ವಿಜಯಪುರ(ದೇವನಹಳ್ಳಿ): ನದಿ, ನಾಲೆಗಳಗಳ ಆಸರೆಯಿಲ್ಲದೆ ಅಂತರ್ಜಲವನ್ನೆ ನಂಬಿ ದ್ರಾಕ್ಷಿ ಬೆಳೆಯುತ್ತಿರುವ ರೈತರ ಪಾಲಿಗೆ ಇತ್ತಿಚೆಗೆ ಬೀಳುತ್ತಿರುವ ಮಳೆ ಮತ್ತು ಮಂಜು ಕಂಟಕವಾಗಿ ಪರಿಣಮಿಸಿವೆ.
ಹೋಬಳಿಯ ಬಿಜ್ಜವಾರ, ಇರಿಗೇನಹಳ್ಳಿ, ವೆಂಕಟಗಿರಿಕೋಟೆ, ಹಾರೋಹಳ್ಳಿ, ಬೀಡಿಗಾನಹಳ್ಳಿ, ದಿನ್ನೂರು, ಚನ್ನರಾಯಪಟ್ಟಣ, ಗೊಡ್ಲುಮುದ್ದೇನಹಳ್ಳಿ, ರಂಗನಾಥಪುರ, ಚೀಮಾಚನಹಳ್ಳಿ, ದೊಡ್ಡಸಾಗರಹಳ್ಳಿ, ಹೊಸಹುಡ್ಯ, ಸಿಂಗವಾರ ಸೇರಿದಂತೆ ಹಲವಾರು ಕಡೆ ದ್ರಾಕ್ಷಿ ಬೆಳೆಯುತ್ತಿದ್ದು, ಬೆಳಿಗ್ಗೆ ಹಾಗೂ ಸಂಜೆ ವೇಳೆ ವಾತಾವರಣದಲ್ಲಿ ತೇವಾಂಶ ಹೆಚ್ಚಾಗುತ್ತಿರುವ ಜೊತೆ ಮಂಜು ಬೀಳುತ್ತಿದೆ. ಮುಂಜಾನೆ 4 ಗಂಟೆಯಿಂದ ಬೆಳಿಗ್ಗೆ 8 ಗಂಟೆವರೆಗೆ ಮಂಜು ಬೀಳುತ್ತಿದ್ದು, ದ್ರಾಕ್ಷಿ ಬೆಳೆಯ ಎಲೆಗಳ ಮೇಲೆ ಬಿದ್ದ ಮಂಜಿನ ಹನಿಗಳಿಂದ ಡೌನಿಮಿಲ್ಡ್ (ಎಲೆಗಳ ಹಿಂಭಾಗದಲ್ಲಿ ಪೌಡರ್ ಮಾದರಿಯಲ್ಲಿ) ರೋಗ ಕಾಣಿಸಿಕೊಂಡಿದೆ. ಒಂದು ದಿನ ಔಷಧಿ ಸಿಂಪಡಣೆ ಮಾಡುವುದು ತಡವಾದರೆ, ಈ ರೋಗ ಇಡೀ ತೋಟ ವ್ಯಾಪಿಸುತ್ತದೆ ಎಂದು ದ್ರಾಕ್ಷಿ ಬೆಳೆಗಾರ ವೆಂಕಟೇಶ್ ಹೇಳಿದರು.
‘ಡೌನಿಮಿಲ್ಡ್ ರೋಗಕ್ಕೆ ತುತ್ತಾದ ತೋಟಗಳಲ್ಲಿ ರೋಗ ನಿಯಂತ್ರಣ ಮಾಡದಿದ್ದರೆ, ಕ್ರಮೇಣವಾಗಿ ಅಕ್ಕಪಕ್ಕದ ತೋಟಗಳಿಗೂ ಈ ರೋಗ ವ್ಯಾಪಿಸುತ್ತದೆ. ದ್ರಾಕ್ಷಿ ಎಲೆಗಳಲ್ಲಿನ ನೀರಿನ ಅಂಶವನ್ನೆಲ್ಲಾ ಹೀರಿಕೊಳ್ಳುತ್ತದೆ. ಪೌಡರ್ ಮಾದರಿಯಲ್ಲಿ ಗಾಳಿಯಲ್ಲಿ ಸಂಚರಿಸಿ, ಇತರೆ ಬೆಳೆಗಳ ಮೇಲೆ ಕೂರುತ್ತದೆ. ತೋಟಗಳಲ್ಲಿ ಪಾಲಿನೇಷನ್ ಆಗುತ್ತಿರುವ ದ್ರಾಕ್ಷಿಗೂ ಕಂಟಕವಾಗುತ್ತದೆ. ಬೆಳೆಯ ಗುಣಮಟ್ಟ ಹಾಳಾಗುವ ಜೊತೆಗೆ ಇಳುವರಿ ಕುಂಟಿತವಾಗಿ ಹಾಕಿರುವ ಬಂಡವಾಳ ಹೊರಡುವುದಿಲ್ಲ. ನಾವು ಸಾಲಗಾರರಾಗಬೇಕಾಗುತ್ತದೆ’ ಎಂದರು.
