ಆನೇಕಲ್ : ತಾಲ್ಲೂಕಿನ ಹಂದೇನಹಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಕೈಗಾರಿಕಾ ಅಭಿವೃದ್ಧಿಗೆ 600 ಎಕರೆ ಕೃಷಿ ಭೂಮಿ ಸ್ವಾಧೀನಕ್ಕೆ ಕೆಐಎಡಿಬಿ ಪ್ರಾಥಮಿಕ ಅಧಿಸೂಚನೆ ಹೊರಡಿಸಿರುವುದನ್ನು ಖಂಡಿಸಿ ವಿವಿಧ ಗ್ರಾಮಗಳ ರೈತರು ಪ್ರತಿಭಟನೆ ನಡೆಸಿದರು.
ಭೂ ಸ್ವಾಧೀನಕ್ಕೆ ತರಾತುರಿಯಲ್ಲಿ ಪ್ರಾಥಮಿಕ ಅಧಿಸೂಚನೆ ಹೊರಡಿಸಲಾಗಿದೆ. ಚುನಾವಣಾ ನೀತಿ ಸಂಹಿದೆ ಘೋಷಣೆಯ ದಿನದ ಬೆಳಗ್ಗೆ ಅಧಿಸೂಚನೆ ಹೊರಡಿಸಿರುವುದು ಅನುಮಾನಕ್ಕೆ ಎಡೆ ಮಾಡಿಕೊಟ್ಟಿದೆ. ಇದರ ಹಿಂದೆ ರಾಜಕಾರಣಿಗಳ ಪಾತ್ರವಿದೆ ಎಂದು ಪ್ರತಿಭಟನನಿರತರು ದೂರಿದರು.
ಭೂ ಸ್ವಾಧೀನ ಪ್ರಕ್ರಿಯೆ ಕೈಬಿಡದಿದ್ದರೆ ಲೋಕಸಭಾ ಚುನಾವಣೆಯನ್ನು ಬಹಿಷ್ಕರಿಸಬೇಕೆಂದು ರೈತರ ಒಕ್ಕೊರಳ ದನಿಯಾಗಿದೆ. ಮುಂಬರುವ ದಿನಗಳಲ್ಲಿ ವಿಧಾನಸೌಧವರೆಗೆ ಪಾದಯಾತ್ರೆ ನಡೆಸಿ, ಭೂಸ್ವಾಧೀನ ಪ್ರಕ್ರಿಯೆಯ ವಿರುದ್ಧ ಹೋರಾಟವನ್ನು ತ್ರೀವಗೊಳಿಸಲಾಗುವುದು ಎಂದು ಎಚ್ಚರಿಸಿದ್ದಾರೆ.
ಭೂ ಮಾಲೀಕ ರೈತರನ್ನು ಕೂಲಿ ಕಾರ್ಮಿಕರಾಗಿಸಲು ಸರ್ಕಾರ ಹುನ್ನಾರ ನಡೆಸಿದೆ. ರೈತರು ಪ್ರಾಣ ಬಿಟ್ಟೆವು.. ಭೂಮಿ ಬಿಡುವುದಿಲ್ಲ. ಕೃಷಿ ನಂಬಿರುವ ರೈತರಿಗೆ ಭೂಮಿಯೇ ದೈವ ಎಂದು ನಂಬಿದ್ದೇವೆ. ಈಗ ಏಕಾಏಕಿ ಕೃಷಿ ಜಮೀನನ್ನು ಸ್ವಾಧೀನ ಪಡಿಸಿಕೊಂಡರೆ ರೈತರು ಎಲ್ಲಿ ಹೋಗುವುದು ಎಂದು ರೈತ ರಾಮಚಂದ್ರರೆಡ್ಡಿ ಪ್ರಶ್ನಿಸಿದರು.
