ಆನೇಕಲ್: ಗುಂಡಿಯೊಳಗೆ ರಸ್ತೆ ಇದೆಯೋ... ರಸ್ತೆಯಲ್ಲಿ ಗುಂಡಿ ಇದೆಯೋ...
ಇಂಥದೊಂದು ಪ್ರಶ್ನೆ ದೊಮ್ಮಸಂದ್ರ–ಬೆಂಗಳೂರು ರಸ್ತೆಯಲ್ಲಿ ಓಡಾಡುವ ಪ್ರಯಾಣಿಕರನ್ನು ಸದಾ ಕಾಡುತ್ತಿದೆ.
ವೈಜ್ಞಾನಿಕ ಹಾಗೂ ಗುಂಡಿಗಳಿಂದ ತುಂಬಿರುವ ರಸ್ತೆಗಳು ಈಗಿನ ಮಳೆಗೆ ಹೊಳೆಯಂತೆ ಆಗಿದ್ದು, ವಾಹನ ಸವಾರರು ಪರದಾಡುವಂತಾಗಿದೆ.
ತಾಲ್ಲೂಕಿನ ಸರ್ಜಾಪುರ ಹೋಬಳಿಯ ದೊಮ್ಮಸಂದ್ರದ ಸುತ್ತಮುತ್ತಲಿನ ರಸ್ತೆಗಳು ಸಂಪೂರ್ಣ ಹದಗೆಟ್ಟಿದ್ದು, ರಸ್ತೆ ಅವ್ಯವಸ್ಥೆಯಿಂದ ಕೂಡಿದೆ. ಸಾರ್ವಜನಿಕರು ಪ್ರತಿನಿತ್ಯ ಪರದಾಡುವಂತಾಗಿದೆ. ಭಾರಿ ಮಳೆಯಿಂದಾಗಿ ರಸ್ತೆ ಗುಂಡಿಗಳಲ್ಲಿ ನೀರು ತುಂಬಿದ್ದು, ರಸ್ತೆ ಹುಡುಕಿ ದ್ವಿಚಕ್ರ ವಾಹನಗಳಲ್ಲಿ ಸಂಚರಿಸಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ.
ಆನೇಕಲ್ ತಾಲ್ಲೂಕಿನ ಪ್ರಮುಖ ನಗರಗಳಲ್ಲಿ ದೊಮ್ಮಸಂದ್ರ ಸಹ ಒಂದಾಗಿದೆ. ಬೆಂಗಳೂರು ನಗರಕ್ಕೆ ಸಮೀಪದಲ್ಲಿದೆ. ಐಟಿ ಹಬ್ ಆಗಿರುವ ಮಾರತ್ತಹಳ್ಳಿ, ಬೆಳ್ಳಂದೂರು, ಎಲೆಕ್ಟ್ರಾನಿಕ್‌ಸಿಟಿಗಳಿಗೆ ಸಮೀಪದಲ್ಲಿದೆ. ಹೀಗಾಗಿ ನೂರಾರು ಮಂದಿ ಐಟಿ ಬಿಟಿ ಉದ್ಯೋಗಿಗಳು ದೊಮ್ಮಸಂದ್ರ ಸುತ್ತಮುತ್ತಲಿನ ಪ್ರದೇಶಗಳಲ್ಲಿ ವಾಸವಾಗಿದ್ದಾರೆ. ಇವರೆಲ್ಲರೂ ಇದೇ ರಸ್ತೆಯಲ್ಲಿ ಸಂಚರಿಸುತ್ತಾರೆ. ದೊಮ್ಮಸಂದ್ರ-ಬೆಂಗಳೂರು ರಸ್ತೆ ಸಂಪೂರ್ಣ ಹದಗೆಟ್ಟಿರುವುದರಿಂದ ಪ್ರತಿನಿತ್ಯ ಈ ರಸ್ತೆಯಲ್ಲಿ ಸಂಚರಿಸುವವರು ಹಿಡಿ ಶಾಪ ಹಾಕುತ್ತಿದ್ದಾರೆ.
ದೊಮ್ಮಸಂದ್ರ ಸುತ್ತಮುತ್ತಲಿನ ಪ್ರದೇಶದಲ್ಲಿ ಹಲವಾರು ಪ್ರತಿಷ್ಠಿತ ಶಾಲಾ-ಕಾಲೇಜುಗಳು, ಅಪಾರ್ಟ್‌ಮೆಂಟ್‌ಗಳಿವೆ. ಆದರೆ ಹದಗೆಟ್ಟ ರಸ್ತೆಯಲ್ಲಿ ಪ್ರತಿದಿನ ವಿದ್ಯಾರ್ಥಿಗಳು, ಯುವಕರು ಮತ್ತು ಕಾರ್ಮಿಕರು ರಸ್ತೆಯಲ್ಲಿ ಸಂಚರಿಸಲು ಪರದಾಡುತ್ತಿರುವ ಪರಿಸ್ಥಿತಿ ನಿರ್ಮಾಣವಾಗಿದೆ.
ಮಳೆ ನೀರು ರಸ್ತೆಯಲ್ಲಿ ಹರಿಯುತ್ತಿರುವುದರಿಂದ ದೊಮ್ಮಸಂದ್ರ-ಬೆಂಗಳೂರು ರಸ್ತೆಯು ಕೆರೆಯಂತಾಗಿದ್ದು ದ್ವಿಚಕ್ರ ವಾಹನ ಸವಾರರು ನೀರು ಮತ್ತು ರಸ್ತೆಗುಂಡಿಗಳ ನಡುವೆ ವಾಹನ ಚಾಲನೆ ಮಾಡಬೇಕಾದ ದುಸ್ಥಿತಿ ನಿರ್ಮಾಣವಾಗಿದೆ.
