ಹೊಸಕೋಟೆ: ದಿನೇದಿನೇ ಹೆಚ್ಚಾಗುತ್ತಿರುವ ಜನದಟ್ಟಣೆಯಿಂದ ಹೊಸಕೋಟೆ ನಗರದಲ್ಲಿ ಕಸದ ಪ್ರಮಾಣವೂ ಹೆಚ್ಚಾಗುತ್ತಿದೆ. ಅವೈಜ್ಞಾನಿಕ ಕಸ ವಿಲೇವಾರಿಯಿಂದ ನಗರದಲ್ಲಿ ಕಸದ ಸಮಸ್ಯೆ ಹೆಚ್ಚಾಗುತ್ತಿದೆ.
31 ವಾರ್ಡ್‌ಗಳನ್ನು ಹೊಂದಿರುವ ಹೊಸಕೋಟೆ ನಗರಸಭೆಗೆ ಕಸದ ಸಮಸ್ಯೆ, ಚರಂಡಿ ಸಮಸ್ಯೆ, ಟ್ರಾಫಿಕ್ ಸಮಸ್ಯೆಗಳು ಹೆಚ್ಚಾಗುತ್ತಿವೆ.
ವಾರ್ಡ್‌ಗಳಲ್ಲಿ ಸಂಗ್ರಹಿಸುವ ಕಸವನ್ನು ತುಂಬಿಕೊಂಡ ಕಸದ ವಾಹನ ವಿಲೇವಾರಿಗೆ ಸೂಕ್ತ ಸ್ಥಳವಿಲ್ಲದ ಕಾರಣ ದಿನ ಪೂರ್ತಿ ನಗರದಲ್ಲಿರುವ ನಗರಸಭೆ ಕಚೇರಿಯ ಆವರಣದಲ್ಲಿ ನಿಲ್ಲುತ್ತವೆ. ಅಧಿಕಾರಿಗಳು ಮತ್ತು ಸ್ಥಳೀಯ ಜನಪ್ರತಿನಿಧಿಗಳು ಈ ಸಮಸ್ಯೆ ಪರಿಹಾರಕ್ಕೆ ಮುಂದಾಗದಿರುವುದು ವಿಪರ್ಯಾಸ.
ನಗರಸಭೆಗೆ ಬರುವ ಸಾರ್ವಜನಿಕರು ಕಸದ ವಾಸನೆಗೆ ಮೂಗು ಮುಚ್ಚಿಕೊಂಡು ನಿಲ್ಲಬೇಕಿದೆ. ಈ ವಾಸನೆಯಲ್ಲಿಯೇ ಕೆಲಸ ಮಾಡಬೇಕಾದ ಸ್ಥಿತಿಯಲ್ಲಿ ನಗರಸಭೆ ಅಧಿಕಾರಿಗಳು ಇದ್ದಾರೆ. ಕಸದಿಂದ ಒಸರುವ ನೀರು ರಸ್ತೆಯುದ್ದಕ್ಕೂ ಹರಿಯುತ್ತದೆ.
₹9 ಕೋಟಿ ವೆಚ್ಚದಲ್ಲಿ ಕಸ ಸಂಗ್ರಹಣ ಘಟಕ ನಿರ್ಮಾಣ: ತಾಲ್ಲೂಕಿನ ಕುಂಬಳಹಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕಲ್ಲಹಳ್ಳಿ ಗ್ರಾಮದ ಬಳಿಯಲ್ಲಿ ಸುಮಾರು 12 ಎಕರೆ ವ್ಯಾಪ್ತಿಯಲ್ಲಿ ನಗರದ ಕಸವನ್ನು ಸಂಗ್ರಹಿಸಿ, ವಿಂಗಡಿಸಿ ವೈಜ್ಞಾನಿಕ ವಿಲೇವಾರಿ ಮಾಡಲು ಘಟಕವನ್ನು ನಿರ್ಮಾಣ ಮಾಡಲಾಗಿದೆ. ಸುಮಾರು ₹9.50 ಕೋಟಿ ವೆಚ್ಚದಲ್ಲಿ ನಿರ್ಮಾಣ ಮಾಡಲಾಗಿರುವ ಘಟಕವು ಅಂತಿಮ ಹಂತಕ್ಕೆ ಬಂದಿದ್ದರೂ ಅದು ಇನ್ನೂ ಬಳಕೆಗೆ ಬರುತ್ತಿಲ್ಲ.
