ADVERTISEMENT

ನಿರ್ಮಲಾ ಸೀತಾರಾಮನ್‌ ಹೆಸರಿನಲ್ಲಿ ವಂಚನೆ ಪ್ರಕರಣ: ಮಹಿಳೆಯರ ವಿರುದ್ಧ ದೂರು

ಈ ಹಿಂದೆ ಸಚಿವೆ ನಿರ್ಮಲಾ ಸೀತಾರಾಮನ್‌ ಹೆಸರಿನಲ್ಲಿ ನಕಲಿ ದಾಖಲೆ ಸೃಷ್ಟಿ

​ಪ್ರಜಾವಾಣಿ ವಾರ್ತೆ
Published 10 ಫೆಬ್ರುವರಿ 2024, 15:32 IST
Last Updated 10 ಫೆಬ್ರುವರಿ 2024, 15:32 IST
ತಮಿಳುನಾಡು ಹೊಸೂರಿನಲ್ಲಿರುವ ಬ್ಲೂವಿಂಗ್ಸ್‌ ಟ್ರಸ್ಟ್‌ನ ಕಚೇರಿ
ತಮಿಳುನಾಡು ಹೊಸೂರಿನಲ್ಲಿರುವ ಬ್ಲೂವಿಂಗ್ಸ್‌ ಟ್ರಸ್ಟ್‌ನ ಕಚೇರಿ   

ಆನೇಕಲ್: ವಿವಿಧ ವಂಚನೆ ಪ್ರಕರಣಗಳಲ್ಲಿ ಜೈಲು ಸೇರಿದ ಮಹಿಳೆಯರಿಬ್ಬರು ಜಾಮೀನು ಮೇಲೆ ಬಿಡುಗಡೆಯಾದ ಮೇಲೂ ಹಳೆ ಚಾಳಿ ಮುಂದುವರಿಸಿದ್ದು, ವಿವಿಧ ಠಾಣೆಗಳಲ್ಲಿ ಪ್ರಕರಣ ದಾಖಲಾಗಿದೆ.

ತಮಿಳುನಾಡಿನ ಹೊಸೂರಿನ ಪವಿತ್ರಾ (25) ಮತ್ತು ಶಾನಭೋಗನಹಳ್ಳಿ ಮಂಜುಳಾ, ಈ ಹಿಂದೆ ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಹಾಗೂ ಭಾರತೀಯ ರಿಸರ್ವ್ ಬ್ಯಾಂಕ್‌ (ಆರ್‌ಬಿಐ) ಹೆಸರು ಹೇಳಿಕೊಂಡು ಬ್ಯಾಂಕ್‌ಗಳಿಂದ ಸಬ್ಸಿಡಿ ಸಾಲ ಕೊಡಿಸುವುದಾಗಿ ನಂಬಿಸಿ ಹಲವರಿಗೆ ಕೋಟ್ಯಂತರ ರೂಪಾಯಿ ವಂಚಿಸಿದ ಆರೋಪದ ಮೇಲೆ ಜೈಲು ಸೇರಿದ್ದರು. 

ಹಳೆ ಚಂದಾಪುರ, ತಮಿಳುನಾಡಿನ ಹೊಸೂರು, ಧರ್ಮಪುರಿ ಸೇರಿದಂತೆ ವಿವಿಧ ಭಾಗದ 92 ಮಂದಿಯಿಂದ ಸಾಲ ಪಡೆಯಲು ಪ್ರಕ್ರಿಯೆ ಶುಲ್ಕದ ಹೆಸರಿನಲ್ಲಿ ₹1.87ಕೋಟಿ ಹಣ ವಸೂಲಿ ಮಾಡಿದ್ದರು. ಆರೋಪಿ ಪವಿತ್ರಾ ಮತ್ತು ತಂಡ ಬ್ಲೂವಿಂಗ್ಸ್‌ ಎಂಬ ಹೆಸರಿನ ಟ್ರಸ್ಟ್‌ ಸ್ಥಾಪಿಸಿಕೊಂಡು ತಮಿಳುನಾಡಿನ ಹೊಸೂರಿನಲ್ಲಿ ಕಚೇರಿ ಸ್ಥಾಪಿಸಿ ಆನೇಕಲ್‌, ಅತ್ತಿಬೆಲೆ, ಚಂದಾಪುರ, ಹೊಸೂರು, ಧರ್ಮಪುರಿ ಸೇರಿದಂತೆ ವಿವಿಧ ಸ್ಥಳಗಳಲ್ಲಿ ಜನರಿಗೆ ನೋಟುಗಳ ಕಂತೆ ವಿಡಿಯೊ ತೋರಿಸಿ ವಂಚಿಸಿದ್ದರು.

