ಆನೇಕಲ್:ತಾಲ್ಲೂಕಿನ ಅತ್ತಿಬೆಲೆ ಸಮೀಪದ ಆಕ್ಸ್‌ಫರ್ಡ್ ವೈದ್ಯಕೀಯ ಮಹಾವಿದ್ಯಾಲಯ ಮತ್ತು ಸಂಶೋಧನಾ ಕೇಂದ್ರದಲ್ಲಿ ನಡೆದ ಕಾರ್ಯಕ್ರಮದಲ್ಲಿ ನಾರಾಯಣ ಹೆಲ್ತ್ ಸಿಟಿಯ ಮುಖ್ಯಸ್ಥ ಡಾ.ದೇವಿ ಶೆಟ್ಟಿವಿದ್ಯಾರ್ಥಿಗಳಿಗೆ ಪದವಿ ಪ್ರದಾನ ಮಾಡಿದರು.
ಬಳಿಕ ಮಾತನಾಡಿದ ಅವರು, ವೈದ್ಯಕೀಯ ಪದವಿಯ ಜೊತೆಗೆ ಆಧುನಿಕ ತಂತ್ರಜ್ಞಾನದ ಅರಿವನ್ನು ವಿದ್ಯಾರ್ಥಿಗಳು ಹೊಂದಬೇಕು. ಮುಂಬರುವ ದಿನಗಳಲ್ಲಿ ರೋಬೊಟಿಕ್ಸ್ ತಂತ್ರಜ್ಞಾನದಿಂದ ಶಸ್ತ್ರಚಿಕಿತ್ಸೆ ಮಾಡುವಂತಾಗುತ್ತದೆ. ಇದರಿಂದ ನಿಖರವಾದ ಮತ್ತು ಗುಣಮಟ್ಟದ ವೈದ್ಯಕೀಯ ಸೌಲಭ್ಯ ದೊರೆಯುತ್ತದೆ ಎಂದು ತಿಳಿಸಿದರು.
ತಂತ್ರಜ್ಞಾನ ಮತ್ತು ಪದವಿಯ ಜೊತೆಗೆ ವೈದ್ಯರಲ್ಲಿ ರೋಗಿಗಳ ಬಗ್ಗೆ ಕಾಳಜಿ, ಉತ್ತಮ ಸಂವಹನ, ನಗುಮುಖ ಅವಶ್ಯಕ. ರೋಗಿಗಳು ವೈದ್ಯರಲ್ಲಿ ದೇವರನ್ನು ಕಾಣುತ್ತಾರೆ. ಹಾಗಾಗಿ, ಗುಣಮಟ್ಟದ ಚಿಕಿತ್ಸೆ ನೀಡುವ ಮೂಲಕ ಅವರ ನಂಬಿಕೆ ಉಳಿಸಬೇಕು ಎಂದು ಸಲಹೆ ನೀಡಿದರು.
ವಿಶ್ವವಿದ್ಯಾಲಯ ಮತ್ತು ಸಂಶೋಧನಾ ಕೇಂದ್ರದ ಅಧ್ಯಕ್ಷ ಡಾ.ಎಸ್.ಎನ್.ವಿ.ಎಲ್. ನರಸಿಂಹರಾಜು ಮಾತನಾಡಿ, ಗ್ರಾಮೀಣ ಭಾಗದ ಜನರಿಗೆ ಉತ್ತಮ ವೈದ್ಯಕೀಯ ಸೌಲಭ್ಯ ನೀಡುವ ನಿಟ್ಟಿನಲ್ಲಿ ಆಕ್ಸ್‌ಫರ್ಡ್ ಕಾಲೇಜು ಮತ್ತು ಆಸ್ಪತ್ರೆ ವಿವಿಧೆಡೆ ವೈದ್ಯಕೀಯ ಶಿಬಿರಗಳನ್ನು ಆಯೋಜನೆ ಮಾಡಿದೆ. ವಿದ್ಯಾರ್ಥಿಗಳು ಸೇವಾ ಮನೋಭಾವನೆಯಿಂದ ಕೆಲಸ ಮಾಡುವ ಮೂಲಕ ವೃತ್ತಿಪರತೆ ಹೆಚ್ಚಿಸಿಕೊಳ್ಳಬೇಕು ಎಂದರು.
ವೈದ್ಯಕೀಯ ಸೇವೆಗಳ ನಿವೃತ್ತ ನಿರ್ದೇಶಕ ಡಾ.ಬಿ.ಡಿ. ಅಥಣಿ, ಕಾಲೇಜಿನ ನಿರ್ದೇಶಕರಾದ ವೈ. ಶ್ರೀನಿವಾಸುಲು, ಪ್ರಾಚಾರ್ಯ ಡಾ.ಎಂ.ಬಿ. ಸಾನಿಕೊಪ್ಪ, ವೈದ್ಯಕೀಯ ಅಧೀಕ್ಷಕ ಡಾ.ಜಿ.ಬಿ. ಮೋಹನ್ ಇದ್ದರು.
ವಿದ್ಯಾರ್ಥಿಗಳಾದ ಅಶ್ಮಿತಾ ಮೆನನ್, ಜೊನ್ನ ಪ್ರಕಾಶ್ ಈಡಿಕುಲ, ಅಭಿಪ್ರಿಯ ಶಂಕರ್, ರೆಯನ್ ಸಾಮ್, ಅಲಂಕೃತ ಅಗರ್ವಾಲ್, ಆರ್. ಯಾಮಿನಿ, ಫರಿಹಾ ಫಾತಿಮಾ ಮತ್ತು ಲಿಖಿತಾ ವಿವಿಧ ವಿಭಾಗದಲ್ಲಿ ಚಿನ್ನದ ಪದಕಕ್ಕೆ ಭಾಜನರಾಗಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.