ಡ್ರೋನ್ ಸಮೀಕ್ಷೆ ನಡೆಸಿ ಉದ್ದೇಶಿತ ಭೂ ಪ್ರದೇಶವನ್ನು ಬಂಜರು ಭೂಮಿ ಎಂದು ವರದಿ ತಯಾರಿಸಿದ್ದೇವೆ. ರೈತರು ನಡೆಸಿದ ಡ್ರೋನ್ ಸಮೀಕ್ಷೆಯಲ್ಲಿ ಭೂ ಪ್ರದೇಶದಲ್ಲಿ ಹಸಿರು ವಾತಾವರಣದಿಂದ ಕೂಡಿದೆ. ಫಲವತ್ತಾದ ಮತ್ತು ನೀರಾವರಿ ಭೂಮಿಯನ್ನು ಕೈಗಾರಿಕೆಗಳಿಗೆ ನೀಡಿದರೆ ರೈತರು ಯಾವ ಪ್ರದೇಶದಲ್ಲಿ ಕೃಷಿ ಮಾಡಬೇಕು ಎಂದು ಪ್ರಶ್ನಿಸಿದರು.
ಗ್ರಾಮದಿಂದ ಒಂದು ಕಿ.ಮೀ. ವ್ಯಾಪ್ತಿಯಲ್ಲಿ ಕೈಗಾರಿಕೆ ಅಭಿವೃದ್ಧಿ ಭೂಸ್ವಾಧೀನ ಪ್ರಕ್ರಿಯೆ ಮಾಡುವಂತಿಲ್ಲ ಎಂದು ಸುಪ್ರೀಂ ಕೋರ್ಟ್ ಆದೇಶವಿದ್ದರೂ, ನಿಯಮ ಉಲ್ಲಂಘಿಸಿ ಹಂದೇನಹಳ್ಳಿಯಲ್ಲಿ ಕೈಗಾರಿಕೆ ಸ್ಥಾಪನೆಗೆ ಸಿದ್ದತೆ ನಡೆಸಲಾಗಿದೆ ಎಂದು ದೂರಿದರು.
ರೈತ ಮುಖಂಡರಾದ ಹಂದೇನಹಳ್ಳಿ ರಾಮಚಂದ್ರರೆಡ್ಡಿ, ಶ್ರೀನಿವಾಸರೆಡ್ಡಿ, ಹುಸ್ಕೂರು ರಘು, ಕಾಂತೇಶ್, ನಾಗೇಶ್ ರೆಡ್ಡಿ, ಈಶ್ವರರೆಡ್ಡಿ, ಶಶಿಕಲಾ ಇದ್ದರು.
ರೈತರು ಬಲಿಪಶು ಆಗದಿರಲಿ
ಹಂದೇನಹಳ್ಳಿ ಪಂಚಾಯಿತಿಯಲ್ಲಿ ಬಹುತೇಕ ರೈತರು ಕಿರು ಭೂಮಿ ಹೊಂದಿದ್ದಾರೆ. ಗುಂಟೆ ಲೆಕ್ಕದಲ್ಲಿರುವ ರೈತರಿಗೆ ನ್ಯಾಯಾಲಯದ ಹೋರಾಡಲು ಆರ್ಥಿಕ ಶಕ್ತಿಯು ಇಲ್ಲ. ಸರ್ಕಾರದ ವಿಸ್ತೃತ ವರದಿಯನ್ನು ಅಧ್ಯಯನ ನಡೆಸಬೇಕು. ಆನೇಕಲ್ ತಾಲ್ಲೂಕಿನಲ್ಲಿ ಈಗಾಗಲೇ ಐದು ಕೈಗಾರಿಕ ಪ್ರದೇಶಗಳಿವೆ. ಸಾವಿರಾರು ಎಕರೆಗಳಲ್ಲಿ ಕಾರ್ಖಾನೆಗಳಿವೆ. ರಿಯಲ್ ಎಸ್ಟೇಟ್ ಮಾಫಿಯಾಗಳಿಗೆ ರೈತರನ್ನು ಬಲಿಪಶುಗಳನ್ನಾಗಿ ಮಾಡಬಾರದು. ಭೂಸ್ವಾಧೀನ ಸಂಬಂಧ ರೈತರಿಗೆ ನೋಟಿಸ್ ಬಂದಿಲ್ಲ ಎಂದು ಮುಖಂಡ ಪ್ರಶಾಂತ್ ತಿಳಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.