ದ್ರಾಕ್ಷಿ ಬೆಳೆಗಾರ ನಂಜುಂಡಪ್ಪ ಮಾತನಾಡಿ, ‘ನಮ್ಮ ತೋಟದಲ್ಲಿ 560 ಗಿಡಗಳಿವೆ. ಔಷಧಿಗಳಿಗೆ ₹1.50 ಲಕ್ಷ, ಬೇಸಾಯಕ್ಕೆ ₹80 ಸಾವಿರ, ಪ್ರೂನಿಂಗ್ ಮಾಡುವುದು, ಔಷಧಿ ಉಜ್ಜುವುದು ಸೇರಿದಂತೆ ಕೂಲಿ ಕಾರ್ಮಿಕರಿಗೆ ₹50 ಸಾವಿರ ಖರ್ಚು ಮಾಡಿದ್ದೇವೆ. ಈ ಬಾರಿ 15 ಟನ್ ಬೆಳೆ ಬರಬಹುದೆಂಬ ನಿರೀಕ್ಷೆ ಇಟ್ಟುಕೊಂಡಿದ್ದೆವು. ಪಾಲಿನೇಷನ್ (ಹೂವಿನಿಂದ ಕಾಯಿಯಾಗುವ ಸಮಯ) ಆಗುವ ವೇಳೆ ಮೋಡ ಮುಸುಕಿದ ವಾತಾವರಣದ ಜೊತೆಗೆ, ಬೆಳಗಿನ ಸಮಯದಲ್ಲಿ ಮಂಜು ದಟ್ಟವಾಗಿ ಬೀಳುತ್ತಿರುವುದರಿಂದ ಎಷ್ಟು ಔಷಧಿಗಳು ಸಿಂಪಡಣೆ ಮಾಡಿದರೂ ರೋಗ ಹತೋಟಿಗೆ ತರಲು ಸಾಧ್ಯವಾಗುತ್ತಿಲ್ಲ. ಬೆಳೆಯಲ್ಲಿ ಇಳುವರಿ ಕಾಪಾಡುವುದಕ್ಕೂ ಅಡ್ಡಿಯಾಗುತ್ತಿದೆ’ ಎಂದು ಆತಂಕ ವ್ಯಕ್ತಪಡಿಸಿದರು.
ರೈತರು, ದ್ರಾಕ್ಷಿಗೆ ಬರುವ ರೋಗಗಳನ್ನು ತಡೆಗಟ್ಟಲು ವಿಪರೀತ ರಾಸಾಯನಿಕ ಬಳಕೆ ಮಾಡುತ್ತಿದ್ದಾರೆ. ಇತ್ತೀಚೆಗೆ ಬಹಳ ಮಂದಿಗೆ ಜಾಗೃತಿ ಮೂಡಿದೆ. ದ್ರಾಕ್ಷಿಯಲ್ಲಿ ವಿಷಕಾರಕ ವಸ್ತು ತೆಗೆಯಲು ಸಾಧ್ಯವಾಗುವುದಿಲ್ಲ. ಇದು ಆರೋಗ್ಯದ ಮೇಲೆ ಕೆಟ್ಟ ಪರಿಣಾಮ ಬೀರುತ್ತದೆ. ಇಲಾಖೆಯಿಂದ ನೀಡುವ ನಿರ್ದೇಶನಗಳನ್ನು ಪಾಲನೆ ಮಾಡಬೇಕು ಎಂದು ಮನವಿ ಮಾಡಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.