ADVERTISEMENT

ಕನ್ನಡ ಭಾಷೆಗೆ ಜಾಗತೀಕರಣದ ಕುತ್ತು: ಬಿ.ಎನ್. ಕೃಷ್ಣಪ್ಪ ಕಳವಳ

ದೇವನಹಳ್ಳಿ 26ನೇ ತಾಲ್ಲೂಕು ಕನ್ನಡ ಸಾಹಿತ್ಯ ಸಮ್ಮೇಳನ

​ಪ್ರಜಾವಾಣಿ ವಾರ್ತೆ
Published 5 ಫೆಬ್ರುವರಿ 2021, 3:23 IST
Last Updated 5 ಫೆಬ್ರುವರಿ 2021, 3:23 IST
ಸಮ್ಮೇಳನವನ್ನು ಉದ್ಘಾಟಿಸಿದ ಆನಂದ್ ಗುರೂಜಿ. ಸಮ್ಮೇಳನ ಅಧ್ಯಕ್ಷ ಕೃಷ್ಣಪ್ಪ ಇತರರು ಇದ್ದರು (ಎಡಚಿತ್ರ) ಮೆರವಣಿಗೆಯಲ್ಲಿ ಗಮನ ಸೆಳೆದ ವೀರಗಾಸೆ
ಸಮ್ಮೇಳನವನ್ನು ಉದ್ಘಾಟಿಸಿದ ಆನಂದ್ ಗುರೂಜಿ. ಸಮ್ಮೇಳನ ಅಧ್ಯಕ್ಷ ಕೃಷ್ಣಪ್ಪ ಇತರರು ಇದ್ದರು (ಎಡಚಿತ್ರ) ಮೆರವಣಿಗೆಯಲ್ಲಿ ಗಮನ ಸೆಳೆದ ವೀರಗಾಸೆ   

ದೇವನಹಳ್ಳಿ: ಜಾಗತೀಕರಣ, ಉದಾರೀಕರಣ ಪರಿಣಾಮ ಬಹುರಾಷ್ಟ್ರೀಯ ಕಂಪನಿಗಳು ರಾಜ್ಯದಲ್ಲಿ ಸ್ಥಾಪನೆ ನಂತರ ಕನ್ನಡ ಭಾಷೆ ಮತ್ತು ಸಂಸ್ಕೃತಿಗೆ ಪೆಟ್ಟು ಬೀಳುತ್ತಿದೆ ಎಂದು ತಾಲ್ಲೂಕು ಕನ್ನಡ ಸಾಹಿತ್ಯ ಸಮ್ಮೇಳನಾಧ್ಯಕ್ಷ ಬಿ.ಎನ್.ಕೃಷ್ಣಪ್ಪ ಭಾಷಣದಲ್ಲಿ ಕಳವಳ ವ್ಯಕ್ತಪಡಿಸಿದರು.

ಇಲ್ಲಿನ ಡಾ.ಬಿ.ಆರ್.ಅಂಬೇಡ್ಕರ್ ಭವನದಲ್ಲಿ 26ನೇ ತಾಲ್ಲೂಕು ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷತೆ ವಹಿಸಿ ಮಾತನಾಡಿದರು.

ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಸಾಹಿತ್ಯ ಪರಿಷತ್‌ ಹಾಗೂ ಕನ್ನಡಪರ ಸಂಘಟನೆಗಳು ಕನ್ನಡ ಭಾಷಾ ಬೆಳವಣಿಗೆಗೆ ಶ್ರಮಿಸುತ್ತಿವೆ. ಗ್ರಾಮೀಣ ಪ್ರದೇಶದಲ್ಲಿರುವಂತೆ ನಗರ ಪ್ರದೇಶದಲ್ಲೂ ಕನ್ನಡ ಭಾಷೆ ಬೆಳವಣಿಗೆಗೆ ಶ್ರಮಿಸಬೇಕಾಗಿದೆ ಎಂದು ಕಿವಿಮಾತು ಹೇಳಿದರು.

