ADVERTISEMENT

ಬೆಂಕಿ ಭಯ ಮರತೆ ಅರಣ್ಯ ಇಲಾಖೆ: ಪರಿಸರ ಪ್ರೇಮಿಗಳ ಆಕ್ರೋಶ

ದೊಡ್ಡಬಳ್ಳಾಪುರ ತಾಲ್ಲೂಕಿನ ಹಲವೆಡೆ ಅಪಾರ ಸಸ್ಯರಾಶಿ ಭಸ್ಮ

​ಪ್ರಜಾವಾಣಿ ವಾರ್ತೆ
Published 6 ಮಾರ್ಚ್ 2021, 2:51 IST
Last Updated 6 ಮಾರ್ಚ್ 2021, 2:51 IST
ನಗರದಂಚಿನ ಅರಳುಮಲ್ಲಿಗೆ ಕೆರೆ ಅಂಗಳದಲ್ಲಿ ಗುರುವಾರ ರಾತ್ರಿ ಹೊತ್ತಿ ಉರಿಯುತ್ತಿದ್ದ ಬಿದಿರು ಮೆಳೆ (ಎಡಚಿತ್ರ) ಮಾಕಳಿದುರ್ಗಾ ಬೆಟ್ಟ ಸಾಲಿಗೆ ಬೆಂಕಿ ಬಿದ್ದು ಬೋಳಾಗಿರುವ ನಿಂತಿರುವ ಮರಗಳು
ನಗರದಂಚಿನ ಅರಳುಮಲ್ಲಿಗೆ ಕೆರೆ ಅಂಗಳದಲ್ಲಿ ಗುರುವಾರ ರಾತ್ರಿ ಹೊತ್ತಿ ಉರಿಯುತ್ತಿದ್ದ ಬಿದಿರು ಮೆಳೆ (ಎಡಚಿತ್ರ) ಮಾಕಳಿದುರ್ಗಾ ಬೆಟ್ಟ ಸಾಲಿಗೆ ಬೆಂಕಿ ಬಿದ್ದು ಬೋಳಾಗಿರುವ ನಿಂತಿರುವ ಮರಗಳು   

ದೊಡ್ಡಬಳ್ಳಾಪುರ: ಬೆಟ್ಟ, ಕಿರು ಅರಣ್ಯ ಹಾಗೂ ಕೆರೆ ಅಂಗಳದಲ್ಲಿನ ನೆಡು ತೋಪು ಬೆಂಕಿಯಿಂದ ರಕ್ಷಿಸುವ ಯಾವುದೇ ರೀತಿಯ ಪೂರ್ವ ತಯಾರಿ ಇಲ್ಲದೆ ನೂರಾರು ಎಕರೆಯಲ್ಲಿ ಬೆಳೆದು ನಿಂತಿರುವ ಅಮೂಲ್ಯ ಸಸ್ಯ ಸಂಪತ್ತು, ಕೀಟ, ಪಕ್ಷಿ, ಪ್ರಾಣಿಗಳು ಜೀವ ಕಳೆದುಕೊಳ್ಳುತ್ತಿವೆ.

ತಾಲ್ಲೂಕು ಕೇಂದ್ರಕ್ಕೆ ಕೂಗಳತೆ ದೂರದಲ್ಲಿರುವ ಅರಳುಮಲ್ಲಿಗೆ ಕೆರೆ ಅಂಗಳದಿಂದ ಮೊದಲುಗೊಂಡು ತಾಲ್ಲೂಕು ಕೇಂದ್ರದಿಂದ ಸುಮಾರು 20 ಕಿ.ಮೀ ದೂರದ ಮಾಕಳಿ ದುರ್ಗಾ ಬೆಟ್ಟದ ಸಾಲು ಸೇರಿದಂತೆ ಎಲ್ಲಕಡೆಯೂ ಬೆಂಕಿಯ ರುದ್ರನರ್ತಕ್ಕೆ ಅಪಾರ ಸಸ್ಯ ಸಂಪತ್ತು ಸುಟ್ಟು ಭಸ್ಮವಾಗುತ್ತಲೇ ಇದೆ. ಈಗ ಬೆಂಕಿ ಕಾಣಿಸಿಕೊಂಡಿರುವ ಎಲ್ಲ ಪ್ರದೇಶದಲ್ಲೂ ಸಹ ಅರಣ್ಯ ಇಲಾಖೆ ಕನಿಷ್ಠ ಪ್ರಮಾಣದಲ್ಲಿ ಮುಂಜಾಗ್ರತೆ ವಹಿಸಿದ್ದರೂ ಬೆಂಕಿಯಿಂದ ಉಂಟಾಗುವ ಪ್ರಮಾದ ತಪ್ಪಿಸಲು ಸಾಕಷ್ಟು ಅವಕಾಶ ಇತ್ತು ಎನ್ನುತ್ತಾರೆ ಪರಿಸರ ಪ್ರೇಮಿಗಳು.

