ಹೊಸಕೋಟೆ: ತಾಲ್ಲೂಕಿನ ರೈತ ಸಮುದಾಯ ಈಗಾಗಲೇ ಬರಗಾಲದಿಂದ ತತ್ತರಿಸಿದ್ದಾರೆ. ನಷ್ಟದಿಂದ ಹೊರ ಬರಲು ಪರದಾಡುತ್ತಿರುವ ಸಮಯದಲ್ಲೇ ಬಿತ್ತನೆ ಬೀಜದ ಬೆಲೆ ಹೆಚ್ಚಳ ಮಾಡಿ ಮತ್ತೊಂದು ಬರೆ ಎಳೆಯಲು ಸರ್ಕಾರ ಮುಂದಾಗಿದೆ.
2024-25ನೇ ಸಾಲಿನ ಕೃಷಿ ಚಟುವಟಿಕೆ ಕ್ಷೇತ್ರದಾದ್ಯಂತ ಪರಿಣಾಮಕಾರಿಯಾಗಿ ನಡೆಯುತ್ತಿದೆ. ತಾಲ್ಲೂಕಿನಾದ್ಯಂತ ಈ ಬಾರಿ ಅತ್ಯುತ್ತಮ ಮಳೆಯಾಗುತ್ತಿದೆ. ರೈತರು ಕೃಷಿ ಭೂಮಿ ಬಿತ್ತನೆಗಾಗಿ ಹದ ಮಾಡುವ ಕೆಲಸದಲ್ಲಿ ಮಗ್ನರಾಗಿದ್ದಾರೆ. ಆದರೆ, ದರ ಹೆಚ್ಚಳ ರೈತರನ್ನು ಚಿಂತೆಗೆ ದೂಡಿದೆ.
ಕರ್ನಾಟಕ ಪ್ರಾಂತ ರೈತ ಸಂಘದ ಮುಖಂಡ ಪ್ರಭುದೇವಯ್ಯ ಮಾತನಾಡಿ, ಪ್ರಸ್ತುತ ನಡೆಯುತ್ತಿರುವ ಬಿತ್ತನೆ ಕಾರ್ಯಕ್ಕೆ ಬೇಕಾದ ಬಿತ್ತನೆ ಬೀಜ ಬೆಲೆ ದುಪ್ಪಟ್ಟಾಗಿದೆ. ಈಗಾಗಲೇ ರೈತ ಬರಗಾಲದಿಂದ ತತ್ತರಿಸಿದ್ದಾನೆ. ಕಳೆದ ವರ್ಷಕ್ಕೆ ಹೋಲಿಕೆ ಮಾಡಿದರೆ ಶೇ50ರಷ್ಟು ಬೆಲೆ ಹೆಚ್ಚಳವಾಗಿದೆ. ಆದ್ದರಿಂದ ರೈತರ ಬಗ್ಗೆ ದುಪ್ಪಟ್ಟು ಕಾಳಜಿ ಪ್ರದರ್ಶನ ಮಾಡುವ ಸರ್ಕಾರ ಈ ಬಾರಿ ಬಿತ್ತನೆ ಬೀಜ ಬೆಲೆ ಏರಿಕೆ ಮಾಡುವುದನ್ನು ಬಿಟ್ಟು, ಉಚಿತವಾಗಿ ರೈತರಿಗೆ ನೀಡುವ ಕೆಲಸ ಮಾಡಲಿ ಎಂದು ಸರ್ಕಾರವನ್ನು ಒತ್ತಾಯಿಸಿದರು.
ಹೊಸಕೋಟೆ ತಾಲ್ಲೂಕು ಕೃಷಿ ಇಲಾಖೆ ಸಹಾಯಕ ನಿರ್ದೇಶಕ ಚಂದ್ರಪ್ಪ ಮಾತನಾಡಿ, ಕೃಷಿ ಇಲಾಖೆ ವತಿಯಿಂದ ನಮಗೆ ಬಂದಿರುವ ನಿರ್ದೇಶನದಂತೆ ಇಲಾಖೆ ಕೆಲಸ ಕಾರ್ಯ ಮಾಡುತ್ತೇವೆ. ಬಿತ್ತನೆ ಬೀಜ ಮಾರಾಟದಲ್ಲಿಯೂ ಇಲಾಖೆ ಸೂಚನೆ ತಪ್ಪದೆ ಪಾಲಿಸುತ್ತೇವೆ ಎಂದರು.
