ADVERTISEMENT

ಶಾಲಾ ದಾಖಲಾತಿ ಕೊರತೆ ನಿಗಿಸಲು ಶಾಲಾ ಗುಟ್ಟಮಟ್ಟ ಹೆಚ್ಚಬೇಕಿದೆ

​ಪ್ರಜಾವಾಣಿ ವಾರ್ತೆ
Published 29 ಜೂನ್ 2024, 16:19 IST
Last Updated 29 ಜೂನ್ 2024, 16:19 IST

ದೇವನಹಳ್ಳಿ/ದೊಡ್ಡಬಳ್ಳಾಪುರ: ಜಿಲ್ಲೆಯಾದ್ಯಂತ ಸಾಕಷ್ಟು ಸರ್ಕಾರಿ ಶಾಲೆಗಳು ಸುಸರ್ಜಿತವಾಗಿವೆ.ಇನ್ನೂ ಕೆಲವು ಶಾಲೆಗಳಿಗೆ ದುರಸ್ತಿ ಭಾಗ್ಯ ಬೇಕಾಗಿದ್ದು, ಹಳೆ ಕಟ್ಟಡವನ್ನು ನವೀಕರಿಸುವ ಜತೆಗೆ ಗುಣಮಟ್ಟದ ಶಿಕ್ಷಣಕ್ಕೆ ಪೂರಕವಾದ ವಾತಾವರಣ ಸೃಷ್ಟಿಸುವ ಅಗತ್ಯತೆ ಇದೆ ಎನ್ನುವುದು ಸಾರ್ವಜನಿಕರ ಆಗ್ರಹವಾಗಿದೆ.

‘ಪ್ರಜಾವಾಣಿ ದಿನಪತ್ರಿಕೆಯಲ್ಲಿ ಪ್ರಕಟವಾದ ‘ಶಿಥಿಲ ಶಾಲೆ’ ಸರಣಿ ಸರ್ಕಾರದ ಕಣ್ಣು ತೆರೆಸುವಂತಿದೆ. ಹಾಗೆಯೇ ಸರ್ಕಾರಿ ಶಾಲೆಗಳನ್ನು ಉಳಿಸಿಕೊಳ್ಳಲು ಇರುವ ತುರ್ತು ಅಗತ್ಯಗಳನ್ನು ನೆನಪಿಸಿದೆ. ಈ ಸರಣಿ ವರದಿಗಳಿಂದಲಾದರು ದುಸ್ತಿತಿಯಲ್ಲಿ ಇರುವ ಶಾಲಾ ಕಟ್ಟಡಗಳನ್ನು ಸುಸ್ತಿಗೆ ತರುವ ಕೆಲಸವನ್ನು ಆದ್ಯತೆಯ ಮೇರೆಗೆ ಮಾಡಲೇಬೇಕಿದೆ’ ಎನ್ನುತ್ತಾರೆ ಹಿರಿಯ ಕನ್ನಡಪರ ಹೋರಾಟಗಾರ ಜಿ.ಸತ್ಯನಾರಾಯಣ.

ಬೆಂಗಳೂರು ಗ್ರಾಮಾಂತರ ಜಿಲ್ಲೆಯಲ್ಲಿರುವ ಖಾಸಗಿ ಕಂಪನಿಗಳು ಸಿಎಸ್‌ಆರ್‌ ನಿಧಿಯಲ್ಲಿ ಶಾಲೆಗಳನ್ನು ಅಭಿವೃದ್ಧಿ ಮಾಡಲು ಸಿದ್ಧರಿದ್ದರೂ, ಕನಿಷ್ಠ ಸಂಖ್ಯೆಯಲ್ಲಿ ಮಕ್ಕಳು ದಾಖಲಾಗಿರುವ ಹಿನ್ನೆಲೆಯಲ್ಲಿ ಕಂಪನಿಗಳು ಹಿಂದೆಟ್ಟು ಹಾಕುತ್ತಿದ್ದಾರೆ. ಶಿಕ್ಷಣ ಇಲಾಖೆಯೂ ಮಕ್ಕಳ ದಾಖಲಾತಿಯ ಕುರಿತು ಸಮರೋಪಾದಿಯಲ್ಲಿ ಕೆಲಸ ಮಾಡುವ ಅಗತ್ಯತೆ ಎದ್ದು ಕಾಣುತ್ತಿದೆ ಎನ್ನುವ ಅಭಿಪ್ರಾಯ ಸಾರ್ವನಿಕರದ್ದು.

