ADVERTISEMENT

ಅಳಿವಿನಂಚಿನಲ್ಲಿ ಹೊಸಕೋಟೆ ಹೆಗ್ಗುರುತು ದೊಡ್ಡಕೆರೆ ‌

ಕೆರೆ ಉಳಿಸಬೇಕೆಂಬ ದೊಡ್ಡ ಕೂಗು ಹಲವು ದಶಕಗಳ್ದು * 16ನೇ ಶತಮಾನದಲ್ಲಿ ನಿರ್ಮಾಣ

​ಪ್ರಜಾವಾಣಿ ವಾರ್ತೆ
Published 3 ಜುಲೈ 2024, 4:51 IST
Last Updated 3 ಜುಲೈ 2024, 4:51 IST
ದೊಡ್ಡ ಕೆರೆ ಮೇಲೆ ಸುರಿದಿರುವ ಕೊಳೆತ ತ್ಯಾಜ್ಯ.
ದೊಡ್ಡ ಕೆರೆ ಮೇಲೆ ಸುರಿದಿರುವ ಕೊಳೆತ ತ್ಯಾಜ್ಯ.   

ಹೊಸಕೋಟೆ: ನಂದಿ ಬೆಟ್ಟದಲ್ಲಿ ಹುಟ್ಟುವ ದಕ್ಷಿಣ ಪಿನಾಕಿನಿ ನದಿಗೆ ಅಡ್ಡವಾಗಿ 16ನೇ ಶತಮಾನದಲ್ಲಿ ಹೊಸಕೋಟೆ ನಗರ ನಿರ್ಮಾತೃ ತಮ್ಮೇಗೌಡರಿಂದ ನಿರ್ಮಾಣವಾದ 516.84 ಚದರ ಮೈಲು ಜಲಾನಯನ ಪ್ರದೇಶ ಒಳಗೊಂಡಿರುವ ಹೊಸಕೋಟೆ ದೊಡ್ಡಕೆರೆ ಒತ್ತುವರಿ, ಕಸದ ಸಮಸ್ಯೆಯಿಂದ ನಲುಗುತ್ತಿದೆ. ಐತಿಹಾಸಿಕ ಹಿನ್ನೆಲೆಯ ಈ ಕೆರೆ ಹೊಸಕೋಟೆ ಹೆಗ್ಗುರುತು. ಈ ಕೆರೆ ಉಳಿಸಬೇಕೆಂಬ ದೊಡ್ಡ ಕೂಗು ಹಲವು ದಶಕಗಳ್ದು.

ಕೆರೆ ವೈಶಿಷ್ಟ: ಹೊಸಕೋಟೆ ದೊಡ್ಡಕೆರೆ ಎಂದೇ ಪ್ರಸಿದ್ಧವಾಗಿರುವ ಈ ಕೆರೆಯು ಸುಮಾರು 3211 ಎಕರೆ ಜಲಾನಯನ ಪ್ರದೇಶವನ್ನು ಒಳಗೊಂಡಿದೆ. 802.14 ದಶಲಕ್ಷ ಘನ ಅಡಿ ನೀರಿನ ಸಾಮರ್ಥ್ಯ ಹೊಂದಿದೆ. 516.84 ಚದರ ಮೈಲಿ ಜಲಾನಯನ ಪ್ರದೇಶವನ್ನು ಒಳಗೊಂಡಿದೆ.

ಅಲ್ಲದೆ ಇದರಲ್ಲಿ 721.93 ದಶಲಕ್ಷ ಘನ ಅಡಿ ಉಪಯುಕ್ತ ನೀರಿನ ಪ್ರಮಾಣವಿದ್ದರೆ ಕೇವಲ 80.21 ದಶಲಕ್ಷ ಘನ ಅಡಿ ಅನುಪಯುಕ್ತ ನೀರಿನ ಪ್ರಮಾಣವಿದೆ. ಅಲ್ಲದೆ, ಈ ಕೆರೆಗೆ ಬೆಂಗಳೂರು ರಸ್ತೆಗೆ ಹೊಂದಿಕೊಂಡು ಇರುವ ಕಟ್ಟೆ 2160 ಮೀಟರ್ ಉದ್ದವಿದೆ.

