ಗುಡಿಬಂಡೆ: ತಾಲೂಕಿನಲ್ಲಿ ಪ್ರತಿ ತಿಂಗಳು ಕನಿಷ್ಠ 5 ಬಾಲ್ಯ ವಿವಾಹ ಪ್ರಕರಣ ಬೆಳಕಿಗೆ ಬರುತ್ತಿದೆ. ಎಲ್ಲ ಪರಿಶಿಷ್ಟರ ಕಾಲೊನಿಗಳಲ್ಲಿ ಜಾಗೃತಿ ಮೂಡಿಸುವ ಮೂಲಕ ಬಾಲ್ಯ ವಿವಾಹಗಳಿಗೆ ಕಡಿವಾಣ ಹಾಕಲಾಗುವುದು ಎಂದು ಪಿಎಸ್ಐ ನಯಾಜ್ ಬೇಗ್ ತಿಳಿಸಿದರು.
ಪಟ್ಟಣದ ಪೊಲೀಸ್ ಠಾಣೆಯಲ್ಲಿ ಸೋಮವಾರ ನಡೆದ ದಲಿತ ಮುಖಂಡರ ಕುಂದುಕೊರತೆ ಸಭೆಯಲ್ಲಿ ಮಾತನಾಡಿದರು.
ಬಹುತೇಕ ಪೋಕ್ಸೋ ಪ್ರಕರಣಗಳಲ್ಲಿ ದಲಿತ ಕಾಲೊನಿಗಳ 18 ವರ್ಷದೊಳಗಿನ ಹೆಣ್ಣು ಮಕ್ಕಳ ಸಂಖ್ಯೆಯೇ ಹೆಚ್ಚಿದೆ. ಈ ಪ್ರಕರಣಗಳನ್ನು ತಡೆಗೆ ಹಾಗೂ ಇವು ನಡೆಯದಂತೆ ಅಗತ್ಯ ಕ್ರಮ ಕೈಗೊಳ್ಳಲಾಗುವುದು. ಇದಕ್ಕೆ ಸ್ಥಳೀಯ ಜನ ಪ್ರತಿನಿಧಿಗಳು, ಸಂಘ–ಸಂಸ್ಥೆಗಳು ಹಾಗೂ ಸಂಬಂಧಪಟ್ಟ ಇಲಾಖೆಗಳ ಅಧಿಕಾರಿಗಳ ಸಹಕಾರ ಅಗತ್ಯ ಎಂದು ಹೇಳಿದರು.
ಜೀವಿಕ ಮುಖಂಡ ನಾರಾಯಣಸ್ವಾಮಿ, ಜೀತಪದ್ಧತಿಯಿಂದ ಬಿಡುಗಡೆಯಾದ ಜೀತ ಮುಕ್ತರಿಗೆ ಸರ್ಕಾರಿ ಯೋಜನೆಗಳಲ್ಲಿ ಆದ್ಯತೆ ನೀಡಬೇಕು. ಉಚಿತವಾಗಿ ಬಿತ್ತನೆಬೀಜ, ಗೊಬ್ಬರ ಒದಗಿಸುವ ಜತೆಗೆ ಕೃಷಿ ಚಟುವಟಿಕೆಗೆ ಪ್ರೋತ್ಸಾಹ ನೀಡಬೇಕು ಎಂದು ಒತ್ತಾಯಿಸಿದರು.
ಗ್ರಾಮ ಪಂಚಾಯಿತಿ ಮಟ್ಟದಲ್ಲಿ ದಲಿತ ಕುಂದು ಕೊರತೆ ಸಭೆ ನಡೆಸಬೇಕು. ಅಹವಾಲು ಆಲಿಸಿ ಸಮಸ್ಯೆಗಳನ್ನು ತ್ವರಿತವಾಗಿ ಇತ್ಯರ್ಥಪಡಿಸಬೇಕು. ಜೊತೆಗೆ ಬಾಲ್ಯ ವಿವಾಹ ತಡೆಗೆ ಪರಿಣಾಮಕಾರಿಯಾಗಿ ಜಾಗೃತಿ ಮೂಡಿಸಬೇಕು ಎಂದು ತಿಳಿಸಿದರು.