ADVERTISEMENT

ದೇಶದ ವಿವಿಧ ಭಾಗಗಳಿಂದ ಸಾಕಷ್ಟು ಮಂದಿ ಕೆಲಸವನ್ನು ಹರಿಸಿಕೊಂಡು,ಬೆಂಗಳೂರು ಗ್ರಾಮಾಂತರ ಜಿಲ್ಲೆಗೆ ದಾಪುಗಾಲು ಇಡುತ್ತಿದ್ದು, ಸ್ಥಳೀಯ ಮಕ್ಕಳು ಸೇರಿದಂತೆ ಎಲ್ಲೆಡೆಯೂ ವಿದ್ಯಾಭ್ಯಾಸ ಮುಂದುವರೆಸಲು ಅನುಕೂಲವಾಗಲು ಸರ್ಕಾರಿ ಶಾಲೆಗಳಲ್ಲಿ ಇಂಗ್ಲಿಷ್ ಮಾಧ್ಯಮವನ್ನು ಹೆಚ್ಚಿಸುವ ಮೂಲಕ ಕನ್ನಡ ಭಾಷೆಗೆ ಪ್ರಾತಿನಿಧ್ಯ ನೀಡುವ ಕೆಲಸವಾಗಬೇಕಿದೆ. ಖಾಸಗಿ ಶಾಲೆಯನ್ನು ಪರೋಕ್ಷವಾಗಿ ಬೆಂಬಲಿಸುವ ಮನಸ್ಥಿತಿಯಿಂದ ಹೊರಬರಬೇಕಿದ್ದು, ಬಡವರ ಮಕ್ಕಳನ್ನು ದೇಶದ ಪ್ರತಿಷ್ಠಿತ ಪ್ರಜೆಗಳ ಸಾಲಿನಲ್ಲಿ ನಿಲ್ಲುವಂತೆ ಆಗಬೇಕಿದೆ.

ಸರ್ಕಾರಗಳು ಕೋಟ್ಯಾಂತರ ರೂಪಾಯಿ ವೆಚ್ಚ ಮಾಡಿದ್ದರೂ ಇಂದಿಗೂ ಸಾರ್ವಜನಿಕ ಶಿಕ್ಷಣ ಇಲಾಖೆಯಲ್ಲಿ ಮೂಲಭೂತ ಸೌಲಭ್ಯಗಳ ಕೊರತೆ ಕಾಣುತ್ತಿರುವುದು ಆಕ್ಷೇಪಣಾರ್ಹವಾದರೂ, ಸರ್ಕಾರಿ ಶಾಲೆಗಳಲ್ಲಿ ಓದುವ ಬಡ ಮಕ್ಕಳಿಗೆ ಅನ್ಯಾಯವಾಗದಂತೆ ಶಾಲೆಗಳ ಸ್ಥಿತಿಗತಿಗಳನ್ನು ಸುಧಾರಿಸುವ ನಿಟ್ಟಿನಲ್ಲಿ ಇಲಾಖೆ ಮುಂದಾಗಬೇಕಿದೆ ಎನ್ನುತ್ತಾರೆ ಪೋಷಕರು.

ಸರ್ಕಾರದ ಯೋಜನೆಗಳು ಗ್ರಾಮೀಣ ಭಾಗಕ್ಕೆ ತಲುಪದೇ ಇದ್ದಾಗ ಅಭಿವೃದ್ಧಿ ಕಾರ್ಯಗಳು ಕುಂಠಿತವಾಗುತ್ತವೆ. ಶಾಲಾ ಕೊಠಡಿಗಳ ನಿರ್ಮಾಣದಂತಹ ಕಾಮಗಾರಿಗಳನ್ನು ಮಾಡಲು ಸರ್ಕಾರ ಸಿ.ಎಸ್.ಆರ್ ಅನುದಾನ ಬಿಡುಗಡೆ ಮಾಡುವಂತೆ ಸೂಚನೆ ನೀಡಬೇಕು. ಸರ್ಕಾರಿ ಶಾಲಾ ಕಟ್ಟಡಗಳ ನಿರ್ಮಾಣಕ್ಕೆ ಪ್ರಥಮ ಆಧ್ಯತೆ ನೀಡಬೇಕು. ಗ್ರಾಮೀಣ ಭಾಗದಲ್ಲಿ ಸರ್ಕಾರಿ ಶಾಲಾ ಕಟ್ಟಡಗಳು ಸುಸಜ್ಜಿತವಾಗಿದ್ದಾಗ ಮಾತ್ರ. ಬಡವರು, ಮಧ್ಯಮ ವರ್ಗದವರಿಗೆ ಗುಣಮಟ್ಟದ ಶಿಕ್ಷಣ ಸಿಗಲು ಸಾಧ್ಯವಾಗುತ್ತದೆ ಎನ್ನುವುದು ವಿಜಯಪುರ ಭಾಗದ ಪೋಷಕರ ವಾದವಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.