ADVERTISEMENT

ಹೊಸಕೋಟೆ: ರೈತರಿಗೆ ವರವಾಗದ ಕೃಷಿ ಯಂತ್ರಧಾರೆ

ಸರ್ಕಾರದ ಆದೇಶದಂತೆ ಕಾರ್ಯ ನಿರ್ವಹಣೆ ಸ್ಥಗಿತ:

​ಪ್ರಜಾವಾಣಿ ವಾರ್ತೆ
Published 15 ಮೇ 2024, 7:13 IST
Last Updated 15 ಮೇ 2024, 7:13 IST
ಹೊಸಕೋಟೆ ತಾಲ್ಲೂಕಿನ ನಂದಗುಡಿಯಲ್ಲಿರುವ ಕೃಷಿ ಯಂತ್ರಧಾರೆ ಕೇಂದ್ರ
ಹೊಸಕೋಟೆ ತಾಲ್ಲೂಕಿನ ನಂದಗುಡಿಯಲ್ಲಿರುವ ಕೃಷಿ ಯಂತ್ರಧಾರೆ ಕೇಂದ್ರ    

ಹೊಸಕೋಟೆ: ಸಣ್ಣ, ಅತಿಸಣ್ಣ ಮತ್ತು ಬಡ ರೈತರ ಕೃಷಿ ಚಟುವಟಿಕೆಗೆ ಅನುಕೂಲವಾಗಲೆಂದು ಸರ್ಕಾರ ಜಾರಿಗೆ ತಂದಿರುವ ಕೃಷಿ ಯಂತ್ರಧಾರೆ ಯೋಜನೆ ಹಲವು ಕಾರಣಗಳಿಂದ ಸಂಪೂರ್ಣ ಸ್ಥಗಿತಗೊಂಡಿದೆ.

ಯಂತ್ರಧಾರೆ ಯೋಜನೆ ಮೂಲಕ ಯಂತ್ರಗಳನ್ನು ಬಾಡಿಗೆ ನೀಡುವ ಗುತ್ತಿಗೆ ಪಡೆದಿರುವ ಖಾಸಗಿ ಸಂಸ್ಥೆಗಳು ಕಾರ್ಯಕ್ರಮ ಸಮರ್ಪಕವಾಗಿ ಅನುಷ್ಠಾನಕ್ಕೆ ತರುತ್ತಿಲ್ಲ ಎಂದು ರೈತರು ಮತ್ತು ಕೃಷಿ ಇಲಾಖೆ ಅಧಿಕಾರಿಗಳ ದೂರಿನ ಅನ್ವಯ ಸರ್ಕಾರದ ಆದೇಶದಂತೆ ಕೆಲಸ ನಿಲ್ಲಿಸಲಾಗಿದೆ.

ದುಬಾರಿ ಹಣ ತೆತ್ತ ರೈತರು: ಜಾನುವಾರು ಆಧಾರಿತ ವ್ಯವಸಾಯದಿಂದ ರೈತರು ಸಂಪೂರ್ಣವಾಗಿ ವಿಮುಖರಾಗಿದ್ದಾರೆ. ಸಣ್ಣ, ಅತಿಸಣ್ಣ, ಬಡ ರೈತರು ಕೂಡ ಜಾನುವಾರು ಬಳಕೆ ಕಡಿಮೆ ಮಾಡಿದ್ದಾರೆ. ಇದರ ನಡುವೆ ದುಬಾರಿ ಯಂತ್ರೋಪಕರಣ ಬಳಕೆಯಿಂದ ಹಲವರು ಕೃಷಿಯಿಂದ ವಿಮುಖರಾಗುತ್ತಿದ್ದಾರೆ. 

ADVERTISEMENT

ಮೂರು ಖಾಸಗಿ ಸಂಸ್ಥೆಗಳಿಂದ ಯಂತ್ರಧಾರೆ: ಇನ್ನು ತಾಲ್ಲೂಕಿನ ನಾಲ್ಕು ಹೋಬಳಿಗಳಲ್ಲಿ ಕೃಷಿ ಯಂತ್ರಧಾರೆ ಚಟುವಟಿಕೆ ಮಾಡಲು ಮೂರು ಖಾಸಗಿ ಸಂಸ್ಥೆಗಳು ಅನುಮತಿ ಪಡೆದಿವೆ. ಅನುಗೊಂಡನಹಳ್ಳಿ ಹೋಬಳಿ ದೇವನಗೊಂದಿಯಲ್ಲಿ ಮಾತ್ರ ಎಸ್‌ಕೆಡಿಆರ್‌ಡಿಪಿ ಸಂಸ್ಥೆ‌ ವತಿಯಿಂದ ಯಂತ್ರಧಾರೆ ನಡೆಯುತ್ತಿದೆ. ಉಳಿದಂತೆ ಜಾನ್‌ಡೀರ್ ಸಂಸ್ಥೆ ಸರ್ಕಾರದ ನಿರ್ಧಾರದ ವಿರುದ್ಧ ಕೋರ್ಟ್ ಮೆಟ್ಟಿಲೇರಿದೆ. ಇದರಿಂದ ಸೂಲಿಬೆಲೆ, ನಂದಗುಡಿ ಮತ್ತು ಜಡಿಗೇನಹಳ್ಳಿ ಹೋಬಳಿಗಳಲ್ಲಿ ಯಂತ್ರಧಾರೆ ಸ್ಥಗಿತಗೊಂಡಿದೆ.

