ADVERTISEMENT

ಉರಿಗಾಂ: ಆನೆ ಕಳೇಬರ ಪತ್ತೆ

ಕಾದಾಟದಲ್ಲಿ ಬಂಡೆ ಮೇಲಿಂದ ಬಿದ್ದು ಮೃತಪಟ್ಟಿರುವ ಶಂಕೆ

​ಪ್ರಜಾವಾಣಿ ವಾರ್ತೆ
Published 13 ನವೆಂಬರ್ 2024, 0:53 IST
Last Updated 13 ನವೆಂಬರ್ 2024, 0:53 IST
   

ಆನೇಕಲ್: ಹೊಸೂರು ಸಮೀಪದ ಉರಿಗಾಂ ಅರಣ್ಯ ಪ್ರದೇಶದಲ್ಲಿ ತಿಂಗಳ ಹಿಂದೆ ಬಂಡೆ ಮೇಲಿನಿಂದ ಉರುಳಿ ಬಿದ್ದು ಮೃತಪಟ್ಟ ಆನೆ ಕಳೇಬರ ಮಂಗಳವಾರ ಪತ್ತೆಯಾಗಿದೆ.

ಕಾಡಿನಿಂದ ಆಹಾರ ಅರಸಿ ಬಂದಿದ್ದ ಕಾಡಾನೆಗಳ ಹಿಂಡಿನಲ್ಲಿದ್ದ ಆನೆಯೊಂದು ಕಾದಾಟದ ವೇಳೆ ಬಂಡೆ ಮೇಲಿಂದ ಉರುಳಿ ಬಿದ್ದು ಮೃತಪಟ್ಟಿರುವ ಸಾಧ್ಯತೆ ಇದೆ ಎಂದು ಅರಣ್ಯ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ. ಆನೆಗಳ ಗುಂಪಿನಲ್ಲಿ ಕಾದಾಟ ಸಹಜ. ಇದು ದಂತಚೋರರ ಕೃತ್ಯವಲ್ಲ ಎಂದು ಅಧಿಖಾರಿಗಳು ತಿಳಿಸಿದ್ದಾರೆ.

ಪಶು ವೈದ್ಯರು ಕಳೇಬರದ ಮರೋಣತ್ತರ ಪರೀಕ್ಷೆ ನಡೆಸಿದ ಬಳಿಕ ದಂತ ಬೇರ್ಪಡಿಸಲಾಯಿತು. ನಂತರ ಅಲ್ಲಿಯೇ ಅರಣ್ಯ ಇಲಾಖೆ ಸಿಬ್ಬಂದಿ ಆನೆ ಕಳೇಬರವನ್ನು ಶವಸಂಸ್ಕಾರ ಮಾಡಿದರು. 

ADVERTISEMENT

ಆನೆ ಸಾವಿಗೀಡಾಗಿ ತಿಂಗಳಾದರೂ ಅರಣ್ಯ ಇಲಾಖೆ ಅಥವಾ ಸಾರ್ವಜನಿಕರ ಗಮನಕ್ಕೆ ಬಂದಿರಲಿಲ್ಲ. ದನ ಮೇಯಿಸಲು ಕಾಡಿಗೆ ಹೋಗಿದ್ದ ರೈತರು ಅರಣ್ಯ ಪ್ರದೇಶದಲ್ಲಿ ಕೆಟ್ಟ ವಾಸನೆ ಬರುತ್ತಿರುವ ಬಗ್ಗೆ ಅರಣ್ಯಾಧಿಕಾರಿಗಳ ಗಮನಕ್ಕೆ ತಂದರು.

ಕೂಡಲೇ ಕಾರ್ಯಪ್ರವೃತ್ತರಾದ ತಮಿಳುನಾಡಿನ ಅರಣ್ಯ ಇಲಾಖೆ ಅಧಿಕಾರಿಗಳ ತಂಡವು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದಾಗ ಗಂಡಾನೆ ಮೃತಪಟ್ಟು ಗೆದ್ದಲು ತಿಂದಿರುವ ದೃಶ್ಯ ಕಂಡು ಬಂತು. ಆನೆಯಲ್ಲಿನ ದಂತ ಬೇರ್ಪಡಿಸಿ ಮರಣೊತ್ತರ ಪರೀಕ್ಷೆ ನಡೆಸಿ ಅಲ್ಲಿಯೇ ಶವಸಂಸ್ಕಾರ ಮಾಡಲಾಗಿದೆ ಎಂದು ತಿಳಿದುಬಂದಿದೆ.

ಹೊಸೂರು, ಉರಿಗಾಂ ಸುತ್ತಮುತ್ತ ಇತ್ತೀಚಿನ ದಿನಗಳಲ್ಲಿ 20ಕ್ಕೂ ಹೆಚ್ಚು ಕಾಡಾನೆಗಳ ಹಿಂಡು ಗ್ರಾಮಗಳತ್ತ ಬರುತ್ತಿವೆ. ಸೋಮವಾರ, ಮಂಗಳವಾರ ಸಹ ಕಾಡಾನೆಗಳ ಹಿಂಡು ಶಾನುಮಾವು ಅರಣ್ಯ ಪ್ರದೇಶದಲ್ಲಿ ಓಡಾಟ ನಡೆಸಿರುವುದು ಕಂಡುಬಂದಿದೆ. ರಾಗಿ, ಭತ್ತ ಮತ್ತಿತರ ತೋಟದ ಬೆಳೆಗಳಿಗೆ ಕಾಡಾನೆ ಹಿಂಡು ದಾಳಿ ಇಡುತ್ತಿವೆ.  

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.