ADVERTISEMENT

‘ಇಂಗ್ಲಿಷ್‌ ಬೋಧನೆಯಿಂದ ಅಪಾಯ ಇಲ್ಲ’

ಬೆಂಗಳೂರು ಗ್ರಾಮಾಂತರ ಜಿಲ್ಲೆ, ನಗರಗಳ ಕನ್ನಡ ಸಾಹಿತ್ಯ ಸಮ್ಮೇಳನ ಕಾರ್ಯಕ್ರಮ

​ಪ್ರಜಾವಾಣಿ ವಾರ್ತೆ
Published 6 ಜುಲೈ 2019, 13:32 IST
Last Updated 6 ಜುಲೈ 2019, 13:32 IST
ವಿಜಯಪುರದ ಸರ್ಕಾರಿ ಪದವಿ ಪೂರ್ವ ಕಾಲೇಜಿನ ಆವರಣದಲ್ಲಿ ಆಯೋಜಿಸಿದ್ದ ಕನ್ನಡ ಸಾಹಿತ್ಯ ಸಮ್ಮೇಳನ ಕಾರ್ಯಕ್ರಮದಲ್ಲಿ ಸಾಹಿತ್ಯ ಸಮ್ಮೇಳನಾಧ್ಯಕ್ಷರನ್ನು ಅಭಿನಂದಿಸಲಾಯಿತು
ವಿಜಯಪುರದ ಸರ್ಕಾರಿ ಪದವಿ ಪೂರ್ವ ಕಾಲೇಜಿನ ಆವರಣದಲ್ಲಿ ಆಯೋಜಿಸಿದ್ದ ಕನ್ನಡ ಸಾಹಿತ್ಯ ಸಮ್ಮೇಳನ ಕಾರ್ಯಕ್ರಮದಲ್ಲಿ ಸಾಹಿತ್ಯ ಸಮ್ಮೇಳನಾಧ್ಯಕ್ಷರನ್ನು ಅಭಿನಂದಿಸಲಾಯಿತು   

ವಿಜಯಪುರ: ಶಿಕ್ಷಣ ಕ್ಷೇತ್ರದಲ್ಲಿ ಆಂಗ್ಲ ಭಾಷೆಯನ್ನು ಒಂದನೇ ತರಗತಿಯಿಂದ ಕಲಿಸುತ್ತಿರುವುದು ಸ್ವಾಗತಾರ್ಹ. ಇದರಿಂದ ಯಾವುದೇ ಅಪಾಯವಿಲ್ಲ. ಎಲ್ಲ ಪರೀಕ್ಷೆಗಳು ಸ್ಥಳೀಯ ಭಾಷೆಯಲ್ಲೇ ನಡೆಸಬೇಕು. ಖಾಸಗಿ ಶಿಕ್ಷಣ ಸಂಸ್ಥೆಗಳಲ್ಲಿ ಕನ್ನಡ ಆಡಳಿತವಾಗಿ ಬರಬೇಕು ಎಂದು ಸಾಹಿತ್ಯ ಸಮ್ಮೇಳನದ ಅಧ್ಯಕ್ಷ ಬೆ.ಕಾ. ಮೂರ್ತಿಶ್ವರಯ್ಯ ಅಭಿಪ್ರಾಯಪಟ್ಟರು.

ಇಲ್ಲಿನ ಸರ್ಕಾರಿ ಪದವಿ ಪೂರ್ವ ಕಾಲೇಜಿನ ಆವರಣದಲ್ಲಿ ಆಯೋಜಿಸಿದ್ದ ಬೆಂಗಳೂರು ಗ್ರಾಮಾಂತರ ಜಿಲ್ಲೆ, ಬೆಂಗಳೂರು ನಗರಗಳ ಅವಿಭಜಿತ ಜಿಲ್ಲೆಗಳ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಅವರು ಮಾತನಾಡಿದರು.

ಸಮಾಜದಲ್ಲಿ ಜಾತ್ಯತೀತ ಮನೋಭಾವ, ಶಾಂತಿ, ಸೌಹಾರ್ದ, ಸಮಾನತೆ, ಕೋಮು ಸೌಹಾರ್ದ ಮೂಡಿಸುವಲ್ಲಿ ಸಾಹಿತ್ಯ ಸಮ್ಮೇಳನಗಳು ಸಹಕಾರಿಯಾಗಲಿವೆ ಎಂದರು.