ADVERTISEMENT

ದೇವನಹಳ್ಳಿ ಕೆಂಪೇಗೌಡ ಅಂತರರಾಷ್ಟ್ರೀಯ ವಿಮಾನ ನಿಲ್ದಾಣ ಹೊಂದಿರುವ ತಾಲ್ಲೂಕು. ಟಿಪ್ಪು ಜನ್ಮಸ್ಥಳ, ನಾಡಪ್ರಭು ಕೆಂಪೇಗೌಡರ ಕರ್ಮಭೂಮಿ. ಪಾರಂಪರಿಕ ಜೀವ ವೈವಿಧ್ಯಮಯ ಹುಣಸೆತೋಪು, ಬಿಳಿಚಿನ್ನ ಕೊಯಿರಾ ಕಲ್ಲುಗಳಿಂದ ಖ್ಯಾತಿ ಹೊಂದಿದೆ. ತಾಲ್ಲೂಕು ಇತ್ತ ಪರಿಪೂರ್ಣ ನಗರವೂ ಅಲ್ಲ; ಅತ್ತ ಗ್ರಾಮೀಣ ಪ್ರದೇಶವೂ ಅಲ್ಲ. ಇಂತಹ ಸಂದಿಗ್ಧ ಸ್ಥಿತಿಯಲ್ಲಿದ್ದರೂ ಬಹುರಾಷ್ಟ್ರೀಯ ಕಂಪನಿ
ಗಳು ತಲೆ ಎತ್ತುತ್ತಿವೆ. ವಿಮಾನ ನಿಲ್ದಾಣಕ್ಕೆ ಜಮೀನು ನೀಡಿದ ರೈತರ ಮಕ್ಕಳಿಗೆ ಉದ್ಯೋಗವಿಲ್ಲ ಎಂದು ವಿಷಾದಿಸಿದರು.

ಸರ್ಕಾರ ಪ್ರಸ್ತುತ ವರ್ಷವನ್ನು ಕನ್ನಡ ಕಾಯಕ ವರ್ಷ ಎಂದು ಘೋಷಿಸಿದೆ. ಕನ್ನಡ ಭಾಷೆ ಅಭಿವೃದ್ಧಿಗಾಗಿ ಕಾಯಕ ವರ್ಷದ ಕಾರ್ಯ ಯೋಜನೆ ತ್ವರಿತವಾಗಿ ಜಾರಿಗೊಳಿಸಬೇಕಾಗಿದೆ. ರಾಜ್ಯದ ಗಡಿಭಾಗದ ಜಿಲ್ಲೆಗಳಲ್ಲಿ ನೆಲ, ಜಲ, ಭಾಷೆ ಮತ್ತು ಸಂಸ್ಕೃತಿಗೆ ಮಾರಕ ಹೇಳಿಕೆ, ಘಟನೆಗಳು ನಡೆಯುತ್ತಿರುವುದು ವಿಷಾದದ ಸಂಗತಿ ಎಂದರು.

’ಹುಲ್ಲಾಗು ಬೆಟ್ಟದಡಿ ಮನೆಗೆ ಮಲ್ಲಿಗೆಯಾಗು. ಕಲ್ಲಾಗು ಕಷ್ಟಗಳ ಮಳೆವಿಧಿ ಸುರಿಯೇ, ಕಲ್ಲುಸಕ್ಕರೆಯಾಗು ದೀನದುರ್ಬಲರಂಗೆ ಎಲ್ಲರೊಳಗೊಂದಾಗು ಮಂಕುತಿಮ್ಮ‘ ಎಂಬ ಡಿ.ವಿ.ಜಿ ಕವಿವಾಣಿಯಂತೆ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾಗಿದ್ದ ಸಾಹಿತಿ ಡಾ.ಕಮಲಹಂಪನಾ ಈ ಊರಿನವರು.

ಗಾನಗಾರುಡಿಗ ಸಿ.ಅಶ್ವಥ್, ನಿತ್ಯೋತ್ಸವ ಕವಿ ಡಾ.ಕೆ.ಎಸ್.ನಿಸಾರ್ ಅಹಮದ್, ಕವಿ ತ.ಪು.ವೆಂಕಟರಾಮ್, ಕವಿ ವಿ.ಸೀತಾರಾಮಯ್ಯ, ದಿವಾನ್ ಪೂರ್ಣಯ್ಯ ಅವರ ಕರ್ಮಭೂಮಿ ಇದೇ ತಾಲ್ಲೂಕು ಎಂದರು.