ADVERTISEMENT

18 ಗ್ರಾಮಗಳು ಈ ಕೆರೆಯ ಫಲಾನುಭವಿಗಳು: ಈ ಕೆರೆ ನೀರಿನಿಂದ ಕೃಷಿ ಸೇರಿದಂತೆ ವಿವಿಧ ಕಾರ್ಯಗಳಿಗೆ ಅವಲಂಭಿತವಾಗಿದ್ದ ಗ್ರಾಮಗಳ ಸಂಖ್ಯೆ 18. ಈ ಕೆರೆಯು ಎಡದಂಡೆ ಕಾಲುವೆ ಉದ್ದ ಸುಮಾರು 11 ಕಿ.ಮೀ. ಆದರೆ, ಬಲದಂಡೆ ಕಾಲುವೆ ಉದ್ದ ಸುಮಾರು 9.50 ಕಿ.ಮೀ. ಆದರೆ, ಇದೀಗ ಬಹುತೇಕ ಎಲ್ಲ ಗ್ರಾಮಗಳಿಗೂ ಈ ನೀರಿನಿಂದ ಯಾವುದೇ ರೀತಿಯ ಉಪಯೋಗವಿಲ್ಲ.

ಇತ್ತೀಚೆಗೆ ನಡೆದ ತಾಲ್ಲೂಕು ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಅಧ್ಯಕ್ಷರಾಗಿದ್ದ ದೊಡ್ಡಹುಲ್ಲೂರು ರುಕ್ಕೋಜಿ ಅವರ ಅಧ್ಯಕ್ಷೀಯ ಭಾಷಣದ ಪ್ರಮುಖ ವಿಚಾರವೇ ಹೊಸಕೋಟೆ ದೊಡ್ಡಕೆರೆ ಮತ್ತು ದೊಡ್ಡಹುಲ್ಲೂರಿನ ಅಮಾನಿಕೆರೆ ರಕ್ಷಣೆ. ಹೊಸಕೋಟೆ ದೊಡ್ಡಕೆರೆಯಂತೂ ಒಂದು ಐತಿಹಾಸಿಕವಾದ ಕುರುಹು. ಅದನ್ನು ಉಳಿಸುವ ಪ್ರಮುಖ ಜವಾಬ್ದಾರಿ ನಗರದ ಪ್ರತಿಯೊಬ್ಬ ನಾಗರಿಕನ ಮೇಲೂ ಇದೆ. ಅಲ್ಲದೆ, ಜನಪ್ರತಿನಿಧಿಗಳು ಸಹ ಈ ನಿಟ್ಟಿನಲ್ಲಿ ಚಿಂತಿಸಬೇಕಿದೆ ಎನ್ನುತ್ತಾರೆ ಅವರು.

ದೊಡ್ಡಕೆರೆ: ಬೆಂಗಳೂರಿಗೆ ಸಮೀಪವಿರುವ ಮತ್ತು ಅತ್ಯಂತ ಸುಂದರವಾಗಿ ನಿರ್ಮಾಣಗೊಂಡಿರುವ ಈ ಕೆರೆ ಮೇಲೆ ವರನಟ ಡಾ.ರಾಜ್‌ಕುಮಾರ್ ಅಭಿಯನದ ‘ನಾ ನಿನ್ನ ಮರೆಯಲಾರೆ’ ಚಿತ್ರದ ಬೈಕ್ ರೇಸಿಂಗ್ ಸನ್ನಿವೇಶವನ್ನು ಇದೇ ಕೆರೆ ಕಟ್ಟೆ ಚಿತ್ರೀಕರಿಸಲಾಗಿತ್ತು. ತೆಲುಗಿನಲ್ಲೂ ರಿಮೇಕ್ ಮಾಡಿದ ಮೇಲೆ ಈ ಸನ್ನಿವೇಶಕ್ಕಾಗಿ ಇದೇ ಸ್ಥಳಕ್ಕೆ ಬಂದು ಚಿತ್ರೀಕರಣ ಮಾಡಲಾಗಿತ್ತು.

ಪ್ರವಾಸಿ ತಾಣ ಮಾಡಲಿ: ಹೊಸಕೋಟೆ ದೊಡ್ಡ ಕೆರೆ ಕಟ್ಟೆ ಸುಮಾರು 2ಕಿ.ಮೀಗಿಂತಲೂ ದೂರವಿದೆ. ಆದ್ದರಿಂದ ಈ ಕಟ್ಟೆಯನ್ನು ಮತ್ತಷ್ಟು ಎತ್ತರ ಮಾಡಿ ಅದನ್ನು ಅಭಿವೃದ್ಧಿಪಡಿಸಿ ಆಧುನಿಕ ಉದ್ಯಾನ ಮಾಡುವ ಕುರಿತು ಸ್ಥಳೀಯ ಜನಪ್ರತಿನಿಧಿಗಳು ಚಿಂತಿಸಬೇಕಿದೆ.

