ಹೊಸಕೋಟೆ: ಜಿಲ್ಲೆಯಲ್ಲಿಯೇ ಅತಿ ದೊಡ್ಡ ತಾಲ್ಲೂಕು ಕೇಂದ್ರ ಎನಿಸಿಕೊಂಡಿರುವ ಹೊಸಕೋಟೆ ದಿನೇ ದಿನೇ ಬೆಳೆಯುತ್ತಿದ್ದು, ನಗರದಲ್ಲಿ ಉತ್ಪತ್ತಿ ಆಗುತ್ತಿರುವ ಕಸವನ್ನು ಸೂಕ್ತವಾಗಿ ವಿಲೇವಾರಿ ಮಾಡುವಲ್ಲಿ ಸ್ಥಳೀಯ ನಗರಸಭೆ, ಗ್ರಾಮ ಪಂಚಾಯಿತಿಗಳು ವಿಫಲವಾಗಿವೆ. ಇದರಿಂದ ನಗರಕ್ಕೆ ಬರುವವರಿಗೆ ಕಸದ ರಾಶಿ ಸ್ವಾಗತ ಕೋರುತ್ತಿದೆ.
ಅನೇಕ ರಾಷ್ಟ್ರೀಯ ಹೆದ್ದಾರಿಗಳು ಹೊಸಕೋಟೆ ಮಾರ್ಗವಾಗಿ ಹಾದು ಹೋಗುತ್ತವೆ. ಹೆದ್ದಾರಿಯ ಇಕ್ಕೆಲ್ಲಗಳು ಸಂಪೂರ್ಣ ತ್ಯಾಜ್ಯಮಯವಾಗಿದ್ದು, ಈ ರಸ್ತೆಯಲ್ಲಿ ಸಂಚರಿಸುವ ಆಂಧ್ರ ಮತ್ತು ತಮಿಳುನಾಡಿದ ಜನತೆಗೆ ಕಸದ ರಾಶಿಗಳು ಸ್ವಾಗತ ಕೋರುತ್ತಿವೆ.
ನಗರದ ಚಿಂತಾಮಣಿ ರಸ್ತೆ ಮತ್ತು ಸೂಲಿಬೆಲೆ ರಸ್ತೆ ಕೆರೆಯಂಚಿನಲ್ಲಿ ಹಾದು ಹೋಗುತ್ತವೆ. ಇಲ್ಲಿ ಕಟ್ಟಡ ಮತ್ತು ಇನಬ್ನಿತರ ತ್ಯಾಜ್ಯವನ್ನು ತಂದು ಸುರಿಯಲಾಗುತ್ತಿದೆ. ಮಳೆ ಬಂದಾಗ ತ್ಯಾಜ್ಯದ ನೀರು ಕೆರೆ ಸೇರಿ ಕಲುಷಿತವಾಗುತ್ತಿದೆ.
ಡಿ.5 ಅನ್ನು ವಿಶ್ವ ಮಣ್ಣಿನ ದಿನವಾಗಿ ಆಚರಿಸಲಾಗುತ್ತಿದೆ. ಪ್ಲಾಸ್ಟಿಕ್ ಅತಿ ಬಳಕೆಯಿಂದ ಆಗುತ್ತಿರುವ ದುಷ್ಪರಿಣಾಮ ಕುರಿತು ಜನರಲ್ಲಿ ಎಷ್ಟೇ ಜಾಗೃತಿ ಮೂಡಿಸಿದರು. ಪ್ಲಾಸ್ಟಿಕ್ ಬಳಕೆಗೆ ಕಡಿವಾಣ ಬಿದ್ದಿಲ್ಲ. ಹೀಗಾಗಿ ರಸ್ತೆಯ ಅಂಚಿನಲ್ಲಿ ಎಸೆದಿರುವ ಕಸದಲ್ಲಿ ಪ್ಲಾಸ್ಟಿಕ್‌ನದ್ದೇ ಸಿಂಹಪಾಲು.
