ADVERTISEMENT

ತುಪ್ಪದ ಮಸಾಲೆ ದೋಸೆಗೆ ಮನಸೋಲದವರು ಯಾರು?

ಎಂ.ಮುನಿನಾರಾಯಣ
Published 30 ಜೂನ್ 2024, 5:12 IST
Last Updated 30 ಜೂನ್ 2024, 5:12 IST
ನಾಣಿ ಹೋಟೆಲ್‌ನಲ್ಲಿ ಸಿದ್ಧವಾಗುವ ಆಹಾರ
ನಾಣಿ ಹೋಟೆಲ್‌ನಲ್ಲಿ ಸಿದ್ಧವಾಗುವ ಆಹಾರ   

ವಿಜಯಪುರ(ದೇವನಹಳ್ಳಿ): ಪಟ್ಟಣದ ಗಾಂಧಿಚೌಕದಲ್ಲಿರುವ ‘ನಾಣಿ ಹೋಟೆಲ್‌’ನಲ್ಲಿ ತಯಾರಿಸುವ ತುಪ್ಪದ ಮಸಾಲೆ ದೋಸೆ ರಾಜ್ಯದ ವಿವಿಧ ಭಾಗಗಳ ಜನರನ್ನು ಆಕರ್ಷಿಸುತ್ತಿದೆ.

65 ವರ್ಷಗಳ ಹಿಂದೆ ನಾರಾಯಣರಾವ್ ಆರಂಭಿಸಿದ್ದ ಈ ಹೋಟೆಲ್‌ ಅನ್ನು ಈಗ ಮೂರನೇ ತಲೆಮಾರಿನವರು ನಡೆಸುತ್ತಿದ್ದಾರೆ. ಆರಂಭದ ದಿನಗಳಲ್ಲಿ ಇದ್ದ ಅದೇ ಸ್ವಾದ, ಗುಣಮಟ್ಟವನ್ನು ಕಾಪಾಡಿಕೊಂಡು ಬರುತ್ತಿದೆ.

ವಾರವಿಡೀ ದಿನಕ್ಕೊಂದು ತಿಂಡಿಗಳನ್ನು ತಯಾರಿಸಿದರೂ, ಇಲ್ಲಿ ತಯಾರಾಗುವ ಮಸಾಲೆ ದೋಸೆ ರುಚಿಗೆ ಜನರು ಮನಸೋತಿದ್ದಾರೆ. ನಂದಿನಿ ತುಪ್ಪದಿಂದ ತಯಾರಾಗುವ ಮಸಾಲೆ ದೋಸೆ ₹70ಕ್ಕೆ ಮಾರಾಟವಾಗುತ್ತದೆ. ಚಿತ್ರಾನ್ನ, ಪುಳಿಯೊಗರೆ, ಇಡ್ಲಿ, ವಡೆ, ಪುಲಾವ್, ವಾಂಗಿಬಾತ್, ಕೇಸರಿ ಬಾತ್, ಉಪ್ಪಿಟ್ಟು ಮೊದಲಾದ ಆಹಾರ ಇಲ್ಲಿ ತಯಾರಾಗುತ್ತದೆ.

ADVERTISEMENT

ಪ್ರತಿದಿನ ಬೆಳಿಗ್ಗೆ 7ರಿಂದ 11 ಗಂಟೆ ಹಾಗೂ ಮಧ್ಯಾಹ್ನ 2ರಿಂದ 7 ಗಂಟೆವರೆಗೆ ಗ್ರಾಹಕರು ಬರುತ್ತಾರೆ. ಬೆಂಗಳೂರು, ತುಮಕೂರು, ಕೋಲಾರ, ಮಂಗಳೂರು, ಚಿಕ್ಕಬಳ್ಳಾಪುರ ಸೇರಿದಂತೆ ಬೇರೆ ಬೇರೆ ಭಾಗಗಳಿಂದ ಹೋಟೆಲ್‌ ಹುಡುಕಿಕೊಂಡು ಇಲ್ಲಿಗೆ ಬಂದು ಮಸಾಲೆ ದೋಸೆ ಸವಿಯುತ್ತಾರೆ. ಇದರೊಂದಿಗೆ ಚಹಾ ಸವಿದು ಹೋಗುತ್ತಾರೆ. ಭಾನುವಾರ ವಿಶೇಷ ಖಾದ್ಯಗಳನ್ನು ತಯಾರಿಸುತ್ತಾರೆ.