ಈ ಕಟ್ಟೆ ಮೇಲಿನ ರಸ್ತೆ ಸಂಪೂರ್ಣವಾಗಿ ಹಳ್ಳ ಕೊಳ್ಳಗಳಿಂದ ಕೂಡಿದೆ. ಈ ರಸ್ತೆಯ ಉದ್ದಕ್ಕೂ ಕುಡಿತ ಮತ್ತಿತರ ಅನೈತಿಕ ಚಟುವಟಿಕೆಗಳು ನಡೆಯುತ್ತಿವೆ. ಆದ್ದರಿಂದ ವಾಯು ವಿಹಾರಿಗಳಿಗೆ ಅನುಕೂಲವಾಗುವಂತೆ ಈ ಕೆರೆ ಕಟ್ಟೆ ಪ್ರವಾಸಿ ತಾಣವನ್ನಾಗಿ ಮಾಡಬೇಕೆಂದು ಹೊಸಕೋಟೆ ನಿವಾಸಿಗಳ ಒತ್ತಾಯ.

ಕಸ ಸುರಿವ ಡಂಪ್ ಯಾರ್ಡ್ ಆಗುತ್ತಿರುವ ಕೆರೆ: ಸ್ಥಳೀಯ ನಗರಸಭೆ ಮತ್ತು ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಅಧಿಕಾರಿಗಳ ನಿರ್ಲಕ್ಷ್ಯದಿಂದ ಈ ಕಟ್ಟೆ ಮತ್ತು ಕೋಡಿ ಹರಿಯುವ ಸ್ಥಳಗಳು ಸಂಪೂರ್ಣವಾಗಿ ಕಸ ಸುರಿಯುವ ಡಂಪ್ ಯಾರ್ಡ್‌ ಆಗಿ ಮಾರ್ಪಟ್ಟಿವೆ. ಈ ಕೆರೆ ಕಟ್ಟೆ ಉದ್ದಕ್ಕೂ ಎಲ್ಲೆಂದರಲ್ಲಿ ಕಸ, ಕಟ್ಟಡ ತ್ಯಾಜ್ಯ ಸುರಿದು ಸಂಪೂರ್ಣವಾಗಿ ಹಾಳು ಮಾಡಲಾಗಿದೆ. ಕೊಳೆತ ತರಕಾರಿ, ವಿವಿಧ ತ್ಯಾಜ್ಯ ಅಲ್ಲಿ ಸುರಿಯುವುದರಿಂದ ವಾಯುವಿಹಾರಿಗಳು ಇತ್ತ ಮುಖ ಮಾಡುತ್ತಿಲ್ಲ. ಇದರ ಮೇಲೆ ಸದಾ ನಿಗಾಹಿಡಲು ಸಿಸಿಟಿವಿ ಕ್ಯಾಮೆರಾ ಅಳವಡಿಸಬೇಕಿದೆ.

ಒತ್ತುವರಿ ನಡುವೆಯೂ ಹೊಸಕೋಟೆ ದೊಡ್ಡ ಕೆರೆ
ಕಟ್ಟಡದ ತ್ಯಾಜ್ಯ
ಕೆರೆ ಕೋಡಿ ಹರಿಯುವಲ್ಲಿ ತುಂಬಿರುವ ತ್ಯಾಜ್ಯ
ಕಟ್ಟೆಯ ಮೇಲೆ ಹದಗೆಟ್ಟಿರುವ ರಸ್ತೆ
‘ನಾ ನಿನ್ನ ಮರೆಯಲಾರೆ’ ಚಿತ್ರದ ಬೈಕ್ ರೇಸ್ ಸನ್ನಿವೇಶದ ಚಿತ್ರ
ಪುರಾತನ ಕೆರೆ ಎಂಬುದಕ್ಕೆ ಸಾಕ್ಷಿಯಾದ ಕೆರೆ ತೂಬು
ದೊಡ್ಡ ಹುಲ್ಲೂರು ರುಕ್ಕೋಜಿ