ರೈತ ವಿರೋಧಿ ಧೋರಣೆ
ಕಳೆದ ವರ್ಷ ತಾಲ್ಲೂಕು ಮಾತ್ರವಲ್ಲ ಇಡೀ ರಾಜ್ಯದ ಬಹುತೇಕ ಜಿಲ್ಲೆಗಳು ಬರಗಾಲದಿಂದ ತತ್ತರಿಸಿದೆ. ಇಂತಹ ಸನ್ನಿವೇಶದಲ್ಲಿ ರೈತರ ಸಮಸ್ಯೆಗಳಿಗೆ ಸ್ಪಂದಿಸುವ ಕೆಲಸವನ್ನು ಸರ್ಕಾರ ಮಾಡಬೇಕು. ಅದನ್ನು ಬಿಟ್ಟು ಬಿತ್ತನೆ ಬೀಜದ ಬೆಲೆ ಹೆಚ್ಚಳ ಮಾಡಲಾಗಿದೆ. ಆ ಮೂಲಕ ರೈತ ವಿರೋಧಿ ಧೋರಣೆ ಸರ್ಕಾರ ಅನುಸರಿಸುತ್ತಿದೆ. ಈ ಕೂಡಲೇ ಬಿತ್ತನೆ ಬೀಜದ ಬೆಲೆ ಇಳಿಸಿ ಎಲ್ಲ ರೈತರಿಗೂ ಉಚಿತವಾಗಿ ಬಿತ್ತನೆ ಬೀಜ ರವಾನೆ ಮಾಡುವ ಕೆಲಸ ಸರ್ಕಾರ ಮಾಡಲಿ.
–ಉತ್ತನಳ್ಳಪ್ಪ ಪ್ರಗತಿಪರ ರೈತ
ನಂದಗುಡಿ ರೈತರ ಮೇಲೆ ಬ್ರಹ್ಮಸ್ತ್ರ ಕೃಷಿಗೆ ಸಂಬಂಧಿಸಿದಂತೆ ಎಲ್ಲ ವಸ್ತುಗಳ ಬೆಲೆ ಹೆಚ್ಚಳ ಮಾಡಿ ರೈತರಿಗೆ ಸಂಕಷ್ಟ ತಂದೊಡ್ಡಿರುವುದು ಒಂದೆಡೆಯಾದರೆ ಬಿತ್ತನೆ ಬೀಜ ಬೆಲೆ ಏರಿಕೆ ಮಾಡುವ ಮೂಲಕ ಮತ್ತಷ್ಟು ಸಮಸ್ಯೆ ತಂದೊಡ್ಡಲಾಗಿದೆ. ಕೃಷಿಗೆ ಸಂಬಂಧಿತ ವಸ್ತುಗಳ ಮೇಲೆ ಬೆಲೆ ಏರಿಕೆ ಮಾಡಿದಂತೆ ರೈತರ ಉತ್ಪನ್ನಗಳ ಬೆಲೆ ಹೆಚ್ಚಳ ಮಾಡಬೇಕು. ಆದರೆ ಬಡಪಾಯಿ ರೈತರ ಮೇಲೆ ಬ್ರಹ್ಮಸ್ತ್ರ ಪ್ರಯೋಗಿಸುವುದನ್ನು ಬಿಟ್ಟು ರೈತರಿಗೆ ಉಚಿತವಾಗಿ ಬಿತ್ತನೆ ಬೀಜ ನೀಡಲು ಕ್ರಮ ಕೈಗೊಳ್ಳಬೇಕಾಗಿದೆ.
–ಕೆಂಚೇಗೌಡ ಕರ್ನಾಟಕ ರಾಜ್ಯ ರೈತ ಸಂಘ ಹೊಸಕೋಟೆ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.