ADVERTISEMENT

ಜನಸಾಮಾನ್ಯರ ಸಮಸ್ಯೆಗೆಸ್ಪಂದಿಸುವ ಸಂವೇದನೆ ಅಗತ್ಯ

​ಪ್ರಜಾವಾಣಿ ವಾರ್ತೆ
Published 30 ಅಕ್ಟೋಬರ್ 2022, 4:44 IST
Last Updated 30 ಅಕ್ಟೋಬರ್ 2022, 4:44 IST
ದೊಡ್ಡಬಳ್ಳಾಪುರದ ಕನ್ನಡ ಜಾಗೃತ ಪರಿಷತ್‌ನಲ್ಲಿ ಶನಿವಾರ ಪತ್ರಕರ್ತರಿಗಾಗಿ ನಡೆದ ಕಾರ್ಯಾಗಾರವನ್ನು ಚಿಂತಕ ಪ್ರೊ.ಎಂ.ಜಿ.ಚಂದ್ರಶೇಖರಯ್ಯ ಉದ್ಘಾಟಿಸಿದರು
ದೊಡ್ಡಬಳ್ಳಾಪುರದ ಕನ್ನಡ ಜಾಗೃತ ಪರಿಷತ್‌ನಲ್ಲಿ ಶನಿವಾರ ಪತ್ರಕರ್ತರಿಗಾಗಿ ನಡೆದ ಕಾರ್ಯಾಗಾರವನ್ನು ಚಿಂತಕ ಪ್ರೊ.ಎಂ.ಜಿ.ಚಂದ್ರಶೇಖರಯ್ಯ ಉದ್ಘಾಟಿಸಿದರು   

ದೊಡ್ಡಬಳ್ಳಾಪುರ: ‘ಸಭ್ಯ ಸಮಾಜವನ್ನು ನಿರ್ಮಾಣ ಮಾಡುವ ಹೊಣೆಗಾರಿಕೆ ಪತ್ರಕರ್ತರ ಮೇಲಿದೆ. ಶಾಶ್ವತ ವಿರೋಧ ಪಕ್ಷವಾಗಿ ಕೆಲಸ ಮಾಡಿದಾಗ ಮಾತ್ರ ಪ್ರಜಾಪ್ರಭುತ್ವ ಸುಭದ್ರವಾಗಿ ಉಳಿಯಲು ಸಾಧ್ಯ’ ಎಂದು ಚಿಂತಕ ಪ್ರೊ.ಎಂ.ಜಿ.ಚಂದ್ರಶೇಖರಯ್ಯ ಹೇಳಿದರು.

ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ಹಾಗೂ ದೊಡ್ಡಬಳ್ಳಾಪುರ ಕಾರ್ಯನಿರತ ಪತ್ರಕರ್ತಕ್ಷೇಮಾಭಿವೃದ್ಧಿ ಟ್ರಸ್ಟ್ ಸಹಯೋಗದಲ್ಲಿ ನಗರದ ಕನ್ನಡ ಜಾಗೃತ ಪರಿಷತ್ ಭವನದಲ್ಲಿ ಶನಿವಾರ ನಡೆದ ತಾಲ್ಲೂಕು ಕಾರ್ಯನಿರತ ಪತ್ರಕರ್ತ ಸಂಘದ ಪದಾಧಿಕಾರಿಗಳ ಪದಗ್ರಹಣ ಹಾಗೂ ಪತ್ರಕರ್ತರಿಗೆ ಕಾರ್ಯಗಾರ ಕಾರ್ಯಕ್ರಮದಲ್ಲಿ ಮಾತನಾಡಿದರು.

‘ಸಾಮಾಜಿಕ ಜಾಲತಾಣದಿಂದ ಮೊದಲುಗೊಂಡು ಎಲ್ಲಾ ರೀತಿಯ ಮಾಧ್ಯಮಗಳು ಸಹ ಇಂದು ಕಾರ್ಪೋರೇಟ್‌ ಕಂಪನಿಗಳ ಕೈ ಸೇರುತ್ತಿವೆ. ಈ ಸಂದರ್ಭದಲ್ಲಿ ಓದುಗರು ಎಚ್ಚರದಿಂದ ಜನಪರವಾಗಿರುವ ಮಾಹಿತಿಗಳನ್ನು ಆಯ್ಕೆ ಮಾಡಿಕೊಂಡು ಓದುವ ತಿಳಿವಳಿಕೆ ಬೆಳೆಸಿಕೊಳ್ಳುವ ಅನಿವಾರ್ಯತೆ ಇದೆ. ಪತ್ರಕರ್ತರು ಸೇರಿದಂತೆ ಸಾಮಾನ್ಯ ಜನರಿಗೂ ಸಂವಿಧಾನ ಸಮಾನ ಅಭಿವ್ಯಕ್ತಿಯ ಹಕ್ಕು ನೀಡಿದೆ’ ಎಂದರು.

