಚ್ಛತೆ, ಸ್ಪರ್ಧಾತ್ಮಕ ಪರೀಕ್ಷೆ ತಯಾರಿಗೆ ಅಗತ್ಯ ಇರುವ ಗ್ರಂಥಾಲಯ, ಇಂಟರ್‌ನೆಟ್‌ ಸಂಪರ್ಕ ಇರುವ ಕಂಪ್ಯೂಟರ್‌, ಕಾಲೇಜು ವಿದ್ಯಾರ್ಥಿಗಳಿಗೆ ಸರ್ಕಾರ ನೀಡಿರುವ ಲ್ಯಾಪ್‌ಟಾಪ್‌ ಬಳಕೆಗೆ ಅಗತ್ಯ ವೈಫೈ ಸೌಲಭ್ಯ ಇಲ್ಲಿ ಲಭ್ಯ ಇದೆ.

ಶೇ 88ರಷ್ಟು ಫಲಿತಾಂಶ: ತಾಲ್ಲೂಕಿನ 6 ವಿದ್ಯಾರ್ಥಿ ನಿಲಯಗಳಲ್ಲಿ ವಿದ್ಯಾಭ್ಯಾಸ ಮಾಡುತ್ತಿರುವ ವಿದ್ಯಾರ್ಥಿಗಳು 2023-24ನೇ ಸಾಲಿನ ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ಶೇ 88.23ರಷ್ಟು ಫಲಿತಾಂಶ ಪಡೆಯುವ ಮೂಲಕ ಸಾಧನೆ ಮಾಡಿದ್ದಾರೆ.

ಮೂಲ ಸೌಲಭ್ಯ ಹಚ್ಚಾಗಬೇಕಿದೆ

ಸರ್ಕಾರ ಮಂಜೂರು ಮಾಡಿರುವ ಸ್ಥಾನಗಳಿಗಿಂತಲೂ ಹೆಚ್ಚಿನ ವಿದ್ಯಾರ್ಥಿಗಳು ದಾಖಲಾಗುತ್ತಿದ್ದಾರೆ. ವಿದ್ಯಾರ್ಥಿಗಳ ದಾಖಲಾತಿ ಸಂಖ್ಯೆಗೆ ಅನುಗುಣವಾಗಿ ಮೂಲ ಸೌಲಭ್ಯ ಹಾಗೂ ಖಾಲಿ ಇರುವ ಹುದ್ದೆಗಳ ಭರ್ತಿ ಆಗಬೇಕಿದೆ. ಸದ್ಯಕ್ಕೆ ಮತ್ತಷ್ಟು ಜನ ವಿದ್ಯಾರ್ಥಿಗಳು ದಾಖಲಾದರೂ ಸಹ ಸ್ಥಳಾವಕಾಶ ಇದೆ.

-ಎಚ್‌.ಜಿ.ಉಮಾಪತಿ, ಸಮಾಜ ಕಲ್ಯಾಣ ಇಲಾಖೆ ಸಹಾಯಕ ನಿರ್ದೇಶಕರು,ದೊಡ್ಡಬಳ್ಳಾಪುರ

ಶಿಸ್ತಿಗೆ ಪ್ರಥಮ ಆದ್ಯತೆ

ಮೊಬೈಲ್‌ ಬಳಕೆಗೆ ಮಿತಿ, ಸ್ವಚ್ಛತೆ, ಶಿಸ್ತು ಹಾಗೂ ಸಮಯ ವ್ಯರ್ಥ ಮಾಡದಂತೆ ನಿರಂತರ ಅಭ್ಯಾಸ ಮಾಡಿಸಲು ಹೆಚ್ಚಿನ ಒತ್ತು ನೀಡಲಾಗುತ್ತದೆ. ಬಿಡುವಿನ ಸಮಯ ಕಡ್ಡಾಯವಾಗಿ ಗ್ರಂಥಾಲಯದಲ್ಲಿ ಕಳೆಯುವಂತೆ ಮಾಡಲಾಗುತ್ತಿದೆ. ಇದರಿಂದ ವಿದ್ಯಾರ್ಥಿ ನಿಲಯಕ್ಕೆ ಭೇಟಿ ನೀಡುವ ಪೋಷಕರು ಸಹ ಖುಷಿ ಪಟ್ಟಿದ್ದಾರೆ.