ADVERTISEMENT

ಸಾಹಿತ್ಯ ಕ್ಷೇತ್ರದಲ್ಲಿ ಉತ್ತಮ ಸಾಧನೆ ಮಾಡಿರುವಂತಹ ಸಾಹಿತಿಗಳನ್ನು ಯುವಜನರು ಮಾದರಿಯಾಗಿ ತೆಗೆದುಕೊಳ್ಳಬೇಕು. ಸ್ಥಳೀಯ ಭಾಷೆಗಳಲ್ಲಿ ಆಡಳಿತ ನಡೆಸಬೇಕು. ಅನ್ಯ ಭಾಷೆಯಲ್ಲಿ ಆಡಳಿತ ನಡೆಸುವಂತಾದರೆ, ಭಾಷೆ ಗೊತ್ತಿಲ್ಲದ ಸ್ಥಳೀಯರು ಮೋಸ ಹೋಗುತ್ತಾರೆ ಎಂದರು.

ಸಮ್ಮೇಳನಾಧ್ಯಕ್ಷ ತಾ.ನಂ. ಕುಮಾರಸ್ವಾಮಿ ಮಾತನಾಡಿ, ‘ಎಲ್ಲಿ ಸೋಲುತ್ತೇವೆಯೋ ಅಲ್ಲೇ ಗೆಲುವು ಪಡೆಯಬೇಕು. ಅನ್ನ ಕೊಟ್ಟವರನ್ನು ಮರೆಯಬಾರದು. ಸಮಾಜದಿಂದ ಪಡೆದದ್ದನ್ನು ಸಮಾಜಕ್ಕೆ ನೀಡಬೇಕು. ಆಂಗ್ಲ ಭಾಷೆ ಓದಿದರೆ ಸ್ವರ್ಗ ಸಿಗಲ್ಲ. ಕನ್ನಡ ಕಲಿತರೇ ನಷ್ಟವೂ ಆಗಲ್ಲ. ಅಧಿಕಾರಿಗಳು, ರಾಜಕಾರಣಿಗಳು ಎಲ್ಲರೂ ತಮ್ಮ ಮಕ್ಕಳಿಗೆ ಕಡ್ಡಾಯವಾಗಿ ಪ್ರಾಥಮಿಕ ಶಿಕ್ಷಣವನ್ನು ಕನ್ನಡ ಭಾಷೆಯಲ್ಲಿ ಕಲಿಸಬೇಕು’ ಎಂದು ಹೇಳಿದರು.

ಕನ್ನಡ ಭಾಷೆಯನ್ನು ಕಲಿಯುವಾಗಲೇ, ಸಂಸ್ಕಾರ, ಸಂಸ್ಕೃತಿ ಸಂಬಂಧಗಳ ಮೌಲ್ಯಗಳು ಗೊತ್ತಾಗುತ್ತವೆ. ಪ್ರಪಂಚದ ಕೆಲವೇ ದೇಶಗಳಲ್ಲಿ ಆಂಗ್ಲ ಭಾಷೆಯಿದೆ. 9 ಸಾವಿರ ಭಾಷೆಗಳಿವೆ. ಇಷ್ಟೂ ಭಾಷೆಗಳಲ್ಲಿ ಕನ್ನಡ ಭಾಷೆಗೆ ಸಡ್ಡು ಹೊಡೆಯುವಂತಹ ಭಾಷೆ ಮತ್ತೊಂದಿಲ್ಲ ಎಂದರು.

ಸಮ್ಮೇಳನಾಧ್ಯಕ್ಷರ ಮೆರವಣಿಗೆ ಆಕರ್ಷಕವಾಗಿ ನಡೆಯಿತು. ಇಲ್ಲಿನ ಸರ್ಕಾರಿ ಪದವಿ ಪೂರ್ವ ಕಾಲೇಜಿನ ಆವರಣದಲ್ಲಿ ಬೆಳಿಗ್ಗೆ ಉಪಪ್ರಾಂಶುಪಾಲ ಪಿ.ವೆಂಕಟೇಶ್ ಅವರು, ರಾಷ್ಟ್ರಧ್ವಜ ಆರೋಹಣ ಮಾಡುವ ಮೂಲಕ ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ ಚಾಲನೆ ನೀಡಿದರು.

ಕಸಾಪ ನಗರ ಘಟಕದ ಪ್ರಧಾನ ಕಾರ್ಯದರ್ಶಿ ಮುನಿವೆಂಕಟರವಣಪ್ಪ ಅವರು ನಾಡದ್ವಜವನ್ನು ಆರೋಹಣ ಮಾಡಿದರು. ಬೆಂಗಳೂರು ಗ್ರಾಮಾಂತರ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಮಹಿಳಾ ಘಟಕದ ಅಧ್ಯಕ್ಷೆ ಪರಿಷತ್ತಿನ ಧ್ಜಜವನ್ನು ಆರೋಹಣ ಮಾಡಿದರು.

