ಆನೇಕಲ್ : ಬನ್ನೇರುಘಟ್ಟ ಜೈವಿಕ ಉದ್ಯಾನದ ಆನೆ ರೀಟಾ ಮುದ್ದಾದ ಗಂಡು ಮರಿಗೆ ಭಾನುವಾರ ಜನ್ಮ ನೀಡಿದೆ. ಹೊಸ ಅತಿಥಿ ಆಗಮನದಿಂದ ಉದ್ಯಾನದಲ್ಲಿ ಸಂತಸ ಮನೆ ಮಾಡಿದೆ.
ನೂತನ ಆನೆ ಮರಿ ಆಗಮನದಿಂದಾಗಿ ಆನೆಗಳ ಸಂಖ್ಯೆ 27ಕ್ಕೇರಿದೆ. 12 ಗಂಡು ಮತ್ತು 15 ಹೆಣ್ಣಾನೆಗಳು ಉದ್ಯಾನದಲ್ಲಿವೆ ಎಂದು ಉದ್ಯಾನದ ಕಾರ್ಯನಿರ್ವಾಹಕ ನಿರ್ದೇಶಕ ಸೂರ್ಯಸೇನ್ ತಿಳಿಸಿದರು.
ಒಂಬತ್ತು ವರ್ಷದ ಆನೆ ರೀಟಾಳಿಗೆ ಇದು ಚೊಚ್ಚಲ ಹೆರಿಗೆ. ಲಿಲ್ಲಿ ಮತ್ತು ಗೌರಿ ನೇತೃತ್ವದಲ್ಲಿ ಆರೈಕೆ ನಡೆದಿದೆ. ಪುಟಾಣಿ ಮರಿಯನ್ನು ಉಳಿದ ಆನೆಗಳು ಬೆಂಗಾವಲಿನಂತೆ ಕಾಯುತ್ತಾ ಜೋಪಾನ ಮಾಡುತ್ತಿವೆ.
ಉದ್ಯಾನದ ಸಿಬ್ಬಂದಿ ತಾಯಿ ಮತ್ತು ಮರಿಯಾನೆಯನ್ನು ಅತ್ಯಂತ ಜತನದಿಂದ ನೋಡಿಕೊಳ್ಳುತ್ತಿದ್ದು ವಿಶೇಷ ಆರೈಕೆ ಮಾಡುತ್ತಿದ್ದಾರೆ. ಉದ್ದು, ಅವಲಕ್ಕಿ, ಕಡಲೆಕಾಳು, ಹೆಸರಕಾಳು, ತೆಂಗಿನಕಾಯಿ ಸೇರಿದಂತೆ ವಿಶೇಷ ಆಹಾರ ತಾಯಿ ಆನೆ ರೀಟಾಳಿಗೆ ನೀಡಲಾಗುತ್ತಿದೆ.
ಮರಿಯಾನೆಯು ಅಂದಾಜು 100 ಕೆ.ಜಿಗೂ ಹೆಚ್ಚು ತೂಕವಿದ್ದು, ಆರೋಗ್ಯವಾಗಿದೆ. ರೀಟಾಳ ಮಾವುತ ಕೆ.ವಿ.ರವಿ ಪಾಲನೆ ಮಾಡುತ್ತಿದ್ದಾರೆ. ವೈದ್ಯರಾದ ಕಿರಣ್, ಆರ್‌ಎಫ್‌ಒ ದಿನೇಶ್, ಡಿಆರ್‌ಎಫ್‌ಒ ಅಭಿಷೇಕ್, ಸುರೇಶ್ ಮೇಲ್ವೀಚಾರಣೆ ನಡೆಸುತ್ತಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.