ದೊಡ್ಡಬಳ್ಳಾಪುರ: ಶ್ವಾನಗಳ ದಾಳಿಯಿಂದ ತಪ್ಪಿಸಿಕೊಂಡು ನರಿ ಮರಿಯೊಂದು ತೂಬಗೆರೆ ಗ್ರಾಮದ ಬಸ್ ನಿಲ್ದಾಣದ ಕಡೆಗೆ ಓಡಿ ಬಂದಾಗ ಸಾಲಿ ಮುನಿರಾಜು ಅವರು ನರಿಯನ್ನು ನಾಯಿಗಳಿಂದ ರಕ್ಷಣೆ ಮಾಡಿದ್ದಾರೆ.
ಸಾಲಿ ಮುನಿರಾಜು ಅವರು ಗುರುವಾರ ಬೆಳಗ್ಗೆ ವಾಯು ವಿಹಾರಕ್ಕೆ ತೆರಳುವಾಗ ನಾಯಿಗಳು ನರಿ ಮೇಲೆ ದಾಳಿಮಾಡುವುದನ್ನು ಕಂಡು ತಕ್ಷಣ ರಕ್ಷಣೆ ಮಾಡಿದ್ದಾರೆ. ನಾಯಿಗಳಿಂದ ರಕ್ಷಣೆ ಮಾಡುತ್ತಿದ್ದಂತೆ ಸಮೀಪಕ್ಕೆ ಓಡಿ ಬಂದ ನರಿಯನ್ನು ಹಿಡಿದು ಭಯಗೊಂಡಿದ್ದ ಮರಿಗೆ ಮನೆಯಲ್ಲಿ ನೀರು ಕುಡಿಸಿ, ಕೋಳಿ ಮಾಂಸ ನೀಡಿ ಆರೈಕೆ ಮಾಡಿದ ನಂತರ ಅರಣ್ಯ ಇಲಾಖೆ ಸಿಬ್ಬಂದಿ ಚಂದ್ರಶೇಖರ್ ಅವರಿಗೆ ಒಪ್ಪಿಸಿದ್ದಾರೆ.
ಸೂಕ್ತ ಚಿಕಿತ್ಸೆಯ ನಂತರ ಬನ್ನೇರುಘಟ್ಟ ಜೈವಿಕ ಉದ್ಯಾನಕ್ಕೆ ಕಳುಹಿಸಿಕೂಡೂವುದಾಗಿ ಅರಣ್ಯ ಇಲಾಖೆ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ತೂಬಗೆರೆ ಸುತ್ತಮುತ್ತ ಕಿರುಚಲು ಅರಣ್ಯ ಪ್ರದೇಶ ಹೆಚ್ಚಾಗಿರುವುದರಿಂದ ಈ ಭಾಗದಲ್ಲಿ ಸಹಜವಾಗಿಯೇ ನರಿಗಳು ಹೆಚ್ಚಿನ ಸಂಖ್ಯೆಯಲ್ಲಿ ವಾಸಮಾಡುತ್ತಿವೆ. ಕೋಳಿ ತ್ಯಾಜ್ಯವನ್ನು ತೂಬಗೆರೆ ಗ್ರಾಮದ ಹೊರಭಾಗದಲ್ಲಿ ಬಿಸಾಡುವುದರಿಂದ ಕೋಳಿ ತ್ಯಾಜ್ಯವನ್ನು ತಿನ್ನಲು ನರಿಗಳು ಬಂದಿರಬಹುದು. ಈ ಸಂದರ್ಭದಲ್ಲಿ ನಾಯಿಗಳ ದಾಳಿಯಿಂದ ನರಿಗಳ ಗುಂಪಿನಿಂದ ಮರಿ ಬೇರ್ಪಟ್ಟು ಗ್ರಾಮದ ಕಡೆಗೆ ಓಡಿ ಬಂದಿರಬಹುದು ಎಂದು ಸ್ಥಳೀಯರು ತಿಳಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.