6 ವರ್ಷ ಗುತ್ತಿಗೆ: ಕೃಷಿ ಯಂತ್ರಧಾರೆ ನಡೆಸುವುದಾಗಿ ಖಾಸಗಿ ಸಂಸ್ಥೆಗಳು ಆರು ವರ್ಷಗಳ ಅವಧಿಗೆ ಗುತ್ತಿಗೆ ಪಡೆದುಕೊಂಡಿವೆ. ಗುತ್ತಿಗೆ ಪಡೆದ ಮೂರು ಖಾಸಗಿ ಸಂಸ್ಥೆಗಳಲ್ಲಿ ಎಸ್‌ಕೆಡಿಆರ್‌ಡಿಪಿ (ಧರ್ಮಸ್ಥಳ ಸಂಘ) ಬಿಟ್ಟರೆ ಉಳಿದ ಎರಡು ಸಂಸ್ಥೆಗಳು ಸಮರ್ಪಕ ಕಾರ್ಯ ನಿರ್ವಹಿಸಿಲ್ಲ. ಧರ್ಮಸ್ಥಳ ಸಂಘ ಆರು ವರ್ಷ ಪೂರೈಸಿದೆ. ಯಂತ್ರೋಪಕರಣಗಳು ಹಳೆಯವಾಗಿದೆ. ಅವುಗಳ ರಿಪೇರಿಗೆ ಹೆಚ್ಚಿನ ವೆಚ್ಚ ತಗಲುತ್ತಿದ್ದು ಯಂತ್ರಧಾರೆ ನಿಲ್ಲಿಸುವುದಾಗಿ ಸರ್ಕಾರಕ್ಕೆ ಮನವಿ ಮಾಡಿದೆ.

ಕೋರ್ಟ್ ಮೆಟ್ಟಲೇರಿದ ‘ವರ್ಷ’ ಸಂಸ್ಥೆ: ‘ವರ್ಷ’ ಎಂಬ ಖಾಸಗಿ ಸಂಸ್ಥೆ ಮೇಲೆ ರೈತರು ಮತ್ತು ಅಧಿಕಾರಿಗಳ ದೂರಿನ ಅನ್ವಯ ಕಾರ್ಯಚಟುವಟಿಕೆ ಸ್ಥಗಿತಗೊಳಿಸಲು ಸರ್ಕಾರ ಸೂಚಿಸಿದ್ದನ್ನು ಪ್ರಶ್ನಿಸಿ ಕೋರ್ಟ್ ಮೆಟ್ಟಿಲೇರಿದೆ.

ಖಾಸಗಿ ಸಂಸ್ಥೆಗಳು ವಿಫಲವಾದ ಕಾರಣ ಸರ್ಕಾರ ಯಂತ್ರೋಪಕರಣಗಳನ್ನು ರೈತ ಉತ್ಪಾದಕ ಸಂಸ್ಥೆಗಳಿಗೆ ಒಪ್ಪಿಸಿ ಅವರ ಮೂಲಕ ಯಂತ್ರಧಾರೆ ನಡೆಸಲು ಸೂಚಿಸಿದೆ. ಆದರೆ, ವರ್ಷ ಕಳೆಯುತ್ತಿದ್ದರೂ ಜಾರಿಗೊಳಿಸುವ ಕೆಲಸ ಆಗಿಲ್ಲ. ಮುಂದಿನ ಜಿ.ಪಂ ಸಭೆಯಲ್ಲಿ ಈ ಕುರಿತು ಸ್ಪಷ್ಟ ತೀರ್ಮಾನವಾಗಲಿದೆ ಎಂಬುದಾಗಿ ಕೃಷಿ ಇಲಾಖೆ ಸಹಾಯಕ ನಿರ್ದೇಶಕ ಬಿ.ಪಿ.ಚಂದ್ರಪ್ಪ ಹೇಳುತ್ತಾರೆ.

