ADVERTISEMENT

ಆನೇಕಲ್: ಹೊತ್ತಿ ಉರಿದ ಫರ್ನಿಚರ್‌ ಕಾರ್ಖಾನೆ: ಕಾರ್ಮಿಕ ಸಾವು

ಅತ್ತಿಬೆಲೆ ಬಳಿ ಫರ್ನಿಚರ್‌ ಕಾರ್ಖಾನೆಗೆ ಬೆಂಕಿ

​ಪ್ರಜಾವಾಣಿ ವಾರ್ತೆ
Published 9 ನವೆಂಬರ್ 2024, 15:58 IST
Last Updated 9 ನವೆಂಬರ್ 2024, 15:58 IST
ಆನೇಕಲ್‌ ತಾಲ್ಲೂಕಿನ ಅತ್ತಿಬೆಲೆ ಸಮೀಪದ ಶ್ರೀರಾಮ್‌ ವುಡ್‌ ಮತ್ತು ಫರ್ನಿಚರ್‌ ಕಾರ್ಖಾನೆಯಲ್ಲಿ ಅಗ್ನಿ ಅಕಸ್ಮಿಕದಿಂದ ಹೊತ್ತು ಉರಿಯುತ್ತಿರುವ ಕಾರ್ಖಾನೆ
ಆನೇಕಲ್‌ ತಾಲ್ಲೂಕಿನ ಅತ್ತಿಬೆಲೆ ಸಮೀಪದ ಶ್ರೀರಾಮ್‌ ವುಡ್‌ ಮತ್ತು ಫರ್ನಿಚರ್‌ ಕಾರ್ಖಾನೆಯಲ್ಲಿ ಅಗ್ನಿ ಅಕಸ್ಮಿಕದಿಂದ ಹೊತ್ತು ಉರಿಯುತ್ತಿರುವ ಕಾರ್ಖಾನೆ   

ಆನೇಕಲ್: ತಾಲ್ಲೂಕಿನ ಅತ್ತಿಬೆಲೆ ಕೈಗಾರಿಕಾ ಪ್ರದೇಶದ ಯಡವನಹಳ್ಳಿ ಸಮೀಪ ಶನಿವಾರ ಬೆಳಗಿನ ಜಾವ ಶ್ರೀರಾಮ್‌ ವುಡ್‌ ಮತ್ತು ಫರ್ನಿಚರ್‌ ಕಾರ್ಖಾನೆಯಲ್ಲಿ ಸಂಭವಿಸಿದ ಬೆಂಕಿ ದುರಂತದಲ್ಲಿ ಉತ್ತರಪ್ರದೇಶ ಮೂಲದ ಕಾರ್ಮಿಕ ಮೃತಪಟ್ಟಿದ್ದಾನೆ. ₹5 ಕೋಟಿಗೂ ಹೆಚ್ಚು ಮೌಲ್ಯದ ಮರದ ತುಂಡಗಳು ಮತ್ತು ಫರ್ನಿಚರ್‌ ಸಾಮಗ್ರಿ ಸುಟ್ಟು ಭಸ್ಮವಾಗಿವೆ.  

ಉತ್ತರಪ್ರದೇಶದ ಗೋವಿಂದ (24) ಮೃತಪಟ್ಟ ಕಾರ್ಮಿಕ. ಭಾರಿ ಪ್ರಮಾಣದಲ್ಲಿ ಬೆಂಕಿ ಆವರಿಸಿದ್ದರಿಂದ ಭಯದಿಂದ ಕಾರ್ಖಾನೆಯಲ್ಲಿಯೇ ಉಳಿದ ಗೋವಿಂದ ಬೆಂಕಿಗೆ ಸಿಲುಕಿ ಮೃತಪಟ್ಟಿದ್ದಾರೆ. 

