ADVERTISEMENT

ಹೊಸಕೋಟೆ ವಿಧಾನಸಭಾ ಕ್ಷೇತ್ರ: ದಿನಕ್ಕೆರಡು ಪಕ್ಷ ಬದಲಿಸುವ ಗ್ರಾಮಸ್ಥರು!

ಮುಂಜಾನೆ ಕಾಂಗ್ರೆಸ್‌, ಸಂಜೆ ಬಿಜೆಪಿ* ಕುಟುಂಬ ರಾಜಕಾರಣದ ಪ್ರತಿಷ್ಠೆಯ ಕಣ ಹೊಸಕೋಟೆ

​ಪ್ರಜಾವಾಣಿ ವಾರ್ತೆ
Published 9 ಏಪ್ರಿಲ್ 2023, 4:53 IST
Last Updated 9 ಏಪ್ರಿಲ್ 2023, 4:53 IST
   

ಹೊಸಕೋಟೆ (ಬೆಂ. ಗ್ರಾಮಾಂತರ): ಪಕ್ಷಕ್ಕಿಂತ ಕುಟುಂಬ ರಾಜಕಾರಣದ ಪ್ರತಿಷ್ಠೆಯ ಕಣವಾಗಿರುವ ಹೊಸಕೋಟೆ ವಿಧಾನಸಭಾ ಕ್ಷೇತ್ರದಲ್ಲಿ ಗ್ರಾಮಸ್ಥರು ದಿನಕ್ಕೆ ಎರಡು ಪಕ್ಷ ಬದಲಾಯಿಸುತ್ತಾರೆ. ಮುಂಜಾನೆಗೊಂದು ಪಕ್ಷ, ಸಂಜೆಗೊಂದು ಪಕ್ಷ ಎಂದು ಪಕ್ಷದಿಂದ ಪಕ್ಷಕ್ಕೆ ಜಿಗಿಯುತ್ತಿರುತ್ತಾರೆ!

ಶಾಸಕ ಶರತ್‌ ಬಚ್ಚೇಗೌಡ ಭೇಟಿಯ ವೇಳೆ ಸಾಮೂಹಿಕವಾಗಿ ಕಾಂಗ್ರೆಸ್‌ಗೆ ಸೇರ್ಪಡೆಯಾಗುವ ಗ್ರಾಮಸ್ಥರು, ಸಚಿವ ಎಂ.ಟಿ.ಬಿ ನಾಗರಾಜ್‌ ಮತ್ತು ಪುತ್ರ ನಿತೀಶ್‌ ಪುರುಷೋತ್ತಮ್‌ ಗ್ರಾಮಕ್ಕೆ ಬಂದರೆ ಸಾಮೂಹಿಕವಾಗಿ ಬಿಜೆಪಿ ಸೇರುತ್ತಾರೆ. ಹೀಗೆ ದಿನಕ್ಕೆ ಎರಡು ಪಕ್ಷ ಬದಲಾಯಿಸುತ್ತಾರೆ!

ಹೊಸಕೋಟೆ ವಿಧಾನಸಭಾ ಕ್ಷೇತ್ರವು ಸಂಸದ ಬಿ.ಎನ್‌. ಬಚ್ಚೇಗೌಡ ಮತ್ತು ಎಂ.ಟಿ.ಬಿ ನಾಗರಾಜ್‌ ಕುಟುಂಬಗಳ ರಾಜಕೀಯ ಪ್ರತಿಷ್ಠೆಯ ಕಣ. ಶಾಸಕ ಶರತ್‌ ಬಚ್ಚೇಗೌಡ ಭೇಟಿ ನೀಡಿದಾಗ ಗ್ರಾಮಸ್ಥರು ಕೈಯಲ್ಲಿ ಕಾಂಗ್ರೆಸ್‌ ಬಾವುಟ, ಹೆಗಲ ಮೇಲೆ ಕಾಂಗ್ರೆಸ್‌ ಶಾಲು ಹಾಕಿಕೊಂಡು ಓಡಾಡುತ್ತಾರೆ. ಸಚಿವ ಎಂ.ಟಿ.ಬಿ. ನಾಗರಾಜ್‌ ಗ್ರಾಮಕ್ಕೆ ಬಂದಾಗ ಬಿಜೆಪಿ ಬಾವುಟ, ಹೆಗಲ ಮೇಲೆ ಬಿಜೆಪಿ ಶಾಲು ಬರುತ್ತದೆ. ಅಧಿಕೃತ ಪಕ್ಷ ಸೇರ್ಪಡೆ ಕಾರ್ಯಕ್ರಮವೂ ನಡೆಯುತ್ತದೆ. ಇಂದು ಬಿಜೆಪಿಯಲ್ಲಿದ್ದವರು ನಾಳೆ ಕಾಂಗ್ರೆಸ್‌ನಲ್ಲಿರುತ್ತಾರೆ.

ADVERTISEMENT

ಹೊಸಕೋಟೆ ವಿಧಾನಸಭಾ ಕ್ಷೇತ್ರದಲ್ಲಿ ಅಭ್ಯರ್ಥಿಗಳು ಅದಲು ಬದಲು ಆಗಿದ್ದಾರೆ. 2018ರಲ್ಲಿ ನಡೆದ ವಿಧಾನ ಚುನಾವಣೆಯಲ್ಲಿ ಎಂ.ಟಿ.ಬಿ. ನಾಗರಾಜ್‌ ಕಾಂಗ್ರೆಸ್‌ನಿಂದ ಮತ್ತು ಶರತ್‌ ಬಚ್ಚೇಗೌಡ ಬಿಜೆಪಿಯಿಂದ ಸ್ಪರ್ಧಿಸಿದ್ದರು. ಆಗ ಗೆಲುವು ಸಾಧಿಸಿದ್ದ ಎಂ.ಟಿ.ಬಿ ನಾಗರಾಜ್‌ ಅವರು ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿ ಬಿಜೆಪಿ ಸೇರಿದ್ದರು.

2019ರಲ್ಲಿ ನಡೆದ ಉಪ ಚುನಾವಣೆಯಲ್ಲಿ ಬಿಜೆಪಿಯ ಎಂ.ಟಿ.ಬಿ ನಾಗರಾಜ್‌ ವಿರುದ್ಧ ಶರತ್‌ ಬಚ್ಚೇಗೌಡ ಪಕ್ಷೇತರರಾಗಿ ಗೆಲುವು ಸಾಧಿಸಿದ್ದರು. ಕಾಂಗ್ರೆಸ್‌ನಿಂದ ಸ್ಪರ್ಧಿಸಿದ್ದ ಪದ್ಮಾವತಿ ಭೈರತಿ ಸುರೇಶ್‌ ಅವರು ಎಂ.ಟಿ.ಬಿ. ಗೆಲುವಿಗೆ ತಡೆಯೊಡ್ಡಿದರು. ಈ ಬಾರಿ ಕಾಂಗ್ರೆಸ್‌ನಿಂದ ಶರತ್‌ ಮತ್ತು ಬಿಜೆಪಿಯಿಂದ ಎಂ.ಟಿ.ಬಿ. ನಾಗರಾಜ್ ಪುತ್ರ ಪುರುಷೋತ್ತಮ್ ಮುಖಾಮುಖಿಯಾಗುವ ಸಾಧ್ಯತೆ ಇದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.