ತಾಲ್ಲೂಕಿನಲ್ಲಿ ವಿಮಾನ ನಿಲ್ದಾಣ ಆರಂಭದ ನಂತರ ಕೃಷಿ ಕ್ಷೇತ್ರ ಮೊಟಕುಗೊಳ್ಳುತ್ತಿದೆ. ಕೃಷಿ ಭೂಮಿ ಕೈಗಾರಿಕೆ, ವಾಣಿಜ್ಯ, ಹೋಟಲ್ ಉದ್ಯಮಿಗಳಿಗೆ ಗಗನಚುಂಬಿ ಕಟ್ಟಡಗಳಾಗಿ ಮಾರ್ಪಾಡಾಗುತ್ತಿದೆ. ಶಿಕ್ಷಣ ಸಂಸ್ಥೆಗಳಿಗೆ ಕೊರತೆ ಇಲ್ಲ. ಕೃಷಿ ಪ್ರಧಾನವಾಗಿರುವ ತಾಲ್ಲೂಕಿನಲ್ಲಿ ದೇಸಿ ಕೃಷಿ ಮತ್ತು ಆಧುನಿಕ ಬೇಸಾಯ ರೂಢಿಸಿಕೊಂಡು ರೈತರು ಸಾಗುತ್ತಿದ್ದರೂ ಕಳೆದ 30 ವರ್ಷದಿಂದ ಯಾವುದೇ ಕೆರೆಗಳಲ್ಲಿ ಹನಿ ನೀರಿಲ್ಲ. ಶಾಶ್ವತ ನೀರಾವರಿ ಯೋಜನೆಗಳನ್ನು ರೂಪಿಸಬೇಕಾಗಿದೆ ಎಂದರು.

ಅ.ಕ.ಜಿ ವೇದಿಕೆ ಜಿಲ್ಲಾಧ್ಯಕ್ಷ ಬಿ.ಕೆ.ನಾರಾಯಣಸ್ವಾಮಿ ಪ್ರಸ್ತಾವಿಕವಾಗಿ ಮಾತನಾಡಿದರು. ಕ.ಸಾ.ಪ ಜಿಲ್ಲಾಧ್ಯಕ್ಷ ಚಿ.ಮಾ ಸುಧಾಕರ್, ಮಾಜಿ ಸಂಸದ ಸಿ.ನಾರಾಯಣಸ್ವಾಮಿ, ತಾಲ್ಲೂಕು ಕ.ಸಾ.ಪ ಅಧ್ಯಕ್ಷ ಆರ್.ಕೆ.ನಂಜೇಗೌಡ, ಕಾರ್ಯಾಧ್ಯಕ್ಷ ಮೋಹನ್ ಬಾಬು, ಉಪಾಧ್ಯಕ್ಷ ರಾಮಾಂಜಿನಪ್ಪ, ಗೌರವಾ
ಧ್ಯಕ್ಷ ಜಯರಾಮೇಗೌಡ, ಪ್ರಧಾನ ಕಾರ್ಯದರ್ಶಿ ಪರಮೇಶಯ್ಯ, ಕಾರ್ಯದರ್ಶಿ ರಾಜಶೇಖರ್ ಚಾರಿ, ಕೋಶಾಧ್ಯಕ್ಷ ಅಶ್ವಥ್ ಗೌಡ, ಸಂಚಾಲಕ ಮಾರೇಗೌಡ, ಮಹಿಳಾ ಘಟಕ ಅಧ್ಯಕ್ಷೆ ಮಾಧವಿ, ಸಮ್ಮೇಳನ ಸಂಚಾಲಕ ಬಿ.ಕೆ.ಶಿವಪ್ಪ, ಸಂಘಟನಾ ಸಂಚಾಲಕ ಪುಟ್ಟಸ್ವಾಮಿ, ನಗರ ಘಟಕ ಅಧ್ಯಕ್ಷ ರಮೇಶ್ ಕುಮಾರ್, ಜಿ.ಪಂ. ಸದಸ್ಯೆ ಅನಂತಕುಮಾರಿ, ಟಿ.ಎ.ಪಿ.ಎಂ.ಸಿ ಎಸ್ ಅಧ್ಯಕ್ಷ ಮಂಡಿಬೆಲೆ ರಾಜಣ್ಣ, ಸರಿಗಮಪ ಗಾಯನ ಸ್ಪರ್ಧಿ ಕಂಬದ ರಂಗಯ್ಯ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.