ADVERTISEMENT

ಹೊಸಕೋಟೆ: ಖಾಸಗಿಗೆ ಸಡ್ಡು ಹೊಡೆವ ಸರ್ಕಾರಿ ಕಾಲೇಜು

ಎನ್.ಡಿ.ವೆಂಕಟೇಶ್‌
Published 17 ಮೇ 2024, 6:38 IST
Last Updated 17 ಮೇ 2024, 6:38 IST
   

ಹೊಸಕೋಟೆ: ಇಲ್ಲಿಯ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಮತ್ತು ಸಂಶೋಧನಾ ಸಂಸ್ಥೆ (ಜಿಎಫ್‌ಜಿಸಿ) ಒಂದೇ ಸೂರಿನ ಅಡಿ ಸಮಗ್ರ ಶಿಕ್ಷಣ ದೊರೆಯುತ್ತಿದ್ದು, ಸುಮಾರು 1,800ಕ್ಕೂ ಹೆಚ್ಚು ವಿದ್ಯಾರ್ಥಿಗಳು ಕಲಿಯುತ್ತಿದ್ದಾರೆ.

ಮೂಲಸೌಕರ್ಯ ಮತ್ತು ಸಂಪನ್ಮೂಲಗಳಿಂದ ಜಿಲ್ಲೆಯಲ್ಲಿಯೇ ಅತ್ಯುತ್ತಮ ಶೈಕ್ಷಣಿಕ ವಾತಾವರಣ‌ ಇರುವ ಕಾಲೇಜು ಎನಿಸಿದೆ.

ಈ ಹಿಂದೆ ಪದವಿ ಮುಗಿದರೆ ಮುಂದಿನ ಶಿಕ್ಷಣಕ್ಕಾಗಿ ಬೆಂಗಳೂರಿಗೆ ಹೋಗಬೇಕಿತ್ತು. ತಾವಿದ್ದಲ್ಲಿಯೇ ಸ್ನಾತಕೋತ್ತರ ಶಿಕ್ಷಣ, ಸಂಶೋಧನೆ ಮತ್ತು ಉನ್ನತ ಶಿಕ್ಷಣ ಪಡೆದುಕೊಳ್ಳಲು ಸಾಧ್ಯವಿರಲಿಲ್ಲ. ಈಗ ಹೊಸಕೋಟೆಯಲ್ಲಿ ಜಿಎಫ್‌ಜಿಸಿಯಲ್ಲಿ ಪದವಿ ನಂತರದ ಕೋರ್ಸ್‌ ಪೂರೈಸಬಹುದಾಗಿದೆ.

ADVERTISEMENT

ಕಾಲೇಜಿನಲ್ಲಿ ಸುಮಾರು ಮೂರು ವರ್ಷಗಳಿಂದ ವಾಣಿಜ್ಯಶಾಸ್ತ್ರ, ಭೌತಶಾಸ್ತ್ರ ಮತ್ತು ರಾಜ್ಯಶಾಸ್ತ್ರ ಸೇರಿ ಮೂರು ವಿಷಯಗಳಲ್ಲಿ ಸ್ನಾತಕೋತ್ತರ ಪದವಿ ನಡೆಸಲಾಗುತ್ತಿದೆ. ಇವುಗಳ ಜೊತೆ ಕನ್ನಡ, ಅರ್ಥಶಾಸ್ತ್ರ, ಇತಿಹಾಸ ಮತ್ತು ಗಣಿತ ವಿಷಯದಲ್ಲಿ ಸ್ನಾತಕೋತ್ತರ ಪದವಿ ತೆರೆಯಲು ಅನುಮತಿ ಕೋರಿ ಉತ್ತರ ವಿಶ್ವವಿದ್ಯಾಲಯಕ್ಕೆ ಪ್ರಸ್ತಾವನೆ ಕಳುಹಿಸಲಾಗಿದೆ.

ಕಾಲೇಜು ಈಗಾಗಲೇ ಸಂಶೋಧನೆ ಕೇಂದ್ರವಾಗಿಯೂ ಅನುಮತಿ ಪಡೆದಿದ್ದು, ಮೂರು ವಿಷಯಗಳಲ್ಲಿ 10 ಪ್ರಾಧ್ಯಾಪಕರು ಸಂಶೋಧನಾ ಮಾರ್ಗದರ್ಶಕರಾಗಿ ಕೆಲಸ ಮಾಡುತ್ತಿದ್ದಾರೆ. ಈ ಪ್ರಾಧ್ಯಾಪಕರ ಅಡಿ ಈ ಬಾರಿ ಒಟ್ಟು 20 ಕ್ಕೂ ಹೆಚ್ಚು ಸಂಶೋಧನಾರ್ಥಿಗಳು ಪ್ರವೇಶ ಪಡೆಯುವ ನಿರೀಕ್ಷೆ ಇದೆ.

ಈವರೆಗೂ ಸುಮಾರು 11 ವಿವಿಧ ರ‍್ಯಾಂಕ್ ಪದಕ ಪಡೆಯಲಾಗಿದೆ. ವರ್ಷದಿಂದ ವರ್ಷಕ್ಕೆ ವಿದ್ಯಾರ್ಥಿಗಳು ಪಡೆಯುತ್ತಿರುವ ಪದಕಗಳ ಸಂಖ್ಯೆ ಹೆಚ್ಚಾಗುತ್ತಲೇ ಇವೆ.

