ADVERTISEMENT

ಚರಂಡಿಯಲ್ಲಿ ತುಂಬಿಹೋದ ಕಸಕಡ್ಡಿ, ಅನೈರ್ಮಲ್ಯ

ಹಾರೋಹಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಬುಳ್ಳಹಳ್ಳಿ ಗ್ರಾಮ

​ಪ್ರಜಾವಾಣಿ ವಾರ್ತೆ
Published 8 ಅಕ್ಟೋಬರ್ 2019, 13:27 IST
Last Updated 8 ಅಕ್ಟೋಬರ್ 2019, 13:27 IST
ವಿಜಯಪುರ ಹೋಬಳಿ ಬುಳ್ಳಹಳ್ಳಿ ಗ್ರಾಮದಲ್ಲಿ ಚರಂಡಿಯಲ್ಲಿ ಕಸಕಡ್ಡಿಗಳು ತುಂಬಿಕೊಂಡಿರುವುದು 
ವಿಜಯಪುರ ಹೋಬಳಿ ಬುಳ್ಳಹಳ್ಳಿ ಗ್ರಾಮದಲ್ಲಿ ಚರಂಡಿಯಲ್ಲಿ ಕಸಕಡ್ಡಿಗಳು ತುಂಬಿಕೊಂಡಿರುವುದು    

ವಿಜಯಪುರ: ‘ಚರಂಡಿಗಳಲ್ಲಿ ಕಸಕಡ್ಡಿಗಳು ತುಂಬಿಹೋಗಿವೆ. ಮಳೆಯ ನೀರು ಸರಾಗವಾಗಿ ಹರಿಯಲಿಕ್ಕೆ ಸಾಧ್ಯವಾಗದೆ ರಾತ್ರಿಯಲ್ಲಿ ಮನೆಗಳಿಗೆ ನೀರು ನುಗ್ಗಿದೆ. ಸೊಳ್ಳೆಗಳಿಗೆ ಉಗಮಸ್ಥಾನವಾಗಿ ಮಾರ್ಪಟ್ಟಿರುವ ಚರಂಡಿಗಳು ಸ್ವಚ್ಛಗೊಳಿಸುವಂತೆ ಎಷ್ಟೇ ಮನವಿ ಮಾಡಿದರೂ ಪ್ರಯೋಜನವಾಗಿಲ್ಲ ಅನೈರ್ಮಲ್ಯ ಕಾಡುತ್ತಿದೆ’ ಎಂದು ಗ್ರಾಮ ಪಂಚಾಯಿತಿ ಸದಸ್ಯ ರಾಜಪ್ಪ ಆರೋಪಿಸಿದ್ದಾರೆ.

ಹೋಬಳಿಯ ಹಾರೋಹಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಬುಳ್ಳಹಳ್ಳಿ ಗ್ರಾಮದಲ್ಲಿ ಕೊಳಚೆ ನೀರಿನಿಂದ ತುಂಬಿಕೊಂಡಿರುವ ಚರಂಡಿಗಳು, ನೀರು ಹಿಡಿಯುವ ಸಿಸ್ಟನ್‌ಗಳ ಬಳಿಯಲ್ಲಿ ನಿಂತಿರುವ ನೀರಿನಿಂದ ಜನರು ಬೇಸರಪಟ್ಟುಕೊಳ್ಳುವಂತಹ ಸ್ಥಿತಿ ನಿರ್ಮಾಣವಾಗಿದೆ ಎಂದರು.

‘ನಾವು ಜನರಿಂದ ಆಯ್ಕೆಯಾಗಿರುವ ಕಾರಣಕ್ಕೆ ಜನರು ಸ್ವಚ್ಛತೆಯ ಬಗ್ಗೆ ನಮ್ಮನ್ನು ರಸ್ತೆಯಲ್ಲಿ ನಿಲ್ಲಿಸಿ ಕೇಳುವ ಸ್ಥಿತಿ ನಿರ್ಮಾಣವಾಗಿದೆ. ಈ ಬಗ್ಗೆ ಅಧಿಕಾರಿಗಳ ಗಮನಕ್ಕೆ ತಂದರೂ ಪ್ರಯೋಜನವಾಗುತ್ತಿಲ್ಲ. ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಸ್ಪಂದಿಸುತ್ತಿಲ್ಲ' ಎಂದು ಆರೋಪಿಸಿದರು.