-ರಾಧಾಮಣಿ, ವಾರ್ಡನ್‌, ಸರ್ಕಾರಿ ಮೆಟ್ರಿಕ್‌ ನಂತರದ ಬಾಲಕಿಯರ ವಿದ್ಯಾರ್ಥಿ ನಿಲಯ, ದೊಡ್ಡಬಳ್ಳಾಪುರ

ನಮ್ಮ ಕಡೆ ಒಳ್ಳೆ ಅಭಿಪ್ರಾಯ ಇದೆ

ಇಲ್ಲಿನ ಹಾಸ್ಟೆಲ್‌ನಲ್ಲಿ ವಿದ್ಯಾಭ್ಯಾಸ ಮಾಡಿ ಕೆಲವರು ಉನ್ನತ ಶಿಕ್ಷಣ ಪಡೆದಿದ್ದಾರೆ. ಇಲ್ಲಿನ ಹೈಟೆಕ್‌ ಸೌಲಭ್ಯ ಮಾಹಿತಿ ಪಡೆದ ಪೋಕರು ಮಕ್ಕಳನ್ನು ದಾಖಲು ಮಾಡಿಸಿದರು. ಇಲ್ಲಿಗೆ ಬರುವವರೆಗೂ ದೂರು ಅನ್ನುವ ಭಯ ಇತ್ತು. ಆದರೆ, ನಮ್ಮೂರಿನ ಕಡೆ ವಿದ್ಯಾರ್ಥಿ ನಿಲಯಗಳಿಗಿಂತಲು ಅತ್ಯುತ್ತಮ ನಿರ್ವಹಣೆ ಇಲ್ಲಿದೆ.

-ಪಿ.ಎಸ್‌.ಭಾಗ್ಯಶ್ರೀ, ಸರ್ಕಾರಿ ಪ್ರಥಮ ದರ್ಜೆ ಕಾಲೇಜು, ದೊಡ್ಡಬಳ್ಳಾಪುರ.

‘ಉತ್ತಮ ಶೈಕ್ಷಣಿಕ ವಾತಾವಣ’

ದಕ್ಷಿಣ ಕನ್ನಡ ಜಿಲ್ಲೆಯಷ್ಟೇ ಉತ್ತಮ ಸೌಲಭ್ಯದ ವಸತಿ, ಶಿಕ್ಷಣ ಇಲ್ಲಿಯೂ ಸಿಗುತ್ತಿದೆ. ಒಳ್ಳೆಯ ಶೈಕ್ಷಣಿಕ ವಾತಾವರಣ ಕಾರಣದಿಂದ ಸಾಮಾಜಿಕ ಜಾಲತಾಣದ ಮೂಲಕ ಪರಿಚಯವಾದ ಸ್ನೇಹಿತೆ ನೀಡಿದ ಉತ್ತಮ ಅಭಿಪ್ರಾಯ ಮೇರೆಗೆ ಇಲ್ಲಿನ ವಿದ್ಯಾರ್ಥಿನಿಲಯ, ಕಾಲೇಜು ಆಯ್ಕೆ ಮಾಡಿಕೊಂಡೆ.

-ಭುವನ, ಸರ್ಕಾರಿ ಪ್ರಥಮ ದರ್ಜೆ ಕಾಲೇಜ್‌,ದೊಡ್ಡಬಳ್ಳಾಪುರ. ಉಡುಪಿ ಜಿಲ್ಲೆ,ಕುಂದಾಪುರ.

ವಿದ್ಯಾರ್ಥಿ ನಿಲಯದಲ್ಲಿನ ಗ್ರಂಥಾಲಯ
 ಕಂಪ್ಯೂಟರ್‌ ಬಳಕೆಗೆ ಪ್ರತ್ಯೇಕ ಕೊಠಡಿ
ಬಾಲಕಿಯರ ವಿದ್ಯಾರ್ಥಿ ನಿಲಯದ ಊಟದ ಹಾಲ್‌
ಪಿ.ಎಸ್‌.ಭಾಗ್ಯಶ್ರೀ

ಮೆಟ್ರಿಕ್‌ ಪೂರ್ವ ವಿದ್ಯಾರ್ಥಿಗಳ ಸಂಖ್ಯೆ;575

ಮೆಟ್ರಿಕ್‌ ನಂತರದ ವಿದ್ಯಾರ್ಥಿಗಳ ಸಂಖ್ಯೆ;221

ಬಾಲಕಿರು;234

ಬಾಲಕರು;562

ಮೆಟ್ರಿಕ್‌ ಪೂರ್ವ ವಿದ್ಯಾರ್ಥಿ ನಿಲಯ;6

ಮೆಟ್ರಿಕ್‌ ನಂತರದ ವಿದ್ಯಾರ್ಥಿ ನಿಲಯ;2

ಬಾಕಿಯರ ವಿದ್ಯಾರ್ಥಿ ನಿಲಯ;2

ಬಾಲಕರ ವಿದ್ಯಾರ್ಥಿ ನಿಲಯ;6

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.