ರಸ್ತೆಗಳ ಅಂಚಿನಲ್ಲಿ ಸುರಿದಿರುವ ತ್ಯಾಜ್ಯದಲ್ಲಿ ಆಹಾರ ಹುಡುಕುಲು ನಾಯಿಗಳ ದಂಡು ರಸ್ತೆ ಒಕ್ಕೆಲ್ಲಗಳಲ್ಲಿ ಸೇರಿರುತ್ತವೆ. ಇಲ್ಲಿ ದ್ವಿಚಕ್ರ ವಾಹನದಲ್ಲಿ ಸಂಚರಿಸುವವರು ಪ್ರಾಣವನ್ನು ಅಂಗೈನಲ್ಲಿ ಇಟ್ಟುಕೊಂಡು ಸಾಗಬೇಕು. ಅಲ್ಲದೆ ನಾಯಿಗಳ ಓಡಾಡದಿಂದ ಹಲವು ಬಾರಿ ಅಪಘಾತವು ಸಂಭವಿಸಿದೆ. ತ್ಯಾಜ್ಯ ಮತ್ತು ನಾಯಿಯಿಂದ ಮುಂದಾಗುವ ಅಪಾಯ ತಪ್ಪಿಸಲು ಅಧಿಕಾರಿಗಳು ಕ್ರಮ ವಹಿಸಬೇಕೆಂದು ಸ್ಥಳೀಯರು ಒತ್ತಾಯಿಸಿದ್ದಾರೆ.
ನಗರದಲ್ಲಿ ನಿಗದಿತ ಸಮಯಕ್ಕೆ ಕಸ ವಿಲೇವಾರಿ ಮಾಡದ ಕಾರಣ ಅಶುಚಿತ್ವ ತಾಂಡವವಾಡುತ್ತಿದ್ದು, ಸಾಂಕ್ರಾಮಿಕ ಕಾಯಿಲೆ ಹರಡುವ ಭೀತಿ ಎದುರಾಗಿದೆ. ನಗರವನ್ನು ಸ್ವಚ್ಛ ಮತ್ತು ಸುಂದರ ನಗರವನ್ನಾಗಿ ರೂಪಿಸುವ ಕುರಿತು ಬಾಯಿ ಮಾತಿನಲ್ಲಿ ಹೇಳುವ ಜನಪ್ರತಿನಿಧಿ ಮತ್ತು ಅಧಿಕಾರಿಗಳು ಅದನ್ನು ಕಾರ್ಯರೂಪಕ್ಕೆ ತರಲು ಪ್ರಾಮಾಣಿಕವಾಗಿ ಶ್ರಮಿಸಲಿ ಎಂದು ನಾಗರಿಕರು ಆಗ್ರಹಿಸಿದ್ದಾರೆ.
Cut-off box - ನಿರ್ಲಕ್ಷ್ಯ ಹೊಸಕೋಟೆಯಿಂದ ಚಿಂತಾಮಣಿ ಮಾರ್ಗದಲ್ಲಿ ಹಲವು ಕಡೆಗಳಲ್ಲಿ ಕಸದ ರಾಶಿಗಳು ಬಿದ್ದಿದ್ದು ಅವುಗಳನ್ನು ವಿಲೇವಾರಿ ಮಾಡಬೇಕಾದ ಸ್ಥಳೀಯ ಗ್ರಾಮ ಪಂಚಾಯಿತಿಗಳು ಸಂಪೂರ್ಣವಾಗಿ ನಿರ್ಲಕ್ಷ್ಯವಹಿಸಿವೆ. ಹೊಸಕೋಟೆ ಸಿದ್ದಾರ್ಥ ನಗರದ ತಿರುವು ಚಿಕ್ಕಹುಲ್ಲೂರು ಚಿಕ್ಕಹಳ್ಳಿ ಕೈಗಾರಿಕಾ ಪ್ರದೇಶ ನಂದಗುಡಿಗಳಲ್ಲಿ ಕಸದ್ದೇ ದರ್ಬಾರ್ ಆಗಿದೆ. ರಾಮಚಂದ್ರ ಪ್ರಯಾಣಿಕ *** ರಸ್ತೆಯ ಒಕ್ಕೆಲ್ಲಗಳಲ್ಲಿ ಸುರಿಯುತ್ತಿರುವ ಕಸದಿಂದ ಕೆಟ್ಟ ವಾತಾವರಣ ನಿರ್ಮಾಣವಾಗುತ್ತಿದೆ. ಹೊಸಕೋಟೆ ನಗರ ಸೌಂದರ್ಯಕ್ಕೆ ದಕ್ಕೆ ಆಗುತ್ತಿದೆ. ಕಸ ಮುಕ್ತ ನಗರವನ್ನಾಗಿ ಮಾಡಲು ಅಧಿಕಾರಿಗಳು ಯೋಜನೆ ರೂಪಿಸಬೇಕು ಶ್ರೀನಿವಾಸ್ ನಾಗರಿಕ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.