ವಾರಾಂತ್ಯದ ದಿನ, ರಜೆ ದಿನಗಳಂದು ಚಿಕ್ಕಬಳ್ಳಾಪುರದ ನಂದಿಬೆಟ್ಟ, ಈಶಾ ಫೌಂಡೇಷನ್, ಕೈವಾರ, ಮುರುಗಮಲ್ಲ, ಮುಂತಾದ ಪ್ರವಾಸಿ ತಾಣಗಳಿಗೆ ಹೋಗುವವರು, ಇಲ್ಲಿಗೆ ಬಂದು ಇಲ್ಲಿನ ರುಚಿ ಸವಿಯುತ್ತಾರೆ. ಪ್ರತಿವರ್ಷ ಮಾರ್ಚ್ ತಿಂಗಳಿನಲ್ಲಿ ನಡೆಯುವ ನಗರೇಶ್ವರ ಸ್ವಾಮಿ ರಥೋತ್ಸವದಂದು ಬೂದುಕುಂಬಳಕಾಯಿ, ರವೆ ಮುಂತಾದ ಪದಾರ್ಥಗಳನ್ನು ಹಾಕಿ ದೊಮ್‌ರೋಟ್‌ ತಯಾರಿಸುವುದು ಇಲ್ಲಿನ ವಿಶೇಷ. ವರ್ಷದಲ್ಲಿ ಎರಡು ದಿನ ಮಾತ್ರ ಇದನ್ನು ತಯಾರಿಸಲಾಗುತ್ತದೆ. ಇದಕ್ಕಾಗಿ ತಿಂಗಳ ಮೊದಲೇ ಬುಕ್ಕಿಂಗ್ ಮಾಡಿಕೊಂಡು ಬಂದು ಖರೀದಿಸಿಕೊಂಡು ಹೋಗುತ್ತಾರೆ ಎನ್ನುತ್ತಾರೆ ಶೇಷಗಿರಿರಾವ್.

ತುಪ್ಪದ ಮಸಾಲೆ ದೋಸೆ
ವಿಜಯಪುರದ ಗಾಂಧಿಚೌಕದಲ್ಲಿರುವ ನಾಣಿ ಹೋಟೆಲ್‌ನಲ್ಲಿ ತಯಾರಾಗುತ್ತಿರುವ ತುಪ್ಪದ ಮಸಾಲೆ ದೋಸೆ
ನಮ್ಮ ತಾತ ಗ್ರಾಮೀಣ ಭಾಗದಲ್ಲಿ ಸ್ಥಾಪಿಸಿರುವ ಈ ಹೋಟೆಲ್‌ಗೆ ಬರುವ ಗ್ರಾಹಕರು ಕಡಿಮೆ ಬೆಲೆಯಲ್ಲಿ ಸಂತೃಪ್ತಿಯಾಗಿ ತಿಂಡಿ ತಿಂದು ಹೋಗುತ್ತಾರೆ. ಗುಣಮಟ್ಟದಲ್ಲಿ ರಾಜಿ ಇಲ್ಲ. ಬೆಲೆ ಏರಿಕೆ ಮಾಡಬೇಕಾದರೂ ಗ್ರಾಹಕರ ಗಮನಕ್ಕೆ ತಂದು ಮಾಡಿದ್ದೇವೆ.
ನಾಗೇಂದ್ರ ನಾಣಿ ಹೋಟೆಲ್‌ ಮಾಲೀಕ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.