ದೊಮ್ಮಸಂದ್ರದಿಂದ ಬೆಂಗಳೂರಿಗೆ ಸಂಪರ್ಕ ಕಲ್ಪಿಸುವ ರಸ್ತೆಯಲ್ಲಿ ಮೂರು ಕಿ.ಮೀ.ಗೂ ಹೆಚ್ಚು ದೂರದ ರಸ್ತೆಯನ್ನು ಗುಂಡಿಗಳು ಆವರಿಸಿದೆ. ದೊಮ್ಮಸಂದ್ರ, ಯಮರೆ ಸೇರಿದಂತೆ ವಿವಿಧೆಡೆ ರಸ್ತೆ ಗುಂಡಿಗಳಿಂದಾಗಿ ಸಾರ್ವಜನಿಕರು ಪರದಾಡುವಂತಾಗಿದೆ.
ದೊಮ್ಮಸಂದ್ರ-ಬೆಂಗಳೂರು ರಸ್ತೆಯು ದ್ವಿಪಥದ ರಸ್ತೆಯಾಗಿದೆ. ಕಳೆದ ಮೂರ್ನಾಲ್ಕು ವರ್ಷಗಳಿಂದ ರಸ್ತೆಯಲ್ಲಿ ಹಲವಾರು ರಸ್ತೆ ಗುಂಡಿಗಳು ಬಿದ್ದಿವೆ. ಆದರೆ ಈ ಬಗ್ಗೆ ಸಂಬಂಧಪಟ್ಟ ಅಧಿಕಾರಿಗಳು ಗಮನವಹಿಸಿಲ್ಲ. ರಸ್ತೆ ಗುಂಡಿಗಳನ್ನು ಮುಚ್ಚಬೇಕು ಇಲ್ಲವಾದಲ್ಲಿ ಇನ್ನಷ್ಟು ಸಮಸ್ಯೆ ಬಿಗಡಾಯಿಸಲಿದೆ ಎಂದು ಸ್ಥಳೀಯರಾದ ಮುನಿಯಪ್ಪ ತಿಳಿಸಿದರು.
ಬೆಂಗಳೂರು ಸಂಪರ್ಕ ರಸ್ತೆ: ಬೆಂಗಳೂರು ನಗರಕ್ಕೆ ಸಂಪರ್ಕ ಕಲ್ಪಿಸುವ ರಸ್ತೆಗಳು ಭಾರಿ ಹದಗೆಟ್ಟಿದ್ದು, ಸಂಚಾರಕ್ಕೆ ಸಂಚಾಕಾರ ತರುವಂತೆ ಇದೆ. ಬೆಂಗಳೂರಿಗೆ ಸಂಪರ್ಕ ಕಲ್ಪಿಸುವ ಈ ರಸ್ತೆಯನ್ನು ಅಭಿವೃದ್ಧಿ ಪಡಿಸಬೇಕು. ಇದರಿಂದಾಗಿ ಪ್ರತಿನಿತ್ಯ ನೂರಾರು ಮಂದಿ ಸಾರ್ವಜನಿಕರ ಸುಗಮ ಸಂಚಾರಕ್ಕೆ ಅನುವು ಮಾಡಿಕೊಡಬೇಕು ಎಂಬುದು ದೊಮ್ಮಸಂದ್ರ ಸುತ್ತಮುತ್ತಲಿನ ಗ್ರಾಮಗಳ ನಿವಾಸಿಗಳ ಒತ್ತಾಯ.
ದೊಮ್ಮಸಂದ್ರ ರಸ್ತೆಯಲ್ಲಿ ಹೆಚ್ಚಿನ ರಸ್ತೆ ಗುಂಡಿಗಳಿರುವುದರಿಂದ ದ್ವಿಚಕ್ರ ವಾಹನದಲ್ಲಿ ಸಂಚರಿಸುವುದು ದೊಡ್ಡ ಸರ್ಕಸ್ ಸವಾಲಾಗಿದೆ. ಗುಂಡಿ ಮುಚ್ಚಿಸಿ ಇಲ್ಲ ಹೊಸ ರಸ್ತೆ ನಿರ್ಮಿಸಿಮೋನಿಷ್ ದೊಮ್ಮಸಂದ್ರ ನಿವಾಸಿ
ಇತ್ತೀಚಿನ ದಿನಗಳಲ್ಲಿ ಭಾರಿ ಮಳೆಯಾಗಿರುವುದರಿಂದ ರಸ್ತೆ ಗುಂಡಿಗಳು ಹೆಚ್ಚಾಗಿವೆ. ರಸ್ತೆಗಳ ಅಭಿವೃದ್ಧಿಗೆ ಹೆಚ್ಚಿನ ಅನುದಾನ ನೀಡುವಂತೆ ಸರ್ಕಾರಕ್ಕೆ ಮನವಿ ಸಲ್ಲಿಸಲಾಗಿದೆ. ರಸ್ತೆ ಗುಂಡಿಗಳನ್ನು ಮುಚ್ಚಿಸಲು ಲೋಕೋಪಯೋಗಿ ಇಲಾಖೆಗೆ ಸೂಚಿಸಲಾಗುವುದುಬಿ.ಶಿವಣ್ಣ ಆನೇಕಲ್ ಶಾಸಕ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.