ಗೌರಿಬಿದನೂರು: ಮಹರ್ಷಿ ವಾಲ್ಮೀಕಿ ರಚಿತ ರಾಮಾಯಣ ಸರ್ವಕಾಲಿಕ ಶ್ರೇಷ್ಠಗ್ರಂಥ ಎಂದು ಶಾಸಕ ಕೆ.ಎಚ್.ಪುಟ್ಟಸ್ವಾಮಿ ಗೌಡ ಹೇಳಿದರು.
ತಾಲ್ಲೂಕು ಆಡಳಿತ, ನಗರಸಭೆ, ತಾಲ್ಲೂಕು ಪಂಚಾಯಿತಿ ಮತ್ತು ಪರಿಶಿಷ್ಟ ವರ್ಗಗಳ ಕಲ್ಯಾಣ ಇಲಾಖೆ ನಗರದ ಕಲಾ ಭವನದಲ್ಲಿ ಹಮ್ಮಿಕೊಂಡಿದ್ದ ವಾಲ್ಮೀಕಿ ಜಯಂತಿಯಲ್ಲಿಯಲ್ಲಿ ಮಾತನಾಡಿರು.
ಮಹರ್ಷಿ ವಾಲ್ಮೀಕಿ ಭರತ ಖಂಡದ ಆದಿ ಗುರು ಎನ್ನುವುದು ಅತ್ಯಂತ ಸೂಕ್ತವಾಗಿದೆ. ಬೇಡರ ಕುಲದಲ್ಲಿ ಹುಟ್ಟಿ ಹಿಂಸಾ ಪ್ರವೃತ್ತಿಯನ್ನು ಮೈಗೂಡಿಸಿಕೊಂಡಿದ್ದ, ಅವರು ಅಹಿಂಸಾ ಪ್ರವೃತ್ತಿಗೆ ಬದಲಾಗಬೇಕು ಎಂಬ ಸಂಕಲ್ಪ ದೊಂದಿಗೆ ವರ್ಷಾನುಗಟ್ಟಲೆ ತಪಸ್ಸು ಮಾಡಿ, ಯಾವುದೇ ಗುರುವಿಲ್ಲದೆ, ಸ್ವಯಂಭುವಾಗಿ ವಾಲ್ಮೀಕಿಯಾಗಿ ರೂಪುಗೊಂಡರು. ನಾಗರೀಕತೆಯ ಮೂಲ ಪುರುಷರಾದರು ಎಂದು ಹೇಳಿದರು.
ತಹಶೀಲ್ದಾರ್ ಮಹೇಶ್ ಪತ್ರಿ, ರಾಮಾಯಣದಲ್ಲಿ ಮಾನವೀಯ ಮೌಲ್ಯ ಕಾಣಬಹುದು. ಪತಿ–ಪತ್ನಿ, ಅಣ್ಣ ತಮ್ಮ ಭಾಂದವ್ಯ ಹೇಗಿರಬೇಕು, ಕೊಟ್ಟ ಮಾತನ್ನು ಹೇಗೆ ಉಳಿಸಿಕೊಳ್ಳಬೇಕು? ಎಂಬ ಮಾನವೀಯ ಮೌಲ್ಯಗಳನ್ನು ತಿಳಿಸಿದೆ ಎಂದರು.
ಅಖಿಲ ಕರ್ನಾಟಕ ವಾಲ್ಮೀಕಿ ಮಹಾಸಭಾ ಉಪಾಧ್ಯಕ್ಷ ಬಸವಯ್ಯ ಕೊಸಕೋಟೆ, ವಾಲ್ಮೀಕಿ ಸಮುದಾಯವು ಆರ್ಥಿಕ, ಶೈಕ್ಷಣಿಕ ಮತ್ತು ಸಾಮಾಜಿಕವಾಗಿ ಹಿಂದುಳಿದಿದೆ. ಇದಕ್ಕೆ ಶಿಕ್ಷಣವೇ ಮದ್ದು ಎಂದು ತಿಳಿಸಿದರು.
