ADVERTISEMENT

ದೇವನಹಳ್ಳಿ| ಒಣ ತ್ಯಾಜ್ಯ ಸಂಗ್ರಹ ಘಟಕಕ್ಕೆ ಭೂಮಿ ಪೂಜೆ 

​ಪ್ರಜಾವಾಣಿ ವಾರ್ತೆ
Published 23 ಜನವರಿ 2020, 14:15 IST
Last Updated 23 ಜನವರಿ 2020, 14:15 IST
 ಗುದ್ದಲಿ ಪೂಜೆ ಕಾರ್ಯಕ್ರಮದಲ್ಲಿ  ಯೋಜನಾಧಿಕಾರಿ ಯೋಗೇಶ್.
 ಗುದ್ದಲಿ ಪೂಜೆ ಕಾರ್ಯಕ್ರಮದಲ್ಲಿ  ಯೋಜನಾಧಿಕಾರಿ ಯೋಗೇಶ್.   

ದೇವನಹಳ್ಳಿ: ಇಲ್ಲಿನ ರಾಷ್ಟ್ರೀಯ ಹೆದ್ದಾರಿ 7ರ ಪಕ್ಕದಲ್ಲಿರುವ ಸರ್ಕಾರಿ ಸರ್ವೆ ನಂಬರ್ ಜಾಗ 1.38 ಎಕರೆಯಲ್ಲಿ ಒಣತ್ಯಾಜ್ಯ ಸಂಗ್ರಹ ಘಟಕಕ್ಕೆ ಭೂಮಿ ಪೂಜೆ ನಡೆಯಿತು.

ಈ ಸಂದರ್ಭದಲ್ಲಿ ಮಾತನಾಡಿದ ಸಿ.ಡಿ.ಡಿ. ಸರ್ಕಾರೇತರ ಸಂಸ್ಥೆ ಯೋಜನಾಧಿಕಾರಿ ಯೋಗೇಶ್, ‘ಒರಾಕಲ್ ಕಂಪನಿ ಪುರಸಭೆ ವ್ಯಾಪ್ತಿಗೆ ಬರುವ ಜಾಗದಲ್ಲಿ ಪುರಸಭೆ ವ್ಯಾಪ್ತಿಯ ಪ್ಲಾಸ್ಟಿಕ್ ತ್ಯಾಜ್ಯವನ್ನು ಸಂಗ್ರಹಿಸಿ ಇಲ್ಲಿ ದಾಸ್ತಾನು ಮಾಡಿ ಮರು ಬಳಕೆ ಮಾಡಬಹುದಾದ ಮತ್ತು ಬೇಡವಾದ ವಸ್ತುಗಳನ್ನು ವಿಂಗಡಣೆ ಮಾಡುವ ಘಟಕ ನಿರ್ಮಾಣಕ್ಕೆ 12.5 ಲಕ್ಷ ವೆಚ್ಚ ಮಾಡಲಾಗುತ್ತಿದೆ’ ಎಂದು ಹೇಳಿದರು.

ಪುರಸಭೆ ಮುಖ್ಯಾಧಿಕಾರಿ ಹನುಮಂತೇಗೌಡ ಮಾತನಾಡಿ, ‘ಪ್ರತಿ ನಿತ್ಯ ಸರಾಸರಿ 12 ಟನ್ ಕಸ ವಿಲೇವಾರಿ ಮಾಡಬೇಕು. ಕನಿಷ್ಠ 800 ರಿಂದ 900 ಕೆ.ಜಿ.ಪ್ಲಾಸ್ಟಿಕ್ ವಸ್ತುಗಳಿರುತ್ತವೆ. ಪ್ರಸ್ತುತ ಕಸ ವಿಲೇವಾರಿ ಮಾಡುತ್ತಿರುವ ಜಾಗದಲ್ಲಿ ಕಸದ ರಾಶಿಯಾಗಿದೆ. ಇತರ ಕಸದ ತ್ಯಾಜ್ಯ ಬೇಗನೆ ಕೊಳೆತು ಗೊಬ್ಬರವಾಗುತ್ತದೆ. ಆದರೆ, ಹತ್ತಾರು ವರ್ಷಗಳಿಂದ ಪ್ಲಾಸ್ಟಿಕ್ ವಸ್ತುಗಳು ಹಾಗೆಯೇ ಇವೆ. ಇದೊಂದು ದೊಡ್ಡ ಸಮಸ್ಯೆಯಾಗಿದೆ’ ಎಂದು ಹೇಳಿದರು.