- ದುರಸ್ತಿಗೆ ಅಪಾರ ಹಣ ಪೋಲು ಹೊಸಕೋಟೆ ದೊಡ್ಡ ಕೆರೆಯನ್ನು 2006-07ನೇ ಸಾಲಿನಲ್ಲಿ ರಾಷ್ಟ್ರೀಯ ಕೃಷಿಗೆ ನೇರವಾಗಿ ಸಂಬಂಧಿಸಿದ ಜಲ ಪಾತ್ರಗಳ ದುರಸ್ತಿ ನವೀಕರಣ ಮತ್ತು ಜೀರ್ಣೋದ್ಧಾರ ಯೋಜನೆಯಡಿ  ₹108.56 ಲಕ್ಷ ವೆಚ್ಚದಲ್ಲಿ ಕೆರೆ ಅಭಿವೃದ್ಧಿಗೆ ಸಂಬಂಧಿಸಿದಂತೆ ಕಾಮಗಾರಿ ಮಾಡಿದ್ದರು. ಕೆರೆ ಈಗಿನ ಸ್ಥಿತಿ ನೋಡಿದರೆ ಈ ಹಣ ಕರೆ ನೀರಿನಲ್ಲಿ ಹೋಮವಾದಂತಾಗಿದೆ. ಇದರಲ್ಲಿ ಕೆರೆಯಲ್ಲಿ ಹೂಳೆತ್ತುವುದು ಏರಿ ಕೋಡಿ ಹಾಗೂ ತೂಬು ದುರಸ್ತಿ ಕಾಲುವೆ ದುರಸ್ತಿ ಜಲಾನಯನ ಅಭಿವೃದ್ಧಿ ಸೇರಿದೆ. ಹೆಗ್ಗುರುತಾಗಿ ಉಳಿಯಲಿ ಶ್ರ ಬೆಂಗಳೂರಿನಲ್ಲಿ ಅತಿ ಹೆಚ್ಚ ವಿಸ್ತೀರ್ಣದಲ್ಲಿ ಉಳಿದಿರುವ ಏಕೈಕ ಕೆರೆ ಎನಿಸಿದೆ. ಈ ಕೆರೆ ಹೊಸಕೋಟೆ ನಿರ್ಮಾಪಕ ತಮ್ಮೇಗೌಡ ಅವರಿಂದಲೇ ನಿರ್ಮಾಣಗೊಂಡಿದೆ. ದಕ್ಷಿಣ ಪಿನಾಕಿನಿ ನದಿಗೆ ಅಡ್ಡಲಾಗಿ ಕಟ್ಟಿರುವ ಈ ಕೆರೆಗೆ ಅಧುನಿಕ ಸ್ಪರ್ಶದಿಂದ ಗತ ವೈಭವ ತರುವ ಕೆಲಸ ತಮ್ಮೇಗೌಡ ಅವರ ವಂಶಸ್ಥರು ಆಗಿರುವ ಸ್ಥಳೀಯ ಶಾಸಕರು ಮಾಡಬೇಕಿದೆ. ಮುಖ್ಯವಾಗಿ ಕೆರೆ ಒತ್ತುವರಿ ತೆರವುಗೊಳಿಸಿ ಈ ಕೆರೆಯನ್ನು ಹೊಸಕೋಟೆಗೆ ಶಾಶ್ವತ ಹೆಗ್ಗುರುತಾಗಿ ಉಳಿಯುವಂತೆ ಮಾಡಲಿ. ದೊಡ್ಡಹುಲ್ಲೂರು ರುಕ್ಕೋಜಿ ಸಾಹಿತಿ ಹೊಸಕೋಟೆ ಹೆಚ್ಚಿನ ಅನುದಾನ ಅವಶ್ಯ ಹೊಸಕೋಟೆ ದೊಡ್ಡ ಕೆರೆಗೆ ಬೇಲಿ ಅಳವಡಿಸುವುದಕ್ಕಾಗಿ ಸರ್ಕಾರಕ್ಕೆ ಸುಮಾರು ₹12ಕೋಟಿ ಅನುದಾನಕ್ಕಾಗಿ ಪ್ರಸ್ತಾವ ಕಳುಹಿಸಲಾಗಿದೆ. ಇದಕ್ಕೆ ಅನುಮೋದನೆ ಸಿಕ್ಕಿದ ತಕ್ಷಣ ಬೇಲಿ ಅಳವಡಿಸುವ ಕೆಲಸ ಮಾಡಲಾಗುವುದು. ಉಳಿದಂತೆ ಕಸದ ಸಮಸ್ಯೆಗೆ ಸಂಬಂಧಿಸಿದಂತೆ ಸ್ಥಳೀಯ ನಗರಸಭೆಗೆ ಹಲವು ಬಾರಿ ಮನವಿ ಕೊಟ್ಟು ಸಾಕಾಗಿದೆ. ಕಸ ನಿಯಂತ್ರಣಕ್ಕೆ ಸಂಬಂಧಿಸಿದಂತೆ ಈವರೆಗೂ ಯಾವುದೇ ಕ್ರಮ ಕೈಗೊಂಡಿಲ್ಲ. ಇನ್ನು ಕೆರೆ ಕಟ್ಟೆಯನ್ನು ಒಳಗೊಂಡಂತೆ ಪ್ರವಾಸಿ ತಾಣ ಮಾಡಲು ಹೆಚ್ಚಿನ ಅನುದಾನ ಬೇಕಿದೆ. ಇದಕ್ಕೆ ಸರ್ಕಾರದ ಮಟ್ಟದಲ್ಲಿ ನಿರ್ಧಾರವಾಗಬೇಕು. ಮಂಜುನಾಥರೆಡ್ಡಿ ಸಹಾಯಕ ಕಾರ್ಯಪಾಲಕ ಎಂಜಿನಿಯರ್ ಸಣ್ಣ ನೀರಾವರಿ ಇಲಾಖೆ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.