ಎಸ್‌ಎಸ್‌ಎಲ್‌ಸಿಯಲ್ಲಿ ಹೆಚ್ಚು ಅಂಕ ಗಳಿಸಿದ ಸಮುದಾಯದ ವಿದ್ಯಾರ್ಥಿಗಳಿಗೆ ಸನ್ಮಾನ ಮಾಡಲಾಯಿತು.
ಕಾರ್ಯಕ್ರಮಕ್ಕೂ ಮುನ್ನ ಅದ್ದೂರಿ ಮೆರವಣಿಗೆ ನಡೆಯಿತು.
ಅಧ್ಯಕ್ಷೆ ಲಕ್ಷ್ಮಿ ನಾರಾಯಣಪ್ಪ, ಉಪಾಧ್ಯಕ್ಷ ಫರೀದ್, ನಗರಸಭೆ ಪೌರಾಯುಕ್ತೆ ಡಿ.ಎಂ. ಗೀತಾ, ಪಂಚಾಯಿತಿ ಕಾರ್ಯನಿರ್ವಾಹಕ ಅಧಿಕಾರಿ ಜೆ.ಕೆ ಹೊನ್ನಯ್ಯ, ಸಮಾಜ ಕಲ್ಯಾಣ ಅಧಿಕಾರಿ ಚಿನ್ನಪ್ಪ ಗೌಡ ನಾಯ್ಕರ್, ಅಂಜಿನಪ್ಪ, ಬಿಇಒ ಶ್ರೀನಿವಾಸ್ ಮೂರ್ತಿ, ವಲಯ ಅರಣ್ಯಧಿಕಾರಿ ಹಂಸವಿ , ವಾಲ್ಮೀಕಿ ನಾಯಕ ಸಂಘದ ಅಧ್ಯಕ್ಷ ಬಾಬಣ್ಣ, ರಾಘವೇಂದ್ರ ಹನುಮಾನ್, ನಗರಸಭೆ ಸದಸ್ಯರಾದ ಮಂಜುಳಾ ಉಪಸ್ಥಿತರಿದ್ದರು.
ಹಗರಣ; ಬಾರದ ಅನುದಾನ
ಸಮುದಾಯಕ್ಕೆ ಹಿನ್ನೆಡೆ ವಾಲ್ಮೀಕಿ ಹಗರಣದಿಂದ ಸಮುದಾಯಕ್ಕೆ ಹಿನ್ನೆಡೆಯಾಗಿದೆ. ಯಾವುದೇ ಅನುದಾನ ಬರುತ್ತಿಲ್ಲ. ಶಾಸಕರು ವಿಧಾನ ಸಭೆಯಲ್ಲಿ ಪ್ರಸ್ತಾಪ ಮಾಡಿ ಸಮುದಾಯಕ್ಕೆ ಹೆಚ್ಚಿನ ಅನುಕೂಲ ಮಾಡಿಕೊಡಬೇಕು ಎಂದು ಸಮುದಾಯ ಮುಖಂಡ ಆರ್. ಅಶೋಕ್ ಒತ್ತಾಯಿಸಿದರು. ತಾಲ್ಲೂಕಿನಲ್ಲಿ ಸಮುದಾಯದ ಜನಸಂಖ್ಯೆ 60000 ಇದೆ. ಆದರೂ ನಮ್ಮನ್ನು ಗಣನೆಗೆ ತೆಗೆದುಕೊಳ್ಳುತ್ತಿಲ್ಲ. ನಗರದಲ್ಲಿ ಸ್ಮಶಾನದ ಮುಂಭಾಗದಲ್ಲಿ ವಾಲ್ಮೀಕಿ ಭವನ ನಿರ್ಮಿಸಲಾಗಿದೆ ಇದು ಉದ್ಘಾಟನೆಯಾದರು ಸಮುದಾಯಕ್ಕೆ ಯಾವುದೇ ಪ್ರಯೋಜವಾಗಿಲ್ಲ ಎಂದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.