ADVERTISEMENT

‘ವಾರ್ಷಿಕ ಹಬ್ಬದ ದಿನಗಳಲ್ಲಿ 18 ಟನ್ ವರೆಗೆ ಕಸ ಸಾಗಾಣಿಕೆ ಮಾಡಬೇಕು. ಪೌರ ಕಾರ್ಮಿಕರ ಕೊರತೆ ಇದೆ. ಈ ಹಿಂದೆ ಗುತ್ತಿಗೆ ಪದ್ಧತಿಯಲ್ಲಿದ್ದ ಕಾರ್ಮಿಕರನ್ನು ಸರ್ಕಾರ ರದ್ದುಗೊಳಿಸಿದೆ. ಪುರಸಭೆ ಅಸ್ತಿತ್ವಕ್ಕೆ ಬಂದು ಆರು ದಶಕ ಕಳೆದರೂ ಕಸ ವಿಲೇವಾರಿ ಮಾಡುವ ಜಾಗ ಹಸ್ತಾಂತರವಾಗಿಲ್ಲ. ಬೇರೆಡೆ ಜಾಗವಿದೆ ಎಂದು ಕಂದಾಯ ಇಲಾಖೆ ಅಧಿಕಾರಿಗಳು ಹೇಳುತ್ತಿದ್ದಾರೆ. ಸ್ಥಳೀಯರು ಕಸ ಪಡೆಯಲು ಮನೆಗಳಿಗೆ ಬರುವ ಕಾರ್ಮಿಕರಿಗೆ ಸಕಾಲದಲ್ಲಿ ಸ್ಪಂದಿಸಬೇಕು. ಎಲ್ಲೆಂದರಲ್ಲಿ ಸುರಿದು ಹೋದರೆ ಹೇಗೆ? ಉತ್ತಮ ಆರೋಗ್ಯಕ್ಕೆ ಪ್ರತಿಯೊಬ್ಬರೂ ಸಹಕರಿಸಬೇಕು ಎಂದು ಹೇಳಿದರು. ಪರಿಸರ ಎಂಜಿನಿಯರ್ ನೇತ್ರಾವತಿ ಮಾತನಾಡಿ, ಒಣಕಸವನ್ನು ಸಂಗ್ರಹಿಸಿ ಪ್ರೆಸ್ಸಿಂಗ್‌ ಮೂಲಕ ಬಂಡಲ್ ಮಾಡಲಾಗುತ್ತದೆ. ಮೂರು ವರ್ಗಗಳಾಗಿ ವಿಂಗಡಿಸಿ ಕೆ.ಜಿ.ಗೆ ಇಂತಿಷ್ಟು ದರದಲ್ಲಿ ಮಾರಾಟ ಮಾಡಲಾಗುತ್ತದೆ. ಪ್ಲಾಸ್ಟಿಕ್‌ಗೆ ಎಷ್ಟೆ ಕಡಿವಾಣ ಹಾಕಿದರೂ ಗ್ರಾಹಕರ ಬಳಕೆ ಕಡಿಮೆಯಾಗುತ್ತಿಲ್ಲ’ ಎಂದು ಬೇಸರ ವ್ಯಕ್ತಪಡಿಸಿದರು.

ಹಿರಿಯ ಆರೋಗ್ಯಾಧಿಕಾರಿ ಬಿ.ಜಿ ಸುಲೋಚನ, ಪುರಸಭೆ ಸದಸ್ಯ ಬಾಂಬೆ ನಾರಾಯಣಸ್ವಾಮಿ, ಮುಖಂಡ ಅಂಬರೀಷ್ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.