ಹೊಸಕೋಟೆ ನಗರದಲ್ಲಿ ದಿನಕ್ಕೆ 25 ಟನ್ ಕಸ ಉತ್ಪತ್ತಿಯಾಗುತ್ತಿದೆ. ಅದನ್ನು ಸೂಕ್ತವಾಗಿ ವಿಲೇವಾರಿ ಮಾಡಲು ಬೇಕಾದ ಸೌಲಭ್ಯಗಳು ನಗರಸಭೆಯಲ್ಲಿ ಇಲ್ಲದಂತಾಗಿದೆ. ಇತ್ತೀಚೆಗೆ ನಗರಸಭೆಯಲ್ಲಿ ಕಸ ಸಂಗ್ರಹಿಸುವ ವಾಹನಗಳ ಪ್ರಮಾಣ ಕಡಿಮೆಯಾಗಿದ್ದು, ಎರಡು ದಿನಕ್ಕೊಮ್ಮೆ ಕಸದ ವಾಹನ ಸಂಚರಿಸುತ್ತಿದೆ.
ಕಲ್ಲಹಳ್ಳಿ ಬಳಿಯಲ್ಲಿ ಸ್ಥಾಪನೆಯಾಗುತ್ತಿರುವ ಕಸ ಸಂಗ್ರಹಣಾ ಘಟಕವು ಅಂತಿಮ ಹಂತಕ್ಕೆ ಬಂದಿದೆ. ಕೆಲವೊಂದು ಯಂತ್ರೋಪಕರಣ ಅಗತ್ಯವಿದ್ದು, ಈ ಕುರಿತು ಮುಂದಿನ ಸಭೆಯಲ್ಲಿ ಚರ್ಚಿಸಿ ಅಗತ್ಯ ಕ್ರಮ ಕೈಗೊಳ್ಳಲಾಗುವುದು ಎಂದು ಅಧ್ಯಕ್ಷೆ ನಗರಸಭೆ ಆಶಾ ರಾಜಶೇಖರ್ ಹೇಳಿದರು.
ನಗರದಲ್ಲಿ ದಿನ ಕಳೆದಂತೆ ಕಸದ ಸಮಸ್ಯೆ ದೊಡ್ಡ ಮಟ್ಟದಲ್ಲಿ ಶುರುವಾಗಿದೆ. ನಗರದಲ್ಲಿ ಈವರೆಗೂ ಕಸದ ವೈಜ್ಞಾನಿಕ ವಿಲೇವಾರಿಗೆ ಬೇಕಾದ ಕಸ ಸಂಗ್ರಹಣಾ ಘಟಕ ಸ್ಥಾಪನೆ ಮಾಡದಿರುವುದು ಶೋಚನೀಯ. ಇಚ್ಚಾಶಕ್ತಿ ಕೊರತೆ ಕಾರಣದಿಂದ ಕಸದ ಸಮಸ್ಯೆ ಗಂಭೀರವಾಗುತ್ತಾ ಹೋಗುತ್ತಿದೆ. ಕಲ್ಲಹಳ್ಳಿಯ ಕಸ ಸಂಗ್ರಹಣ ಘಟಕವನ್ನು ತೆರೆದು ಸಮಸ್ಯೆಗೆ ಮುಕ್ತಿ ದೊರಕಿಸುವ ಕೆಲಸವಾಗಬೇಕು ಎಂದು ಸಾಮಾಜಿಕ ಕಾರ್ಯಕರ್ತ ವರದಾಪುರ ನಾಗರಾಜ್ ಒತ್ತಾಯಿಸಿದರು.
ಹೊಸಕೋಟೆ ಬೆಳೆಯುತ್ತಿದೆ. ಅದಕ್ಕೆ ತಕ್ಕದಾಗಿ ಕಸದ ಸಮಸ್ಯೆಯೂ ಹೆಚ್ಚಾಗಿದೆ. ಹೊಸಕೋಟೆ ನಗರದ ಕಸದೊಂದಿಗೆ ಹೊರಗಿನವರೂ ಕಸ ತಂದು ನಗರದಲ್ಲಿ ಸುರಿಯುತ್ತಿದ್ದಾರೆ. ಕಲ್ಲಹಳ್ಳಿ ಗ್ರಾಮದ ಬಳಿಯ ಕಸ ಸಂಗ್ರಹಣಾ ಘಟಕಕ್ಕೆ ಸಂಬಂಧಿಸಿದಂತೆ ಜಿಲ್ಲಾಧಿಕಾರಿ ಜೊತೆ ಚರ್ಚಿಸಲಾಗಿದೆ. ಆದಷ್ಟು ಬೇಗ ಸೂಕ್ತ ಪರಿಹಾರ ಕಂಡುಕೊಳ್ಳಲಾಗುವುದು. ನೀಲಲೋಚನ ಪ್ರಭು ನಗರಸಭೆ ಆಯುಕ್ತರು
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.