ಕಾರ್ಖಾನೆಯಲ್ಲಿಯೇ ವಾಸವಾಗಿದ್ದ ಬೇರೆ ರಾಜ್ಯಗಳ 24 ಕಾರ್ಮಿಕರು ಹೊರಗೆ ಓಡಿ ಬಂದು ಪ್ರಾಣ ರಕ್ಷಿಸಿಕೊಂಡಿದ್ದಾರೆ. ಬೆಳಗಿನ ಜಾವ 3.30ಕ್ಕೆ ಬೆಂಕಿ ತಗುಲಿ ಗಾಳಿಗೆ ಕೆನ್ನಾಲಿಗೆ ಕಾರ್ಖಾನೆಯ ಇತರ ಕಡೆ ವ್ಯಾಪಿಸಿದ್ದರಿಂದ ಮರದ ತುಂಡುಗಳು ಹೊತ್ತು ಉರಿದಿವೆ. ಬೆಂಕಿ ನಂದಿಸಲು ಅಗ್ನಿಶಾಮಕ ದಳದ ಸಿಬ್ಬಂದಿ ಪರದಾಡಿದರು. 

ADVERTISEMENT

ಎಲೆಕ್ಟ್ರಾನಿಕ್‌ಸಿಟಿ, ಸರ್ಜಾಪುರ, ಜಯನಗರ, ಆನೇಕಲ್‌ ಅಗ್ನಿಶಾಮಕ ದಳದ ಐದಕ್ಕೂ ಹೆಚ್ಚು ವಾಹನ ಮತ್ತು ಸಿಬ್ಬಂದಿ ಸತತ ಏಳು ತಾಸಿಗೂ ಹೆಚ್ಚು ಸಮಯ ಕಾರ್ಯಾಚರಣೆ ನಡೆಸಿ ಬೆಂಕಿ ನಂದಿಸುವಲ್ಲಿ ಯಶಸ್ವಿಯಾದರು. 

ಶ್ರೀರಾಮ್‌ ಪುಡ್‌ ಕಾರ್ಖಾನೆ ಪಕ್ಕದಲ್ಲಿಯೇ ಆಶೀರ್ವಾದ್‌ ಪೈಪ್‌, ಟಿಂಬರ್ಸ್‌ ಕಾರ್ಖಾನೆಗಳಿದ್ದು ಅಲ್ಲಿಗೂ ಬೆಂಕಿ ಹಬ್ಬಿತ್ತು. ಅಗ್ನಿಶಾಮಕ ದಳದ ಸಿಬ್ಬಂದಿ ಬೆಂಕಿ ನಂದಿಸಿ ಅಪಾಯ ತಪ್ಪಿಸಿದರು.

ಎಲೆಕ್ಟ್ರಿಕ್‌ ಶಾರ್ಟ್‌ ಸರ್ಕಿಟ್‌ ಅಥವಾ ಕಾರ್ಮಿಕರು ಅಡುಗೆ ಮಾಡಿಕೊಳ್ಳುತ್ತಿದ್ದ ಮನೆಯಿಂದ ಬೆಂಕಿ ಹೊತ್ತಿರಬಹುದು ಎಂದು ಪೊಲೀಸರು ಅನುಮಾನಿಸಿದ್ದಾರೆ.

ಎಸ್‌ಪಿ ಸಿ.ಕೆ. ಬಾಬಾ, ಎಎಸ್ಪಿ ನಾಗೇಶ್‌ ಕುಮಾರ್, ಡಿವೈಎಸ್ಪಿ ಮೋಹನ್‌ ಕುಮಾರ್ ಘಟನಾ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದರು.

ಬೆಂಕಿಯಿಂದಾಗಿ ಹೊತ್ತು ಉರಿಯುತ್ತಿರುವ ಕಾರ್ಖಾನೆ ಮರದ ತುಂಡುಗಳು
ಬೆಂಕಿ ನಂದಿಸಿದ ಅಗ್ನಿಶಾಮಕ ದಳದ ಸಿಬ್ಬಂದಿ
ಕಾರ್ಖಾನೆಯ ಒಳಭಾಗದ ಮರದ ತುಂಡುಗಳು ಹೊತ್ತು ಉರಿಯುತ್ತಿರುವುದು

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.