ಆನೇಕಲ್:ಅಂಚೆ ಕಚೇರಿಯಲ್ಲಿ ಠೇವಣಿ ಇಡಲಾಗಿದ್ದ ₹ 1 ಕೋಟಿಗೂ ಹೆಚ್ಚು ಹಣವನ್ನು ಪೋಸ್ಟ್ ಮಾಸ್ಟರ್‌ವೊಬ್ಬರು ನಕಲಿ ಖಾತೆ ಸೃಷ್ಟಿಸಿ ವಂಚಿಸಿರುವ ಘಟನೆ ತಾಲ್ಲೂಕಿನ ಹಂದೇನಹಳ್ಳಿಯ ಅಂಚೆ ಕಚೇರಿಯಲ್ಲಿ ನಡೆದಿದೆ.
12 ವರ್ಷಗಳಿಂದ ಪೋಸ್ಟ್ ಮಾಸ್ಟರ್ ಆಗಿ ಕೆಲಸ ಮಾಡುತ್ತಿದ್ದ ಮಂಜುನಾಥ್ ವಂಚನೆ ಎಸಗಿದವರು. ಅವರು ತಾಲ್ಲೂಕಿನ ಮಾಯಸಂದ್ರ ಗ್ರಾಮದವರಾಗಿದ್ದು, ಸಾರ್ವಜನಿಕರು ಠೇವಣಿ ಇಟ್ಟಿದ್ದ ಹಣ ಲಪಟಾಯಿಸಿ ಪರಾರಿಯಾಗಿದ್ದಾರೆ. ಹಣ ಕಳೆದುಕೊಂಡವರು ಅಂಚೆ ಕಚೇರಿ ಮುಂದೆ ಪ್ರತಿಭಟನೆ ನಡೆಸಿದರು.
ಠೇವಣಿ ಮಾಡಲು ಬರುತ್ತಿದ್ದ ಜನರಿಂದ ಹಣ ಪಡೆಯುತ್ತಿದ್ದ ಮಂಜುನಾಥ್, ಅಂಚೆ ಇಲಾಖೆಗೆ ಜಮೆ ಮಾಡದೆ ಸಂತ್ರಸ್ತರ ಹೆಸರಿನಲ್ಲಿ ನಕಲಿ ಖಾತೆ ಸೃಷ್ಟಿಸಿ ಗ್ರಾಹಕರಿಗೆ ಪಾಸ್‌ಬುಕ್ ನೀಡಿ ಹಣ ಲಪಟಾಯಿಸಿದ್ದಾರೆ ಎಂದು ದೂರಲಾಗಿದೆ.
200ಕ್ಕೂ ಹೆಚ್ಚು ಜನರ ಹಣವನ್ನು ಮಂಜುನಾಥ್ ದುರುಪಯೋಗ ಮಾಡಿಕೊಂಡಿದ್ದಾರೆ. ಹಂದೇನಹಳ್ಳಿ ಗ್ರಾಮವೊಂದರಲ್ಲೇ ₹70 ಲಕ್ಷಕ್ಕೂ ಹೆಚ್ಚು ವಂಚನೆಯಾಗಿದೆ. ವೃದ್ಧೆ ಸರೋಜಮ್ಮಗೆ ಸೇರಿದ ₹ 10ಲಕ್ಷ, ಮುನಿವೆಂಕಟಮ್ಮಗೆ ಸೇರಿದ ₹ 5 ಲಕ್ಷ, ಯಲ್ಲಮ್ಮ ಎಂಬುವರ ₹1.30 ಲಕ್ಷ, ಶೋಭಾ ಅವರ ₹1.10 ಲಕ್ಷ, ಮುನಿರತ್ನಮ್ಮ ₹1.30 ಲಕ್ಷ ಠೇವಣಿ ಹಣವನ್ನು ಲಪಟಾಯಿಸಿದ್ದಾರೆ ಎನ್ನಲಾಗಿದೆ.
ಕೂಲಿ ಕೆಲಸ ಮಾಡುತ್ತಿದ್ದ ಸರೋಜಮ್ಮಗೆ ಜಮೀನು ಮಾರಾಟದ ಹಣ ಬಂದಿತ್ತು. ಈ ಹಣ ಮತ್ತು ಕೂಲಿ ಹಣ ಸೇರಿಸಿ ₹10 ಲಕ್ಷ ಠೇವಣಿ ಮಾಡಿದ್ದರು. ಆದರೆ, ಸರೋಜಮ್ಮಗೆ ನಕಲಿ ಪಾಸ್‌ಬುಕ್ ನೀಡಿ ಅದರಲ್ಲಿ ₹10 ಲಕ್ಷ ಎಂದು ದಾಖಲಿಸಿದ್ದಾರೆ. ಆದರೆ, ಅವರ ಖಾತೆಯಲ್ಲಿ ಬಿಡಿಗಾಸು ಇಲ್ಲ ಎಂದು ಅಂಚೆ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ.
ಹಂದೇನಹಳ್ಳಿ, ಸೊಳ್ಳೆಪುರ, ಬಿಕ್ಕನಹೊಸಹಳ್ಳಿ, ಕೋಟಗಾನಹಳ್ಳಿಯ ಹಲವು ಮಂದಿ ಅಂಚೆ ಕಚೇರಿಯಲ್ಲಿ ಹಣ ಠೇವಣಿ ಮಾಡಿ ಮೋಸ ಹೋಗಿದ್ದಾರೆ. ಕೊರೊನಾ ನಂತರ ಮಂಜುನಾಥ್ ಹೆಚ್ಚಿನ ಹಣ ಲಪಟಾಯಿಸಿದ್ದಾರೆ ಎನ್ನಲಾಗಿದೆ.
ಅಂಚೆ ಇಲಾಖೆಯ ಕನಕಪುರ ಸಬ್ ಡಿವಿಜನ್ ಇನ್‌ಸ್ಪೆಕ್ಟರ್ ಆನಂದ್ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.
ಬಳಿಕ ಮಾತನಾಡಿದ ಅವರು, ‘ಅಕ್ರಮದ ಬಗ್ಗೆ ತನಿಖೆ ನಡೆಸಲಾಗುತ್ತಿದೆ. ಹಣ ಕಳೆದುಕೊಂಡವರ ಮಾಹಿತಿ ಪಡೆದು ಪರಿಶೀಲನೆ ಮಾಡಲಾಗಿದೆ. ಅಂಚೆ ಕಚೇರಿಯಲ್ಲಿ ಸತ್ತವರ ಹೆಸರಿನಲ್ಲಿ ಪಾಸ್‌ಬುಕ್‌ಗಳನ್ನು ಮಂಜುನಾಥ್ ದುರ್ಬಳಕೆ ಮಾಡಿಕೊಂಡು ವಂಚನೆ ಮಾಡಿರುವುದು ಕಂಡು ಬಂದಿದೆ. ಆತ ತಲೆಮರೆಯಿಸಿಕೊಂಡಿದ್ದು ಅತ್ತಿಬೆಲೆ ಪೊಲೀಸ್ ಠಾಣೆಯಲ್ಲಿ ದೂರು ನೀಡಲಾಗಿದೆ’ ಎಂದು ತಿಳಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.