ADVERTISEMENT

ಸರ್ಕಾರಿ ಶಾಲೆ ವಿದ್ಯಾರ್ಥಿಗಳಿಗೆ ಮೀಸಲಾತಿ ನೀಡಿ

ಸರ್ಕಾರಿ ಉದ್ಯೋಗದಲ್ಲಿ ಆದ್ಯತೆ ಸಿಗಲಿ; ಕನ್ನಡ ಜಾಗೃತಿ ವೇದಿಕೆ ಆಗ್ರಹ

​ಪ್ರಜಾವಾಣಿ ವಾರ್ತೆ
Published 19 ಜುಲೈ 2024, 16:01 IST
Last Updated 19 ಜುಲೈ 2024, 16:01 IST
ಆನೇಕಲ್‌ನಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಸಂಘಟನೆಯ ರಾಜ್ಯ ಘಟಕದ ಅಧ್ಯಕ್ಷ ಮಂಜುನಾಥ ದೇವ ಮಾತನಾಡಿದರು
ಆನೇಕಲ್‌ನಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಸಂಘಟನೆಯ ರಾಜ್ಯ ಘಟಕದ ಅಧ್ಯಕ್ಷ ಮಂಜುನಾಥ ದೇವ ಮಾತನಾಡಿದರು   

ಆನೇಕಲ್ : ಸರ್ಕಾರಿ ಶಾಲೆಗಳ ಅಭಿವೃದ್ಧಿ ಪಡಿಸಬೇಕು. ಈ ನಿಟ್ಟಿನಲ್ಲಿ ಸರ್ಕಾರಿ ಶಾಲೆಯಲ್ಲಿ ವಿದ್ಯಾಭ್ಯಾಸ ಮಾಡಿದ ವಿದ್ಯಾರ್ಥಿಗಳಿಗೆ ಸರ್ಕಾರಿ ಉದ್ಯೋಗದಲ್ಲಿ ಮೀಸಲಾತಿ ನೀಡಬೇಕು ಎಂದು ಕನ್ನಡ ಜಾಗೃತಿ ವೇದಿಕೆ ಒತ್ತಾಯಿಸಿದೆ.

ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ರಾಜ್ಯ ಘಟಕದ ಅಧ್ಯಕ್ಷ ಮಂಜುನಾಥ್‌ ದೇವ, ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಸ್ಥಳೀಯರಿಗೆ ಮತ್ತು ಕನ್ನಡಿಗರಿಗೆ ಖಾಸಗಿ ವಲಯದಲ್ಲಿ ಮೀಸಲಾತಿ ಕಲ್ಪಿಸುವ ವಿಧೇಯಕ ಮಂಡಿಸಲು ಸಿದ್ಧತೆ ನಡೆಸಿದ್ದರು. ಆದರೆ ಕೆಲವು ಕೈಗಾರಿಕೋದ್ಯಮಿಗಳ ವಿರುದ್ಧ ವ್ಯಕ್ತಪಡಿಸಿದ್ದರಿಂದ ಹಿಂದೆ ಸರಿದಿದ್ದಾರೆ. ಆದರೆ ಕನ್ನಡಿಗರ ಹಿತಾಸಕ್ತಿಗಾಗಿ ಖಾಸಗಿ ವಲಯದಲ್ಲಿ ಮೀಸಲಾತಿ ನೀಡುವುದದ ಜೊತೆಗೆ ಸರ್ಕಾರಿ ಕೆಲಸಗಳಲ್ಲಿ ಸರ್ಕಾರಿ ಶಾಲೆಗಳ ವಿದ್ಯಾರ್ಥಿಗಳಿಗೆ ಮೀಸಲಾತಿ ನೀಡಬೇಕು ಎಂದು ಆಗ್ರಹಿಸಿದರು.

