ಆನೇಕಲ್: ತಾಲ್ಲೂಕಿನಲ್ಲಿ ಮಳೆ ಆರ್ಭಟದಿಂದಾಗಿ ಪುಷ್ಪೋದ್ಯಮ ನೆಲಕಚ್ಚಿದೆ. ರೈತರಿಗೆ ತಾವು ಹಾಕಿದ ಬಂಡವಾಳ ಸಿಗದ ಸ್ಥಿತಿ ನಿರ್ಮಾಣವಾಗಿದೆ. ದೀಪಾವಳಿ ಹಬ್ಬದಲ್ಲಿ ಲಾಭದ ನಿರೀಕ್ಷೆಯಲ್ಲಿದ್ದ ರೈತರಿಗೆ ತಮ್ಮ ತೋಟಗಳಲ್ಲಿ ಮಳೆಯಿಂದಾಗಿ ಉತ್ತಮ ಬೆಳೆ ಸಿಗದಂತಾಗಿದೆ. ಇದರಿಂದಾಗಿ ಹಬ್ಬದ ಪ್ರಯುಕ್ತ ಹೂವಿನ ಬೆಲೆ ಗಗನಕ್ಕೇರಿದೆ.
ತಾಲ್ಲೂಕಿನಲ್ಲಿ ಕೃಷಿಗೆ ಪೂರಕವಾಗಿ ಪುಷ್ಪೋದ್ಯಮ, ಹೈನುಗಾರಿಕೆ ಸೇರಿದಂತೆ ವಿವಿಧ ಕೃಷಿ ಪೂರಕ ಚಟುವಟಿಕೆಗಳಲ್ಲಿ ತೊಡಗುತ್ತಾರೆ. ಆದರೆ, ಕಳೆದ 15 ದಿನಗಳಿಂದ ಸುರಿದ ಭಾರಿ ಮಳೆಯಿಂದಾಗಿ ರೈತರಿಗೆ ಸಮರ್ಪಕ ಬೆಳೆ ಸಿಗಲಿಲ್ಲ.
ತಾಲ್ಲೂಕಿನ ದೊಡ್ಡಹಾಗಡೆ, ಮಾಯಸಂದ್ರ, ಅರೇಹಳ್ಳಿ, ಸಮಂದೂರು ಭಾಗಗಳಲ್ಲಿ ಸೇವಂತಿಗೆ, ಗುಲಾಬಿ ಹೂವು ಈ ಭಾಗದಲ್ಲಿ ಹೆಚ್ಚಾಗಿ ಬೆಳೆಯಲಾಗುತ್ತದೆ. ಆದರೆ, ಈ ವರ್ಷ ವಾಡಿಕೆಗಿಂತ ಹೆಚ್ಚಿನ ಮಳೆಯಾಗಿದೆ. ಭಾರಿ ಮಳೆಯಿಂದ ಹೂವು ಕೊಳೆತಿದ್ದು ಹಲವು ರೈತರು ಬೆಳೆದ ಬೆಳೆಯನ್ನು ರಸ್ತೆಗಳಲ್ಲಿ ಎಸೆದಿದ್ದಾರೆ.
ರೈತರಿಗೆ ಹಬ್ಬದ ದಿನಗಳು ಹೂವಿಗೆ ಉತ್ತಮ ಬೆಲೆ ಸಿಗುವ ದಿನಗಳು. ಆದರೆ, ತೋಟದಲ್ಲಿನ ಹೂವು ಹಾಳಾಗಿದೆ. ಕೈಗೆ ಬಂದ ತುತ್ತು ಬಾಯಿಗೆ ಬಾರದಂತಾಗಿದೆ. ರೈತರು ಸುಮಾರು ಐದು ತಿಂಗಳಿಗೂ ಹೆಚ್ಚು ಕಾಲ ಬೆಳೆಯನ್ನು ಮಗುವಿನಂತೆ ಪೋಷಿಸಿದ್ದರು. ಇನ್ನೇನು ಲಾಭ ಬರಬೇಕು ಎನ್ನುವಷ್ಟುರಲ್ಲಿ ಭಾರಿ ಮಳೆಯಿಂದಾಗಿ ಹೂವು ಕೊಳೆತಿದೆ. ಇದರಿಂದಾಗಿ ಮಾರುಕಟ್ಟೆಯಲ್ಲಿ ಗ್ರಾಹಕರು ಖರೀದಿಸಲು ಹಿಂದೇಟು ಹಾಕುತ್ತಿದ್ದಾರೆ ಎಂದು ಚಿಕ್ಕಹಾಗಡೆ ರೈತ ಮಹೇಶ್ ತಿಳಿಸಿದರು.
ತಾಲ್ಲೂಕಿನ ಹಲವೆಡೆ ರೈತರು ತಾವು ಬೆಳೆದ ಬೆಳೆ ಹಾಗೆಯೇ ಬಿಟ್ಟಿದ್ದಾರೆ. ಲಾಭದ ನಿರೀಕ್ಷೆಯಲ್ಲಿದ್ದ ರೈತರಿಗೆ ಮಳೆಯಿಂದ ತೊಂದರೆಯಾಯಿತು. ಮಳೆ ಬಂತೆಂದರೆ ಖುಷಿ ಪಡಬೇಕು. ಆದರೆ, ಭಾರಿ ಮಳೆಯು ರೈತರ ಬೆಳೆಗೆ ಕಂಟಕವಾಗಿದೆ ಎಂದು ಮೇಡಹಳ್ಳಿ ರೈತ ಮುರುಗೇಶ್ ತಿಳಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.