ದೊಡ್ಡಬಳ್ಳಾಪುರ: ಬಾಯಾರಿದವರಿಗೆ ಯಾವ ನೀರಾದರೂ ಸರಿ ಎನ್ನುವ ರೈತರ ಅಸಹಾಯ ಕತೆಯನ್ನು ಸರ್ಕಾರಗಳು ದುರುಪಯೋಗ ಮಾಡಿಕೊಂಡಿದ್ದರ ಫಲವಾಗಿ ಚಿಕ್ಕಬಳ್ಳಾಪುರ, ಕೋಲಾರ ಹಾಗೂ ದೇವನಹಳ್ಳಿ ತಾಲ್ಲೂಕಿನ ಕೆರೆಗಳಿಗೆ ಬೆಂಗಳೂರಿನ ಕೊಳಚೆ ನೀರು ತುಂಬಿಸಲಾಗಿದೆ. ಇದರಿಂದ ಅಲ್ಲಿನ ಸ್ಥಳೀಯರು ಆರೋಗ್ಯದ ಮೇಲೆ ಯಾವ ಪರಿಣಾಮ ಬೀರುತ್ತದೊ ಅನ್ನುವ ಆತಂಕದಲ್ಲಿ ಬದುಕು ನಡೆಸುವಂತಾಗಿದೆ. ಈ ಸ್ಥಿತಿ ನಮ್ಮ ತಾಲ್ಲೂಕಿನ ಜನರಿಗೂ ಬಾರದಿರಲಿ ಎನ್ನುವ ಒಕ್ಕೊರಳ ಆಗ್ರಹ ಸ್ಥಳೀಯ ರೈತರಿಂದ ಕೇಳಿ ಬಂದಿದೆ.
ಕೋಲಾರ, ಚಿಕ್ಕಬಳ್ಳಾಪುರ ಹಾಗೂ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಹೊಸಕೋಟೆ, ದೇವನಹಳ್ಳಿ ತಾಲ್ಲೂಕಿನ ಕೆಲವು ಕೆರೆಗಳಿಗೆ ಕೆ.ಸಿ.ವ್ಯಾಲಿ, ಎಚ್.ಎನ್.ವ್ಯಾಲಿ ಯೋಜನೆಗಳ ಮೂಲಕ ಬೆಂಗಳೂರಿನ ಕೊಳಚೆ ನೀರನ್ನು ಶುದ್ದೀಕರಿಸಿ ಪೈಪ್‌ಲೈನ್‌ಗಳ ಮೂಲಕ ಕೆರೆಗಳಿಗೆ ತುಂಬಿಸಲಾಗುತ್ತಿದೆ.
3ನೇ ಹಂತದ ಯೋಜನೆಯಲ್ಲಿ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೊಡ್ಡಬಳ್ಳಾಪುರ, ನೆಲಮಂಗಲ ತಾಲ್ಲೂಕುಗಳ ಕೆರೆಗಳಿಗೆ ತುಂಬಿಸುವ ಸಿದ್ಧತೆಗಳು ನಡೆಯುತ್ತಿವೆ.
ತೀವ್ರಗತಿಯಲ್ಲಿ ಬೆಳೆಯುತ್ತಿರುವ ಕೈಗಾರಿಕೆ ಹಾಗೂ ಇದರಿಂದ ಬೆಳೆಯುತ್ತಿರುವ ಜನಸಂಖ್ಯೆಗೆ ನೀರಿನ ತುರ್ತು ಅಗತ್ಯ ಇದೆ. ಎತ್ತಿನಹೊಳೆ, ಶುದ್ದೀಕರಿಸಿದ ತ್ಯಾಜ್ಯ ನೀರು ಸೇರಿದಂತೆ ಎಲ್ಲಾ ಮೂಲಗಳಿಂದಲೂ ಬೆಂಗಳೂರು ಸುತ್ತಮುತ್ತ ನಡೆಯುತ್ತಿರುವ ಕೃಷಿ, ವಾಣಿಜ್ಯ ಚಟುವಟಿಕೆಗಳಿ ಹರಿದು ಬಂದರೂ ಕಡಿಮೆ ಆಗುತ್ತದೆ.
‘ಆದರೆ ನೀರು ತರಲು ಯೋಜನೆ ರೂಪಿಸುವ ವೇಳೆ ಕನಿಷ್ಠ ಪ್ರಮಾಣದಲ್ಲಾದರೂ ಪರಿಸರಕ್ಕೆ ಮತ್ತು ಅಂತರ್ಜಲಕ್ಕೆ ಆಗುವ ಹಾನಿ ತಪ್ಪಿಸುವ ಬಗ್ಗೆ ಕಾಳಜಿ ವಹಿಸಬೇಕಿದೆ ಎನ್ನುವುದು ರೈತರ ಒಡಲ ದನಿ. ಈ ಕಾಳಜಿಯ ಹಾಗೂ ಮುಂದಾಲೋಚನೆ ಇಲ್ಲದೆ ರೂಪಿಸಲಾಗಿರುವ ದೊಡ್ಡಬಳ್ಳಾಪುರ ನಗರಸಭೆಯ ಒಳಚರಂಡಿ ನೀರಿನ ಶುದ್ಧಿಕರಣ ಸಂಪೂರ್ಣವಾಗಿ ವಿಫಲವಾಗಿದ್ದು, ಚಿಕ್ಕತುಮಕೂರು ಕೆರೆಗೆ ಕೊಚ್ಚೆ ನೀರು ತುಂಬಿಕೊಳ್ಳುತ್ತಿದೆ’.
‘ಇದರಿಂದ ಈ ಭಾಗದ ಜನ ನರಕಯಾತನೆ ಅನುಭವಿಸುವಂತಾಗಿದೆ. ಇಂತಹದ್ದೇ ಮತ್ತೊಂದು ಅವಾಂತರ ಉಂಟಾಗದಂತೆ ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳು ಎಚ್ಚರ ವಹಿಸಬೇಕಿದೆ’ ಎನ್ನುತ್ತಾರೆ ರಾಜ್ಯ ರೈತ ಸಂಘದ ತಾಲ್ಲೂಕು ಘಟಕದ ಅಧ್ಯಕ್ಷ ಹನುಮೇಗೌಡ.
ಎಚ್.ಎನ್.ವ್ಯಾಲಿ 3ನೇ ಹಂತದ ಯೋಜನೆಯಲ್ಲಿ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೊಡ್ಡಬಳ್ಳಾಪುರ, ನೆಲಮಂಗಲ ತಾಲ್ಲೂಕುಗಳ ಕೆರೆಗಳಿಗೆ ತುಂಬಿಸುವ ಕುರಿತು ಸ್ಥಳೀಯರು ತಮ್ಮ ಮನದಾಳವನ್ನು ಹಂಚಿಕೊಂಡಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.