ಕೆಲವು ಉದ್ಯಮಿಗಳು ರಾಜ್ಯ ಸರ್ಕಾರವನ್ನು ಎದರಿಸುವ ಕೆಲಸ ಮಾಡುತ್ತಿದ್ದಾರೆ. ಆದರೆ ಇದು ಒಳ್ಳೆಯ ಬೆಳವಣಿಗೆಯಲ್ಲ. ಕೇರಳ ಮತ್ತು ಆಂಧ್ರಪ್ರದೇಶದ ಕೈಗಾರಿಕ ಸಚಿವರು ಕರ್ನಾಟಕದಲ್ಲಿ ಬಂಡವಾಳ ಹೂಡಿರುವ ಕೈಗಾರಿಕೋದ್ಯಮಿಗಳನ್ನು ಸೆಳೆಯುತ್ತಿದ್ದಾರೆ. ಈ ಎರಡು ರಾಜ್ಯಗಳ ಸಾವಿರಾರು ಮಂದಿ ಕರ್ನಾಟಕದಲ್ಲಿ ಉದ್ಯೋಗಗಳಲ್ಲಿ ತೊಡಗಿದ್ದಾರೆ. ಹಾಗಾಗಿ ಈ ಉದ್ಯೋಗಿಗಳನ್ನು ತಮ್ಮ ರಾಜ್ಯಗಳಿಗೆ ಕರೆಯಿಸಿಕೊಳ್ಳಿ. ಕರ್ನಾಟಕ ಅಸ್ಮಿತೆಯನ್ನು ಪ್ರಶ್ನಿಸುವವರಿಗೆ ಕನ್ನಡ ಪರ ಸಂಘಟನೆಗಳು ತಕ್ಕ ಉತ್ತರ ನೀಡಲಿವೆ ಎಂದರು.

ADVERTISEMENT

ಉತ್ತರ ಕರ್ನಾಟಕ ಸೇರಿದಂತೆ ರಾಜ್ಯದ ಎಲ್ಲಾ ಯುವಕರಿಗೆ ಉದ್ಯೋಗ ನೀಡುವ ಸಲುವಾಗಿ ರಾಜ್ಯ ಸರ್ಕಾರ ದಿಟ್ಟ ನಿರ್ಧಾರ ಕೈಗೊಳ್ಳಬೇಕು. ಪದವಿ, ಸ್ನಾತಕೋತ್ತರ ಪದವಿ ಪಡೆದಿರುವವರು ₹10-15 ಸಾವಿರಕ್ಕೆ ಕೆಲಸ ಮಾಡುತ್ತಿದ್ದಾರೆ. ಹಾಗಾಗಿ ಅವರಿಗೆ ಉದ್ಯೋಗಗಳು ದೊರೆಯುವಂತಾಗಬೇಕು. ಕರ್ನಾಟಕದಲ್ಲಿರುವ ಕೈಗಾರಿಕೆಗಳು ಕರ್ನಾಟಕದವರಿಗೆ ಉದ್ಯೋಗ ನೀಡಬೇಕು. ಕಾರ್ಖಾನೆಗಳ ಸ್ಥಾಪನೆಗಾಗಿ ಕಡಿಮೆ ಬೆಲೆಗೆ ಭೂಮಿ ಬೇಕು, ವಿದ್ಯುತ್‌ ವಿನಾಯಿತಿ ಬೇಕು. ಆದರೆ ಕನ್ನಡಿಗರು ಉದ್ಯೋಗಕ್ಕೆ ಬೇಡ ಎಂದರೆ ನ್ಯಾಯವೇ? ಎಂದು ಪ್ರಶ್ನಿಸಿದರು.

ಮುಖಂಡರಾದ ಕೆ.ನಾಗರಾಜು, ನಾಗರತ್ನ, ಆರ್.ಎಸ್‌.ಎಸ್.ರವಿ, ಸತೀಶ್, ಮಣಿ, ಜಾವೇದ್‌, ರವಿ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.