ಹೊಸಕೋಟೆ: ನಗರದಲ್ಲಿ ಹಾದುಹೋಗಿರುವ ಬೆಂಗಳೂರು– ಚೆನ್ನೈ ರಾಷ್ಟ್ರೀಯ ಹೆದ್ದಾರಿ–75 ದಾಟಲು ಜನರ ಅನುಕೂಲಕ್ಕಾಗಿ ಸ್ಕೈವಾಕ್ ನಿರ್ಮಿಸಲಾಗಿದೆ. ಆದರೆ ಅಂಗವಿಕಲರು ಮತ್ತು ಹಿರಿಯ ನಾಗರಿಕರನ್ನು ಗಮನದಲ್ಲಿಟ್ಟುಕೊಂಡು ಲಿಫ್ಟ್ ಅಳವಡಿಸಿಲ್ಲ. ಹೀಗಾಗಿ ಇವರೆಲ್ಲರೂ ಸ್ಕೈವಾಕ್ ಹತ್ತಿ, ಇಳಿಯೋದು ಹೇಗೆ? ಎಂಬ ಪ್ರಶ್ನೆ ಕಾಡುತ್ತಿದೆ.
ಹೆದ್ದಾರಿ ನಿರ್ಮಾಣವಾದ ಬಳಿಕ ರಸ್ತೆ ದಾಟ್ಟುವ ವೇಳೆ ಹಲವು ಮಂದಿ ಪ್ರಾಣ ಕಳೆದುಕೊಳ್ಳುತ್ತಿದ್ದರು. ಅಪಘಾತ ತಪ್ಪಿಸಲು ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದಿಂದ ರಸ್ತೆಯ ಎರಡು ಬದ ಸ್ಕೈವಾಕ್ ನಿರ್ಮಾಣಕ್ಕೆ ಯೋಜನೆ ರೂಪಿಸಲಾಯಿತು. ಅದರಂತೆ ಬಸ್ ನಿಲ್ದಾಣದ ಬಳಿ ಸ್ಕೈವಾಕ್ ನಿರ್ಮಿಸಲಾಗಿದೆ. ಆದರೆ ಲಿಫ್ಟ್ ಅಳವಡಿಸಿಲ್ಲ. ಇದರಿಂದ ಹಿರಿಯ ಜೀವಗಳು ಹಾಗೂ ಅಂಗವಿಕಲರು ಸ್ಕೈವಾಕ್ ಹತ್ತಿ ಇಳಿಯಲು ಸಾಹಸ ಮಾಡಬೇಕಿದೆ.
ಮತ್ತೊಂದು ಸ್ಕೈವಾಕ್ ಗೌತಮ್ ಕಾಲೊನಿ ಬಳಿ ನಿರ್ಮಾಣವಾಗಬೇಕಿದ್ದು, ಇನ್ನೂ ಕಾಮಗಾರಿ ಆರಂಭಿಸಿಲ್ಲ. ಇದರಿಂದ ಪಾದಚಾರಿಗಳಿಗೆ ರಸ್ತೆ ದಾಟಲು ಸಮಸ್ಯೆ ಆಗುತ್ತಿದೆ. ಇಲ್ಲಿ ತಪ್ಪದೆ ಲಿಫ್ಟ್ ಅಳವಡಿಸಬೇಕೆಂದು ಸಾರ್ವಜನಿಕರು ಒತ್ತಾಯಿಸಿದ್ದಾರೆ.
ಅಂಗವಿಕಲರು, ವೃದ್ಧರು ಮತ್ತು ಮಕ್ಕಳಿಗೆ ಸಮಸ್ಯೆಯಾಗುತ್ತಿದೆ. ಸ್ಕೈವಾಕ್ ಬಿಟ್ಟರೆ ಉಳಿದ ಮಾರ್ಗದಲ್ಲಿ ರಸ್ತೆ ದಾಟಬೇಕಾದರೆ ಸುಮಾರು ಎರಡು ದೂರ ಕ್ರಮಿಸಬೇಕು. ಅಷ್ಟು ದೂರ ನಡೆದು ಹೋಗಲು ಸಾಧ್ಯವಾಗದೆ ಕಷ್ಟಪಟ್ಟು ಸ್ಕೈ ವಾಕ್ ಮೂಲಕವೇ ರಸ್ತೆ ದಾಟುತ್ತಿದ್ದಾರೆ.
ಅದಷ್ಟು ಹೇಗ ಸ್ಕೈವಾಕ್‌ಗೆ ಲಿಫ್ಟ್ ಅಳವಡಿಸಬೇಕೆಂದು ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರವನ್ನು ಸಾರ್ವಜನಿಕರು ಒತ್ತಾಯಿಸಿದ್ದಾರೆ.
ನಗರದಲ್ಲಿ ನೆನಗುದಿಗೆ ಬಿದ್ದಿರುವ ಸ್ಕೈವಾಕ್ ಕಾಮಗಾರಿಯನ್ನು ಆರಂಭಿಸಬೇಕು. ಬಸ್ ನಿಲ್ದಾಣದ ಸ್ಕೈ ವಾಕ್‌ಗೆ ಲಿಫ್ಟ್ ಅಳವಡಿಸಬೇಕೆಂದು ಮಾನವ ಹಕ್ಕುಗಳ ಹೋರಾಟಗಾರ ವರದಾಪುರ ನಾಗರಾಜ್ ಒತ್ತಾಯಿಸಿದ್ದಾರೆ.
ವೇಗವಾಗಿ ಬೆಳೆಯುತ್ತಿರುವ ಹೊಸಕೋಟೆಯಿಂದ ಬೇರೆಡೆಗೆ ಪ್ರಯಾಣಿಸುತ್ತಿರುವವರ ಸಂಖ್ಯೆಯೂ ಹೆಚ್ಚಾಗುತ್ತಿದೆ. ತಮ್ಮ ಮಾರ್ಗದ ಬಸ್ ಹಿಡಿಯುವ ದಾವಂತದಲ್ಲಿರುವ ಪ್ರಯಾಣಿಕರು ಸ್ಕೈ ವಾಕ್ ದಾಟುವುದು ಸಮಸ್ಯೆಯಾಗಿ ಪರಿಣಮಿಸಿದೆ. ಆದಷ್ಟು ಬೇಗ ಸ್ಕೈ ವಾಕ್‌ಗೆ ಲಿಪ್ಟ್ ಅಳವಡಿಸಬೇಕೆಂದು ಪ್ರಯಾಣಿಕ ಎಸ್.ವಿಜಯ್‌ಕುಮಾರ್ ಮನವಿ ಮಾಡಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.