ADVERTISEMENT

ಆರ್‌ಬಿಐನಿಂದ ₹17ಕೋಟಿ ಹಣ ಮಂಜೂರಾಗಿರುವ ಕುರಿತು ಕೇಂದ್ರ ಸಚಿವೆ ನಿರ್ಮಲಾ ಸೀತಾರಾಮನ್‌ ಅವರ ಸಹಿ ಇರುವ ನಕಲಿ ಪತ್ರ ಸೃಷ್ಟಿಸಿದ್ದ ಪವಿತ್ರಾ, ಈ ಹಣದಲ್ಲಿ ₹10 ಲಕ್ಷ ಸಬ್ಸಿಡಿ ಲೋನ್‌ ನೀಡಲಾಗುವುದು. ಪ್ರಕ್ರಿಯೆ ಶುಲ್ಕ ₹23,560 ನೀಡಬೇಕು. ₹10 ಲಕ್ಷ ಸಾಲ ನೀಡಿದರೆ ₹5,14 ಲಕ್ಷವನ್ನು 44 ತಿಂಗಳಲ್ಲಿ ₹11,700 ಅಂತೆ ಪಾವತಿಸಬೇಕು ಎಂದು 92 ಮಂದಿಯಿಂದ ₹1.87ಕೋಟಿ ಸಂಗ್ರಹಿಸಿದ್ದರು.

ಹಣ ಪಡೆದು ಆರು ತಿಂಗಳಾದರೂ ಸಾಲ ಸಿಗದಿದ್ದಾಗ ಅನುಮಾನಗೊಂಡ ಚಂದಾಪುರ ನಿವಾಸಿಯೊಬ್ಬರು ನೀಡಿದ ದೂರಿನ ಮೇರೆಗೆ ಸೂರ್ಯಸಿಟಿ ಪೊಲೀಸರು ಕಾರ್ಯಾಚರಣೆ ನಡೆಸಿ ಪವಿತ್ರಾ ಮತ್ತು ಮತ್ತೊಬ್ಬ ಆರೋಪಿ ಮಂಜುಳಾ ಅವರನ್ನು ಕಳೆದ ತಿಂಗಳು ಬಂಧಿಸಿದ್ದರು.

ಈಗ ಜಾಮೀನು ಮೇಲೆ ಬಿಡುಗಡೆಗೊಂಡ ಆರೋಪಿಗಳು, ಮತ್ತೆ ವಂಚನೆ ಪ್ರಕರಣಗಳಲ್ಲಿ ಭಾಗಿಯಾಗಿರುವ ಬಗ್ಗೆ ಅತ್ತಿಬೆಲೆ, ಸೂರ್ಯಸಿಟಿ ಮತ್ತು ತಮಿಳುನಾಡಿನ ಹೊಸೂರು ಠಾಣೆಗಳಲ್ಲಿ ಪ್ರಕರಣ ದಾಖಲಾಗಿದೆ. ಈ ಇಬ್ಬರು ಮಹಿಳೆಯರ ಜತೆ ಹಲವು ಜನರ ತಂಡವೊಂದು ವಂಚನೆ ಪ್ರಕರಣಗಳಲ್ಲಿ ಸಕ್ರಿಯವಾಗಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ. 

ಆರೋಪಿ ಪವಿತ್ರಾ
ನಕಲಿ ದಾಖಲೆ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.