ADVERTISEMENT

ಲೇಖಕ ಮಂಜುನಾಥ ಎಂ.ಅದ್ದೆ ಮಾತನಾಡಿ, ‘ನಮ್ಮ ಸುತ್ತಮುತ್ತಲಿನ ಸಮಸ್ಯೆಗಳಿಗೆ ಸ್ಪಂದಿಸುವ ಸಂವೇದನೆ ಕಳೆದುಕೊಂಡರೆ ಜೀವಂತವಾಗಿ ಇದ್ದೂ ಸತ್ತಂತೆಯೇ. ಇಂದು ಕಾರ್ಪೋರೇಟ್‌ ಬಯಸುವ ಆಡಳಿತ ನಡೆಸುವವರ ಸಂಖ್ಯೆ ಹೆಚ್ಚಾಗುತ್ತಿದೆ. ನಮ್ಮ ದೇಶದಲ್ಲಿ ಕೆಲವೇ ಜನ ವಿಶ್ವ ಮಟ್ಟದ ಶ್ರೀಮಂತರಾಗುತ್ತಿದ್ದಾರೆ. ಆದರೆ ಬಹುಸಂಖ್ಯೆಯ ಜನ ಹಸಿವಿನಿಂದ ನರಳುವ ಸ್ಥಿತಿ ನಿರ್ಮಾಣವಾಗಿದೆ’ ಎಂದರು.

ದೇಶದಲ್ಲಿ ಇಂದಿಗೂ ಪತ್ರಿಕೋದ್ಯಮಕ್ಕೆ ಪ್ರತ್ಯೇಕವಾದ ಸ್ಪಷ್ಟವಾದ ಕಾನೂನು, ದಿಕ್ಸೂಚಿಯೇ ಇಲ್ಲದಾಗಿವೆ. ಸಾಮಾಜಿಕ ಜಾಲತಾಣ, ಡಿಜಿಟಲ್‌ ಮಾಧ್ಯಮ ಸೇರಿದಂತೆ ಎಲ್ಲಾ ರೀತಿಯ ಪತ್ರಿಕೋದ್ಯಮಕ್ಕೂ ಕಾನೂನಿನ ಬಲ ಬೇಕಿದೆ ಎಂದು
ಹೇಳಿದರು.

ಜಿಲ್ಲಾ ಪತ್ರಕರ್ತ ಸಂಘದ ಅಧ್ಯಕ್ಷ ಶ್ರೀನಿವಾಸ್‌ ಮಾತನಾಡಿ, ‘ಪತ್ರಕರ್ತರಿಗೆ ಆರೋಗ್ಯ ವಿಮೆ, ಅಪಘಾತ ವಿಮೆ ಜಾರಿಗೆ ತರಲಾಗಿದೆ. ವಾರ್ಷಿಕ ಸಾರಿಗೆ ಪಾಸ್‌ ಸೇರಿದಂತೆ ಇನ್ನೂ ಹಲವಾರು ಸೌಲಭ್ಯಗಳನ್ನು ಕಲ್ಪಿಸಿಕೊಡಲು ಶ್ರಮಿಸಲಾಗುತ್ತಿದೆ’ ಎಂದರು.

ತಾಲ್ಲೂಕು ಪತ್ರಕರ್ತರ ಸಂಘದ ಅಧ್ಯಕ್ಷ ಗಂಗರಾಜ್‌ ಶಿರವಾರ ಅಧ್ಯಕ್ಷತೆ ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ಪತ್ರಕರ್ತರ ಸಂಘದ ಜಿಲ್ಲಾ ಉಪಾಧ್ಯಕ್ಷ ಮುರಳಿಮೋಹನ, ಆರ್‌.ರಮೇಶ್‌, ರಫಿಉಲ್ಲಾ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.