ADVERTISEMENT

ಗ್ರಾಮ ಪಂಚಾಯಿತಿ ಉಪಾಧ್ಯಕ್ಷ ಎಸ್.ಹರೀಶ್ ಮಾತನಾಡಿ, ‘ಹಳ್ಳಿಗಳಲ್ಲಿ ಜನರು, ನಮ್ಮ ಮೇಲೆ ನಂಬಿಕೆ ಇಟ್ಟು ಆಯ್ಕೆ ಮಾಡಿದ್ದಾರೆ. ಆದರೆ ಜನರ ನಿರೀಕ್ಷೆಗೆ ತಕ್ಕಂತೆ ನಾವು ಕೆಲಸ ಮಾಡಲಿಕ್ಕೆ ಸಾಧ್ಯವಾಗುತ್ತಿಲ್ಲ. ಚರಂಡಿಗಳ ಸ್ವಚ್ಛತೆಗಾಗಿ 14 ನೇ ಹಣಕಾಸು ಯೋಜನೆಯಲ್ಲಿ ಕ್ರಿಯಾಯೋಜನೆ ತಯಾರಿಸಿ ಎರಡು ತಿಂಗಳಾಗಿದೆ. ಇದುವರೆಗೂ ಅದಕ್ಕೆ ಅನುಮೋದನೆ ಮಾಡಿಸಿಕೊಂಡು ಬರಲಿಕ್ಕೆ ಸಾಧ್ಯವಾಗಿಲ್ಲ’ ಎಂದರು.

‘ಚರಂಡಿಗಳ ಸ್ವಚ್ಛತೆಯೂ ಇಲ್ಲ, ಬೀದಿದೀಪಗಳ ನಿರ್ವಹಣೆ ಮಾಡಲಿಕ್ಕೆ ಆಗುತ್ತಿಲ್ಲ. ಸರ್ಕಾರದಿಂದ ಅನುದಾನ ಬಿಡುಗಡೆಯಾದರೂ ಅದನ್ನು ಸಮರ್ಪಕವಾಗಿ ಸದುಪಯೋಗ ಮಾಡಿಕೊಳ್ಳಲು ಸಾಧ್ಯವಾಗುತ್ತಿಲ್ಲ’ ಎಂದು ಬೇಸರ ವ್ಯಕ್ತಪಡಿಸಿದರು.

ಚಿಕ್ಕನಹಳ್ಳಿ ಗ್ರಾಮ ಪಂಚಾಯಿತಿ ಸದಸ್ಯ ಸುಬ್ರಮಣಿ ಮಾತನಾಡಿ, ‘3 ತಿಂಗಳಿನಿಂದ ಅನುದಾನ ಬಿಡುಗಡೆಯಾಗುತ್ತಿದೆ. ನರೇಗಾ ಯೋಜನೆಯಡಿ ಅಭಿವೃದ್ಧಿ ಕೆಲಸಗಳು ಮಾಡಲಿಕ್ಕೆ ಅನುಕೂಲವಾಗಿದ್ದು, ನಮಗೆ ಲಭ್ಯವಿರುವ ಅನುದಾನದಲ್ಲಿ ಕುಡಿಯುವ ನೀರಿಗೆ ಆದ್ಯತೆ ನೀಡಿದ್ದೇವೆ. ನಮ್ಮ ಹಳ್ಳಿಯಲ್ಲಿ ಚರಂಡಿಗಳ ಸ್ವಚ್ಛತೆಯನ್ನೂ ಮಾಡಿಕೊಂಡಿದ್ದೇವೆ. ಜನರಿಂದ ತೆರಿಗೆ ಹಣ ವಸೂಲಿಯಾಗುತ್ತಿಲ್ಲ. ಆದ್ದರಿಂದ ಸ್ವಲ್ಪಮಟ್ಟಿಗೆ ಕೊರತೆ ಇದೆ’ ಎಂದರು.

ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ವೆಂಕಟೇಶ್ ಮಾತನಾಡಿ, ‘ನಮ್ಮ ಪಂಚಾಯಿತಿ ವ್ಯಾಪ್ತಿಯ ಹಳ್ಳಿಗಳ ಅಭಿವೃದ್ಧಿಗಾಗಿ 14 ನೇ ಹಣಕಾಸು ಯೋಜನೆಯಡಿ ಕ್ರಿಯಾಯೋಜನೆ ತಯಾರಿಸಿಕೊಂಡಿದ್ದೇವೆ. ಅದನ್ನು ಅನುಮೋದನೆಗೆ ಕಳುಹಿಸಿಕೊಡಬೇಕು. ಜನರಿಂದ ಸರಿಯಾಗಿ ತೆರಿಗೆ ಹಣವೂ ವಸೂಲಿಯಾಗುತ್ತಿಲ್ಲ. ಅಲ್ಪ ಸ್ವಲ್ಪ ವಸೂಲಿಯಾದರೂ ಸಿಬ್ಬಂದಿ ವೇತನ, ಬೀದಿ ದೀಪಗಳ ನಿರ್ವಹಣೆಗೆ ಸಾಕಾಗುತ್ತಿಲ್ಲ. ಲಭ್ಯವಿರುವ ಅನುದಾನದಲ್ಲಿ ಸ್ವಚ್ಛತೆಗೆ ಆದ್ಯತೆ ನೀಡಲಾಗುತ್ತಿದೆ’ ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.