ಪಿಯು ನಂತರದ ಶಿಕ್ಷಣಕ್ಕಾಗಿ ದೂರದ ಊರಿಗೆ ಹೋಗಬೇಕೆಂದರೆ ಪೋಷಕರ ಸಮ್ಮತಿ ಸಿಗುವುದಿಲ್ಲ. ಈಗ ಹೊಸಕೋಟೆಯಲ್ಲಿ ಪದವಿ, ಸ್ನಾತಕೋತ್ತರ ಮತ್ತು ಪಿಎಚ್‌.ಡಿ ಸೇರಿ ಉನ್ನತ ಶಿಕ್ಷಣ ಇಲ್ಲಿ ದೊರೆಯುತ್ತಿರುವುದರಿಂದ ಗ್ರಾಮೀಣ‌ ವಿದ್ಯಾರ್ಥಿಗಳಿಗೆ ಅನುಕೂಲ ಆಗಿದೆ ಎನ್ನುತ್ತಾರೆ ತಾಲ್ಲೂಕಿನ ವಿದ್ಯಾರ್ಥಿಗಳು.

ಕಾಲೇಜಿನಲ್ಲಿ ನುರಿತಬೋಧಕ ವರ್ಗ, ಅತ್ಯಾಧುನಿಕ ವಿಜ್ಞಾನ ಪ್ರಯೋಗಾಲಯ, ಗ್ರಂಥಾಲಯ, ವಾಚನಾಲಯ, ಅತ್ಯುತ್ತಮ ಕ್ರೀಡಾಂಗಣ, ಸ್ಮಾರ್ಟ್‌ ತರಗತಿಗಳು, ಕ್ಯಾಂಟೀನ್ ವ್ಯವಸ್ಥೆ, ಅತ್ಯಾಧುನಿಕ ಶೌಚಾಲಯ ವ್ಯವಸ್ಥೆ ಇದೆ.

ಪಠ್ಯೇತರ ಚಟುವಟಿಕೆಯಲ್ಲೂ ಮುಂದು

ಕಾಲೇಜಿನಲ್ಲಿ ಪಠ್ಯಕ್ಕೆ ಮಾತ್ರವಲ್ಲದೆ ಪಠ್ಯೇತರ ಚಟುವಟಿಕೆಗಳಿಗೂ ಹೆಚ್ಚಿನ ಆದ್ಯತೆ ನೀಡಲಾಗುತ್ತಿದೆ. ಕಾಲೇಜಿನಲ್ಲಿ ಎನ್‌ಎಸ್‌ಎಸ್, ಎನ್‌ಸಿಸಿ, ಸ್ಕೌಟ್ಸ್ ಅಂಡ್ ಗೈಡ್ಸ್, ರೆಡ್‌ಕ್ರಾಸ್, ರೇಂಜರ್ಸ್ ಆ್ಯಂಡ್‌ ರೋವರ್ಸ್ ಹೀಗೆ ಹಲವು ವ್ಯಕ್ತಿತ್ವ ವಿಕಸನ, ಸಾಮಾಜಿಕ ಕಾಳಜಿ ಬೆಳೆಸುವ ಪಠ್ಯೇತರ ಚಟುವಟಿಕೆ ನಡೆಸಲಾಗುತ್ತಿದೆ.

ಅದರೊಂದಿಗೆ ಕ್ರೀಡೆಯಲ್ಲಿಯೂ ಅತ್ಯುತ್ತಮ ಸಾಧನೆ ಮಾಡಿದ ವಿದ್ಯಾರ್ಥಿಗಳು ಕಾಲೇಜಿನಲ್ಲಿ ಇದ್ದಾರೆ. ಇದೇ ಫೆಬ್ರವರಿ ತಿಂಗಳಲ್ಲಿ ಕಾಲೇಜಿನಿಂದ ತನುಶ್ರೀ ಮತ್ತು ಕಲ್ಪನಾಚಾವ್ಲಾ ಎಂಬ ಇಬ್ಬರು ವಿದ್ಯಾರ್ಥಿನಿಯರು ರಾಷ್ಟ್ರಮಟ್ಟದ ಥ್ರೋಬಾಲ್ ಕ್ರೀಡಾಕೂಟಕ್ಕೆ ಆಯ್ಕೆಯಾಗಿದ್ದರು. ಅಲ್ಲದೆ ಪ್ರತಿ ವರ್ಷ ಒಂದಲ್ಲಾ ಒಂದು ರಾಜ್ಯ ಮತ್ತು ರಾಷ್ಟ್ರೀಯ ಕ್ರೀಡೆಗಳಿಗೆ ವಿದ್ಯಾರ್ಥಿಗಳು ಆಯ್ಕೆಯಾಗುತ್ತಿದ್ದಾರೆ.

ಕಾಲೇಜಿನ ಬಿಕಾಂ ವಿದ್ಯಾರ್ಥಿ ಎಸ್.ಆರ್ಯ ಭುವನೇಶ್ವರದಲ್ಲಿ ನಡೆಯುತ್ತಿರುವ 27ನೇ ರಾಷ್ಟ್ರೀಯ ಪೆಡರೇಷನ್ ಕಪ್ ಅಥ್ಲೆಟಿಕ್ಸ್ ಕ್ರೀಡಾಕೂಟದಲ್ಲಿ ಉದ್ದ ಜಿಗಿತದಲ್ಲಿ ಬೆಳ್ಳಿ ಪದಕ ಪಡೆದುಕೊಂಡಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.