ದೇವನಹಳ್ಳಿ: ‘ಸಂಘಗಳಲ್ಲಿ ಆರೋಗ್ಯಕರ ಚರ್ಚೆ ನಡೆದಾಗ ಪರಿಹಾರದ ಪ್ರಗತಿಯತ್ತ ಹೆಜ್ಜೆ ಇಡಲು ಸಹಕಾರಿಯಾಗಲಿದೆ’ ಎಂದು ತಾಲ್ಲೂಕು ಹಾಲು ಒಕ್ಕೂಟದ ಶಿಬಿರ ಕಚೇರಿಯ ಉಪ ವ್ಯವಸ್ಥಾಪಕ ಡಾ.ಗಂಗಯ್ಯ ಹೇಳಿದರು.
ಇಲ್ಲಿನ ಹಾಲು ಉತ್ಪಾದಕರ ಸಹಕಾರ ಸಂಘಗಳ ನೌಕರರ ಕ್ಷೇಮಾಭಿವೃದ್ಧಿ ಸಂಘದ ಕಚೇರಿಯಲ್ಲಿ ನಡೆದ 2021ನೇ ಸಾಲಿನ ಕ್ಯಾಲೆಂಡರ್ ಬಿಡುಗಡೆ ಕಾರ್ಯಕ್ರಮದಲ್ಲಿ ಮಾತನಾಡಿದರು.
ಬಮೂಲ್ ನಿರ್ದೇಶಕ ಬಿ. ಶ್ರೀನಿವಾಸ್ ಮಾತನಾಡಿ, ಸಂಘ ನೌಕರರ ಕ್ಷೇಮದ ಜತೆಗೆ ಅಭಿವೃದ್ಧಿಗೂ ಒತ್ತು ನೀಡುತ್ತಿದೆ. ಪ್ರತಿಭಾ ಪುರಸ್ಕಾರ, ನಿವೃತ್ತ ನೌಕರರಿಗೆ ಧನಸಹಾಯ, ಅಕಾಲಿಕ ಮರಣ ಹೊಂದಿದ ಹಾಲು ಉತ್ಪಾದಕ ಸದಸ್ಯರಿಗೆ ತನ್ನ ಕೈಲಾದಷ್ಟು ಆರ್ಥಿಕ ನೆರವು ನೀಡುತ್ತಾ ಬರುತ್ತಿದೆ. ಇವರ ಸೇವಾ ಕಾರ್ಯ ಶ್ಲಾಘನೀಯ ಎಂದು ಹೇಳಿದರು.
ಸಂಘದ ಪ್ರಧಾನ ಕಾರ್ಯದರ್ಶಿ ಬಿ.ಎನ್. ಲೋಕೇಶ್ ಮಾತನಾಡಿ, ಒಕ್ಕೂಟ ವತಿಯಿಂದ ಕಟ್ಟಡ ನಿರ್ಮಾಣಕ್ಕೆ ₹ 10 ಲಕ್ಷ ಹಾಗೂ ಹಾಲು ಉತ್ಪಾದಕರ ಸಹಕಾರ ಸಂಘಗಳ ನೌಕರರು, ಒಕ್ಕೂಟದ ನೌಕರರು ಮತ್ತು ದಾನಿಗಳ ನೆರವಿನಿಂದ ನಿವೇಶನ ಖರೀದಿಸಿ ₹ 70 ಲಕ್ಷ ವೆಚ್ಚದಲ್ಲಿ ಕಟ್ಟಡ ನಿರ್ಮಾಣ ಮಾಡಲಾಗಿದೆ ಎಂದು ಹೇಳಿದರು.
ಸಂಘದ ಅಧ್ಯಕ್ಷ ಎಚ್. ಚನ್ನಕೇಶವ ಮಾತನಾಡಿ, ತಾಲ್ಲೂಕಿನಲ್ಲಿ 181 ಹಾಲು ಉತ್ಪಾದಕರ ಸಹಕಾರ ಸಂಘಗಳಿವೆ. 500ಕ್ಕೂ ಹೆಚ್ಚು ನೌಕರರು ಕೆಲಸ ಮಾಡುತ್ತಿದ್ದಾರೆ ಎಂದು ಹೇಳಿದರು.
ಸಂಘದ ಖಜಾಂಚಿ ಎನ್. ರಮೇಶ್, ಸಂಘಟನಾ ಕಾರ್ಯದರ್ಶಿಗಳಾದ ಬಿ. ರಾಜಣ್ಣ, ಐ.ಸಿ ವಿಜಯಕುಮಾರ್, ನಿರ್ದೇಶಕರಾದ ಮುನಿಕೃಷ್ಣ, ಕೆ. ಮುನಿರಾಜು, ಜಯರಾಮಯ್ಯ, ಎನ್. ನಾರಾಯಣಸ್ವಾಮಿ, ಸಿ. ಮುನೇಗೌಡ, ಅಶ್ವಥನಾರಾಯಣಸ್ವಾಮಿ, ಕೆ.ಸಿ. ಉಮಾ, ಎಂ.ಎಂ. ಮಂಜುನಾಥ್, ಒಕ್ಕೂಟದ ವಿಸ್ತರಣಾಧಿಕಾರಿಗಳಾದ ಹೇಮಾ, ಅನಿಲ್ ಕುಮಾರ್
ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.