ಬಿ.ಪಿ.ಚಂದ್ರಪ್ಪ ಸಹಾಯಕ ನಿರ್ದೇಶಕ ಕೃಷಿ ಇಲಾಖೆ
ಪ್ರಭುದೇವಯ್ಯ ಪ್ರಾಂತ ರೈತ ಸಂಘದ ಮುಖಂಡ

Cut-off box - ‘ಖಾಸಗಿ ಸಂಸ್ಥೆಗಳು ವಿಫಲ’ ತಾಲ್ಲೂಕಿನಲ್ಲಿ ಖಾಸಗಿ ಸಂಸ್ಥೆಗಳು ಸಮರ್ಪಕವಾಗಿ ಕೃಷಿ ಯಂತ್ರಧಾರೆ ಕಾರ್ಯಕ್ರಮ ಕಾರ್ಯಗತಗೊಳಿಸಲು ವಿಫಲವಾಗಿವೆ ಎಂಬ ಆರೋಪದ ಹಿನ್ನೆಲೆಯಲ್ಲಿ ಸ್ಥಳೀಯ ರೈತ ಉತ್ಪಾದಕ ಸಂಸ್ಥೆಗಳಿಗೆ ನೀಡಿ ಅವುಗಳ ಮೂಲಕ ಮುಂದುವರಿಸಲು ಸೂಚಿಸಲಾಗಿದೆ. ಆದರೆ ತಾಲ್ಲೂಕಿನಲ್ಲಿ ಯಾವುದೇ ಎಫ್‌ಪಿಒ ಸಂಸ್ಥೆ ಯಂತ್ರಧಾರೆ ನಡೆಸಲು ಮುಂದೆ ಬರಲಿಲ್ಲ. ಈ ಕುರಿತು ಮುಂದೆ ಕೈಗೊಳ್ಳಬೇಕಾದ ಕ್ರಮದ ಬಗ್ಗೆ ಮೇಲಧಿಕಾರಿಗಳ ಆದೇಶಕ್ಕಾಗಿ ಕಾಯುತ್ತಿದ್ದೇವೆ. ಬಿ.ಪಿ.ಚಂದ್ರಪ್ಪ ಸಹಾಯಕ ನಿರ್ದೇಶಕ ಕೃಷಿ ಇಲಾಖೆ

Cut-off box - ಬಡ ರೈತರಿಗೆ ವರದಾನ ರೈತರಿಗೆ ಅತ್ಯಂತ ಅನುಕೂಲಕರವಾದ ಯೋಜನೆಯಾಗಿರುವ ಕೃಷಿ ಯಂತ್ರಧಾರೆ ಬಡ ಮಧ್ಯಮ ವರ್ಗದ ರೈತರಿಗೆ ವರದಾನವಿದ್ದಂತೆ. ಆದರೆ ಸರ್ಕಾರದ ನಿರ್ಲಕ್ಷ್ಯದಿಂದ ಖಾಸಗಿ ಸಂಸ್ಥೆಗಳಿಗೆ ಒಪ್ಪಿಸಿ ಅದನ್ನು ದಾರಿ ತಪ್ಪುವಂತೆ ಮಾಡಲಾಗಿದೆ. ಈಗಲೂ ಕಾಲ ಮಿಂಚಿಲ್ಲ. ಕೃಷಿ ಯಂತ್ರಧಾರೆ ಸಮರ್ಥವಾಗಿ ಜಾರಿಗೆ ತರಲು ಅವಕಾಶವಿದೆ. ಸರ್ಕಾರ ಯೋಜನೆ ಅನುಷ್ಠಾನಕ್ಕೆ ಬೇಕಾದ ಎಲ್ಲ ಸಿದ್ಧತೆ ಮಾಡಿಕೊಳ್ಳಲಿ. ಇಲ್ಲ–ಸಲ್ಲದ ಸಬೂಬು ಹೇಳುವುದು ಬಿಟ್ಟು ಸಾಧ್ಯವಾದರೆ ಉಚಿತವಾಗಿ ರೈತರಿಗೆ ಯಂತ್ರೋಪಕರಣ ಬಳಕೆಗೆ ಅನುವು ಮಾಡಿಕೊಡಲಿ. ಪ್ರಭುದೇವಯ್ಯ ಕರ್ನಾಟಕ ಪ್ರಾಂತ ರೈತ ಸಂಘದ ತಾಲ್ಲೂಕು ಮುಖಂಡ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.