ಸಾಂಸ್ಕೃತಿಕ ಕಲಾ ತಂಡದ ಜಿಲ್ಲಾ ಘಟಕದ ಅಧ್ಯಕ್ಷ ಎಂ.ವಿ. ನಾಯ್ಡು ತಂಡದಿಂದ ರಾಷ್ಟ್ರಗೀತೆ, ನಾಡಗೀತೆ, ರೈತ ಗೀತೆಗಳನ್ನು ಹಾಡಿದರು. ಗಾಂಧಿ ಚೌಕದಿಂದ ಸಮ್ಮೇಳನಾಧ್ಯಕ್ಷರ ಮೆರವಣಿಗೆ ಆರಂಭವಾಯಿತು. ಕಲಾ ತಂಡಗಳು, ಡೊಳ್ಳುಕುಣಿತ, ವೀರಗಾಸೆ ಕುಣಿತ, ತಮಟೆಗಳೊಂದಿಗೆ ಮೆರವಣಿಗೆ ಪ್ರಮುಖ ಬೀದಿಗಳ ಮೂಲಕ ನಾಡೋಜ ನಾರಾಯಣರೆಡ್ಡಿ ವೇದಿಕೆಗೆ ಸೇರಿಕೊಂಡಿತು.

ಬೆಂಗಳೂರು ಗ್ರಾಮಾಂತರ ಜಿಲ್ಲಾ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಚಿ.ಮಾ. ಸುಧಾಕರ್ ಪ್ರಾಸ್ತಾವಿಕವಾಗಿ ಮಾತನಾಡಿ, ಮೈಸೂರು ಸಂಸ್ಥಾನದಲ್ಲಿ ಒಂದಾಗಿದ್ದ ಅವಿಭಾಜ್ಯ ಜಿಲ್ಲೆಗಳಾದ ಬೆಂಗಳೂರು ನಗರ, ಬೆಂಗಳೂರು ಗ್ರಾಮಾಂತರ ಜಿಲ್ಲೆಗಳ ಜನರು ಒಂದುಗೂಡಬೇಕು. ಸಾಂಸ್ಕೃತಿಕವಾಗಿ, ಕಲಾತ್ಮಕವಾಗಿ ಅನೇಕ ಸಾಹಿತಿಗಳನ್ನು ಸಾಹಿತ್ಯ ಕ್ಷೇತ್ರಕ್ಕೆ ಕೊಟ್ಟಿರುವ ಈ ಜಿಲ್ಲೆಗಳಲ್ಲಿ ಸಾಹಿತ್ಯದ ಬೇರನ್ನು ಗಟ್ಟಿಗೊಳಿಸಬೇಕು ಎನ್ನುವ ಉದ್ದೇಶದಿಂದ ಎರಡೂ ಅವಳಿ ಜಿಲ್ಲೆಗಳ ಸಂಯುಕ್ತ ಆಶ್ರಯದಲ್ಲಿ ಸಾಹಿತ್ಯ ಸಮ್ಮೇಳನ ಮಾಡುತ್ತಿದ್ದೇವೆ ಎಂದರು.

ಕನ್ನಡ ಕಲಾವಿದರ ಸಂಘದ ತಾಲ್ಲೂಕು ಘಟಕದ ಅದ್ಯಕ್ಷ ಎನ್.ರಾಜಗೋಪಾಲ್, ಪುನೀತಾ ನಟರಾಜ್, ಕಸಾಪ ತಾಲ್ಲೂಕು ಘಟಕದ ಅಧ್ಯಕ್ಷ ರಾಮಕೃಷ್ಣ ಹೆಗಡೆ, ದೊಡ್ಡಬಳ್ಳಾಪುರ ತಾಲ್ಲೂಕು ಮಹಿಳಾ ಘಟಕದ ಅಧ್ಯಕ್ಷೆ ಪ್ರಮೀಳಾ ಮಹದೇವ್, ಎನ್. ಮುನಿನಾರಾಯಣ ಸ್ವಾಮಿ, ಹೊನ್ನಸ್ವಾಮಯ್ಯ, ಶ್ರೀರಾಮಯ್ಯ, ಡಾ.ವಿ.ಎನ್. ರಮೇಶ್, ಜೆ.ಆರ್. ಮುನಿವೀರಣ್ಣ, ಪ್ರಾಂಶುಪಾಲ ಟಿ. ಮಾರ್ಟಿನ್, ಡಾ. ಶಿವಕುಮಾರ್, ಚಂದ್ರಶೇಖರ ಹಡಪದ್, ಮುನಿರಾಜು, ವಿಶ್ವನಾಥ್, ರಾಮು ಭಗವಾನ್, ಮಾಧವಿ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.