ಅಪರೂಪದ ಕೊಕ್ಕರೆ, ನೂರಾರು ನವಿಲು, ವಿವಿಧ ಜಾತಿ ಮೊಲಗಳು ವಾಸವಾಗಿರುವ ಅರಳುಮಲ್ಲಿಗೆ ಕೆರೆ ಅಂಗಳದಲ್ಲಿನ ಬಿದಿರಿನ ಮೆಳೆಗೆ ವರ್ಷದಲ್ಲಿ ಐದಾರು ಬಾರಿಯಾದರೂ ಬೆಂಕಿ ಬಿಳುತ್ತಲೇ ಇದೆ. ಆದರೆ, ಅರಣ್ಯ ಇಲಾಖೆ, ಸ್ಥಳೀಯ ಗ್ರಾಮ ಪಂಚಾಯಿತಿ ಇಲ್ಲಿವರೆಗೂ ಯಾವುದೇ ಮುನ್ನೆಚ್ಚರಿಕೆ ವಹಿಸಿಯೇ ಇಲ್ಲ. ನಗರಕ್ಕೆ ಅತ್ಯಂತ ಸಮೀಪದ ಕೆರೆ ಅಂಗಳದಲ್ಲಿನ ಬೆಂಕಿ ನಂದಿಸಲು ಇಷ್ಟೊಂದು ವಿಳಂಬ ಮಾಡುವ ಅರಣ್ಯ ಇಲಾಖೆ ವರ್ತನೆಗೆ ಸ್ಥಳೀಯರು ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ADVERTISEMENT

ಎಚ್ಚರಿಕೆ ಕ್ರಮ: ಕಿರು ಅರಣ್ಯ ಪ್ರದೇಶ ಹಾಗೂ ಬೆಟ್ಟದ ಸಾಲಿನಲ್ಲಿ ರಸ್ತೆ ಹಾದು ಹೋಗಿರುವ ಕಡೆಗಳಲ್ಲಿ ಅರಣ್ಯ ಇಲಾಖೆ ಕಾವಲುಗಾರರು ಬೈಕ್‌ಗಳಲ್ಲಿ ಹಗಲಿನ ಮತ್ತು ಸಂಜೆ ವೇಳೆ ಗಸ್ತು ನಡೆಸುವ ಪದ್ಧತಿ ರಾಜ್ಯದ ಕೆಲ ಜಿಲ್ಲೆಗಳಲ್ಲಿ ಇದೆ. ಅರಣ್ಯ, ಬೆಟ್ಟದ ಸಾಲಿನ ರಸ್ತೆ ಬದಿಗಳಲ್ಲಿ ಕಿಡಿಗೇಡಿಗಳು ಬೆಂಕಿಹಚ್ಚಿದರೆ ಅಥವಾ ಬಿಡಿ, ಸಿಗರೇಟ್‌ ಬಿಸಾಡಿದರೂ ಬೆಂಕಿ ಬೇರೆಡೆಗೆ ರಾಚದಂತೆ ತಡೆಯುವ ಕ್ರಮ ಕೈಗೊಳ್ಳಬೇಕು.ಬೇಸಿಗೆಯಲ್ಲಿ ಬೆಂಕಿ ಕಾಣಿಸಿಕೊಂಡ ತಕ್ಷಣ ಸಾರ್ವಜನಿಕರು ಮಾಹಿತಿ ನೀಡಲು, ಮಾಹಿತಿ ಬಂದ ತಕ್ಷಣ ಬೆಂಕಿ ನಂದಿಸುವ ಸಿಬ್ಬಂದಿ, ಸಿದ್ಧತೆ, ತಾತ್ಕಾಲಿನ ಕಂಟ್ರೋಲ್‌ ರೂಂ ಸ್ಥಾಪನೆ ಮಾಡುವಂತೆ ಹಲವು ವರ್ಷಗಳಿಂದಲೂ ಆಗ್ರಹಿಸುತ್ತಲೇ ಇದ್ದೇವೆ. ಆದರೆ, ಇಲ್ಲಿಯವರೆಗೂ ತಾಲ್ಲೂಕಿನ ಅರಣ್ಯ ಇಲಾಖೆ ಈ ಬಗ್ಗೆ ಕ್ರಮಕೈಗೊಂಡಿಯೇ ಇಲ್ಲ ಎಂದು ಯುವ ಸಂಚಲನ ಅಧ್ಯಕ್ಷ ಚಿದಾನಂದ್‌ ತಿಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.