ದಲಿತ ಮುಖಂಡ ಎಂ.ಸಿ. ಚಿಕ್ಕನರಸಿಂಹಪ್ಪ, ರೈತರ ಕೃಷಿ ಬೆಳೆಗಳಿಗೆ ಕಾಡು ಹಂದಿ, ನವಿಲು ಮತ್ತು ಜಿಂಕೆಗಳ ಕಾಟ ಹೆಚ್ಚಾಗಿದೆ. ಲಕ್ಷಾಂತರ ರೂಪಾಯಿ ಬಂಡವಾಳ ಹಾಕಿ ಬೆಳೆದ ಬೆಳೆಗಳು ನಾಶ ಆಗುತ್ತಿದೆ. ಈ ಸಂಬಂಧ ಅರಣ್ಯ ಇಲಾಖೆಯವರು ಕ್ರಮ ಕೈಗೊಳ್ಳಬೇಕು. ಅರಣ್ಯ ಪ್ರದೇಶದ ಅಂಚಿನಲ್ಲಿ ತಡೆಗೋಡೆ ನಿರ್ಮಿಸಬೇಕೆಂದು ಒತ್ತಾಯಿಸಿದರು.
ಪಿಎಸ್ಐ ಗಣೇಶ್, ಸಿಬ್ಬಂದಿ ದಕ್ಷಿಣಾಮೂರ್ತಿ, ಅವಿನಾಶ್, ತಾಲ್ಲೂಕು ಮಟ್ಟದ ವಿವಿಧ ಸರ್ಕಾರಿ ಇಲಾಖೆಗಳ ಅಧಿಕಾರಿಗಳಾದ ಕೃಷ್ಣಮೂರ್ತಿ, ಮಂಜುನಾಥ್, ನರಸಿಂಹಮೂರ್ತಿ, ಪೂಜಾಪ್ಪ, ಸದಾಶಿವ, ಜೀವಿಕ ರತ್ನಮ್ಮ, ಜಿಲ್ಲಾ ಸಫಯಿ ಕರ್ಮಚಾರಿ ಸದಸ್ಯ ನಾರಾಯಣಸ್ವಾಮಿ, ಚನ್ನರಾಯಪ್ಪ, ಸುಬ್ಬರಾಯಪ್ಪ, ಆದಿನಾರಾಯಣಪ್ಪ, ರಾಮಾಂಜನೇಯ, ಅಮರಾವತಿ, ದಪ್ಪರ್ತಿ ನಂಜುಂಡ, ನಾರಾಯಣಸ್ವಾಮಿ, ಗಂಗರಾಜು, ಕದಿರಪ್ಪ, ಈಶ್ವರಪ್ಪ ಹಾಜರಿದ್ದರು
ಕಡೇಹಳ್ಳಿಯಲ್ಲಿ ರಸ್ತೆ ವಿಸ್ತರಣೆಗಾಗಿ ಸುಮಾರು 26 ಕುಟುಂಬಗಳು ಮನೆ ಕಳೆದುಕೊಂಡು ಬೀದಿ ಪಾಲಾಗಿವೆ. ತಹಶೀಲ್ದಾರ್‌ಗೆ ಅವರು ಸಂತ್ರಸ್ತರಿಗೆ ಕೂಡಲೇ ನಿವೇಶನ ಕಲ್ಪಿಸಿಕೊಡಬೇಕುಕಡೇಹಳ್ಳಿ ಕದಿರಪ್ಪ ದಲಿತ ಮುಖಂಡ
ಗುಡಿಬಂಡೆ ತಾಲ್ಲೂಕಿನ ಗ್ರಾಮೀಣ ಪ್ರದೇಶಗಳಲ್ಲಿ ಅಕ್ರಮವಾಗಿ ಮದ್ಯ ಮಾರಾಟ ನಡೆಯುತ್ತಿದ್ದು ಕೂಡಲೇ ತಡೆಯಬೇಕು. ಪಟ್ಟಣದ ಬಾರ್‌ಗಳಲ್ಲಿ ಬೆಳಗಾಗುವ ಮುನ್ನವೇ ಮದ್ಯ ಮಾರಾಟ ಆರಂಭವಾಗುತ್ತಿದೆ. ಇದರಿಂದ ಹೆಣ್ಣು ಮಕ್ಕಳು ಓಡಾಡಲು ಕಷ್ಟ ಆಗುತ್ತಿದೆ. ಇದಕ್ಕೆ ಕಡಿವಾಣ ಹಾಕಬೇಕೆಂದು ದಲಿತ ಮುಖಂಡ ಎಂ.ಸಿ. ಚಿಕ್ಕನರಸಿಂಹಪ್ಪ ಆಗ್ರಹಿಸಿದರು. ಪಟ್ಟಣದ ಬಾಲಕಿಯರ ಪ್ರೌಢಶಾಲೆಯಲ್ಲಿ ವಿದ್ಯಾರ್ಥಿನಿಯರು ಕುಳಿತು ಊಟ ಮಾಡಲು ವ್ಯವಸ್ಥೆ ಮಾಡಬೇಕು ಎಂದು ಮನವಿ ಮಾಡಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.