ವಿಜಯಪುರ(ದೇವನಹಳ್ಳಿ): ‘ತುಕ್ಕು ಹಿಡಿದ ಕೊಡಗೋಲು, ಚಾಕು ಮತ್ತು ಈಳಿಗೆಗೆ ಸಾಣೆ ಹಿಡಿದು ಅವುಗಳನ್ನು ಚೂಪುಗೊಳಿಸಿ, ಅವು ಪಳ ಪಳ ಹೊಳೆಯುವಂತೆ ಮಾಡುತ್ತೇವೆ. ಆದರೆ ನಮ್ಮ ಜೀವನಕ್ಕೆ ಹೊಳಪು ಸಿಕ್ಕಿಲ್ಲ. ಇದರಲ್ಲಿ ಸಿಗುವ ಕೂಲಿಯಿಂದ ಬದುಕಿನ ಬಂಡಿ ತಳ್ಳುವುದು ಕಷ್ಟವಾಗಿದೆ...’
–ಇದು ಸಾಣೆ ಹಿಡಿಯುವ ಇಮ್ತಿಯಾಜ್ ಅವರ ನೋವಿನ ಮಾತು.
ಮಚ್ಚು, ಚಾಕು, ಕತ್ತರಿ, ಈಳಿಗೆ, ಮಿಕ್ಸಿ ಜಾರ್ ಬ್ಲೆಡ್ ಮತ್ತಿತರ ವಸ್ತುಗಳಿಗೆ ಸಾಣೆ ಹಿಡಿದು ಅವುಗಳನ್ನು ಚೂಪು ಮಾಡಿ, ಹೊಳಪು ನೀಡುವ ಸಾಣೆ ಹಿಡಿಯುವವರು ಬದುಕು ತುಕ್ಕು ಹಿಡಿಯುತ್ತಿದೆ. ಸಾಣೆ ಕೂಲಿಯಿಂದ ಇಂದಿನ ಬೆಲೆ ಏರಿಕೆ ಯುಗದಲ್ಲಿ ಸುಗಮ ಜೀವನ ನಡೆಸುವುದು ಕಷ್ಟವಾಗಿದೆ. ಸಾಣೆ ಹಿಡಿಯುವ ಕಲ್ಲು ಕರಗಿದಂತೆ ನಮ್ಮ ಜೀವನವು ಕರಗುತ್ತಿದೆ ಎಂಬುದು ಅವರ ಅಳಲು.
ಪಟ್ಟಣದಲ್ಲಿ ಸಾಣೆ ಹಿಡಿಯುತ್ತಾ ಸಾಗುವ ವೇಳೆ ವೇಳೆ ಮಾತಿಗೆ ಸಿಕ್ಕ ಸಾಣೆ ಹಿಡಿಯುವವರು ತಮ್ಮ ಸಂಕಷ್ಟದ ಬದುಕು ತೆರೆದಿಟ್ಟರು.
‘ನಾವು ಆಂಧ್ರಪ್ರದೇಶದವರು ನಮ್ಮ ತಂದೆ 40 ವರ್ಷಗಳ ಹಿಂದೆ ವಲಸೆ ಬಂದು ಮುಳಬಾಗಿಲಿನಲ್ಲಿ ನೆಲೆಸಿದ್ದಾರೆ. ನಾವು ಓದಲಿಲ್ಲ. ನಮ್ಮ ತಂದೆಯ ಸಾಣೆ ಹಿಡಿಯುವ ಕಸುಬನ್ನೇ ಮುಂದೆವರೆಸಿದೆವು. ಊರೂರು ಸುತ್ತಿ ಕೆಲಸ ಮಾಡಿಕೊಂಡು ಜೀವನ ನಡೆಸುತ್ತಿದ್ದೇವೆ’ ಎನ್ನುತ್ತಾರೆ ಇಮ್ತಿಯಾಜ್.
‘ಮೊದಲು ಮಾಂಸದ ಮಳಿಗೆ ಇಟ್ಟುಕೊಂಡು ಜೀವನ ನಡೆಸುತ್ತಿದ್ದೆ. ಅದರಲ್ಲಿ ನಷ್ಟ ಆಯಿತು. ಸಾಲ ಪಡೆದು ಮತ್ತೆ ಮತ್ತೆ ತಂದೆ ಕಲಿಸಿದ ಕಸುಬಿಗೆ ವಾಪಸ್ಸು ಬಂದಿದ್ದೇನೆ. ಒಂದೊಂದು ದಿನ ₹100 ವ್ಯಾಪಾರ ಆಗುತ್ತದೆ. ಒಂದೊಂದು ದಿನ ₹600 ಆಗುತ್ತದೆ. ಒಂದೊಂದು ದಿನ ಏನು ಸಿಗುವುದಿಲ್ಲ. ಬೆಲೆ ಏರಿಕೆ ನಡುವೆ ಈ ಹಣದಲ್ಲಿ ಜೀವನ ನಡೆಸುವುದು ಕಷ್ಟವಾಗಿದೆ. ಸರ್ಕಾರ ನಮ್ಮತ್ತ ಗಮನ ಹರಿಸಿ, ಸೌಲಭ್ಯ ಕಲ್ಪಿಸಬೇಕು’ ಎಂದು ಕೋರಿದರು.
‘ಸಾಣೆ ಹಿಡಿಯುವ ಕೆಲಸ ಸುಲಭವಲ್ಲ. ಎಚ್ಚರಿಕೆಯಿಂದ ಮಾಡಬೇಕು. ಸ್ವಲ್ಪ ಎಚ್ಚರ ತಪ್ಪಿದರೂ ಬೆರಳುಗಳಿಗೆ ಅಪಾಯ ಕಟ್ಟಿಟ್ಟಬುತ್ತಿ. ಇದೇ ಕೆಲಸ ನಂಬಿಕೊಂಡು ಕುಟುಂಬ ಪೋಷಣೆಯೊಂದಿಗೆ ಮಕ್ಕಳನ್ನು ಓದಿಸುತ್ತಿದ್ದೇನೆ. ಕೋವಿಡ್‌ಗೂ ಮೊದಲು ಖಾಸಗಿ ಶಾಲೆಗೆ ದಾಖಲಿಸಿದ್ದೆ. ನಂತರದಲ್ಲಿ ಸಂಪಾದನೆ ಕಡಿಮೆಯಾಯಿತು. ಶಾಲೆಯ ಶುಲ್ಕ ಕಟ್ಟಲು ಸಾಧ್ಯವಾಗದೆ ಮಕ್ಕಳನ್ನು ಸರ್ಕಾರಿ ಶಾಲೆಗೆ ಸೇರಿಸಿದ್ದೇನೆ. ದಿನಕ್ಕೆ ₹400 ಕೂಲಿ ಸಿಗುತ್ತೆ. ಇವತ್ತಿನ ಜಯಮಾನಕ್ಕೆ ನಮ್ಮ ಸಂಪಾದನೆ ಯಾವುದಕ್ಕೂ ಸಾಲದು’ ಎಂದು ಸಾಣೆ ಹಿಡಿಯುವ ಮತ್ತೊಬ್ಬ ವ್ಯಾಪಾರಿ ಅನಿಲ್ ಅಳಲು ತೋಡಿಕೊಂಡರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.