ADVERTISEMENT

ಹೊಸಕೋಟೆ: ದಿಕ್ಕು ತಪ್ಪುತ್ತಿರುವ ತನಿಖಾ ಸಂಸ್ಥೆಗಳು

‘ಭಾರತದಲ್ಲಿ ತನಿಖಾ ಸಂಸ್ಥೆಗಳ ಪಾತ್ರ’ ವಿಚಾರ ಸಂಕಿರಣ

​ಪ್ರಜಾವಾಣಿ ವಾರ್ತೆ
Published 5 ಅಕ್ಟೋಬರ್ 2024, 15:42 IST
Last Updated 5 ಅಕ್ಟೋಬರ್ 2024, 15:42 IST
ಹೊಸಕೋಟೆ ನಗರದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಹಮ್ಮಿಕೊಂಡಿದ್ದ ಭಾರತದಲ್ಲಿ ತನಿಖಾ ಸಂಸ್ಥೆಗಳ ಪಾತ್ರ ಎಂಬ ವಿಚಾರ ಸಂಕಿರಣವನ್ನು ಉದ್ಘಾಟಿಸಿದ ಗಣ್ಯರು.
ಹೊಸಕೋಟೆ ನಗರದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಹಮ್ಮಿಕೊಂಡಿದ್ದ ಭಾರತದಲ್ಲಿ ತನಿಖಾ ಸಂಸ್ಥೆಗಳ ಪಾತ್ರ ಎಂಬ ವಿಚಾರ ಸಂಕಿರಣವನ್ನು ಉದ್ಘಾಟಿಸಿದ ಗಣ್ಯರು.   

ಹೊಸಕೋಟೆ: ದೇಶದಲ್ಲಿ ನಡೆಯುವ ಭ್ರಷ್ಟಾಚಾರ ಮತ್ತು ಅವ್ಯವಹಾರ ತಡೆಗಟ್ಟುವ ನಿಟ್ಟಿನಲ್ಲಿ ಸ್ವತಂತ್ರವಾಗಿ ಕೆಲಸ ಮಾಡಬೇಕಿರುವ ರಾಷ್ಟ್ರೀಯ ತನಿಖಾ ಸಂಸ್ಥೆಗಳು ಯಾರದೋ ಮೂಗಿನ ನೇರಕ್ಕೆ ಕೆಲಸ ನಿರ್ವಹಿಸುತ್ತಿರುವುದು ದುರದೃಷ್ಟಕರ ಎಂದು ನಿವೃತ್ತ ಪ್ರಾಂಶುಪಾಲ ಎಂ.ನಾರಾಯಣಸ್ವಾಮಿ ಬೇಸರ ವ್ಯಕ್ತಪಡಿಸಿದರು.

ನಗರದ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಮತ್ತು ಸ್ನಾತಕೋತ್ತರ ಕೇಂದ್ರದಲ್ಲಿ ರಾಜ್ಯ ಶಾಸ್ತ್ರ ವಿಭಾಗ ಮತ್ತು ಬೆಂಗಳೂರು ಉತ್ತರ ವಿಶ್ವ ವಿದ್ಯಾಲಯದ ರಾಜ್ಯಶಾಸ್ತ್ರ ಉಪನ್ಯಾಸಕರ ವೇದಿಕೆ ಸಹಯೋಗದಲ್ಲಿ ಶನಿವಾರ ಆಯೋಜಿಸಿದ್ದ ‘ಭಾರತದಲ್ಲಿ ತನಿಖಾ ಸಂಸ್ಥೆಗಳ ಪಾತ್ರ’ ಕುರಿತ ವಿಚಾರ ಸಂಕಿರಣದಲ್ಲಿ ಮಾತನಾಡಿದರು.

ಪ್ರಜಾಪ್ರಭುತ್ವ ವ್ಯವಸ್ಥೆ ಬಲಿಷ್ಠಗೊಳಿಸಲು ಹಾಗೂ ದೇಶದಲ್ಲಿ ಭ್ರಷ್ಟಾಚಾರ, ಅಕ್ರಮ ಆಸ್ತಿ ಸಂಪತ್ತು ಗಳಿಸುವವರನ್ನು ತೊಡೆದು ಹಾಕಲು ಎನ್‌ಸಿಟಿಸಿ, ಐಬಿ, ಸಿಬಿಐ, ಎನ್ಐಎ, ಇ.ಡಿ, ಐ.ಟಿ, ಲೋಕಾಯುಕ್ತ ಸಂಸ್ಥೆಗಳು ಮತ್ತಷ್ಟು ಸ್ವತಂತ್ರವಾಗಿ ಕೆಲಸ ಮಾಡಬೇಕು. ಹಾಗಾದರೆ ಮಾತ್ರ ಜನಸಾಮಾನ್ಯರಿಗೆ ಪ್ರಜಾಪ್ರಭುತ್ವದಲ್ಲಿ ನಂಬಿಕೆ ಹೆಚ್ಚಾಗಲು ಸಾಧ್ಯ ಎಂದು ಅಭಿಪ್ರಾಯಪಟ್ಟರು.

ADVERTISEMENT

ಈ ನಿಟ್ಟಿನಲ್ಲಿ ರಾಜ್ಯಶಾಸ್ತ್ರ ವಿಭಾಗದ ಅಧ್ಯಾಪಕರು, ವಿದ್ಯಾರ್ಥಿಗಳು ಮತ್ತಷ್ಟು ಸಂಶೋಧನೆ ಕೈಗೊಳ್ಳುವ ಮೂಲಕ ತನಿಖಾ ಸಂಸ್ಥೆಗಳನ್ನು ಬಲಿಷ್ಠ ಗೊಳಿಸಬೇಕು ಎಂದರು.

ಕಾಲೇಜಿನ ಪ್ರಾಂಶುಪಾಲ ಪ್ರೊ.ರಾಮಲಿಂಗಪ್ಪ ಟಿ.ಬೇಗೂರು ಮಾತನಾಡಿ, ಪ್ರಜಾಪ್ರಭುತ್ವ ವ್ಯವಸ್ಥೆಗೆ ಬಂಡವಾಳ ಶಾಹಿ, ಮೂಲಭೂತವಾದ, ಸಾಮ್ರಾಜ್ಯಶಾಹಿ ನೀತಿಗಳು ಮಾರಕವಾಗಿವೆ. ಇವುಗಳ ದರ್ಪ‌ ದಬ್ಬಾಳಿಕೆಯಿಂದ ಕಟ್ಟಕಡೆಯ ಜನತೆಗೆ ನೆಮ್ಮದಿಯ ಬದುಕು ಮರೀಚಿಕೆಯಾಗಿದೆ. ಅನ್ಯಾಯ ತೊಡೆದುಹಾಕುವ ಕೆಲಸವನ್ನು ತನಿಖಾ ಸಂಸ್ಥೆಗಳು ಮಾಡಬೇಕಿದೆ ಎಂದರು.

ಬೆಂಗಳೂರು ಉತ್ತರ ವಿಶ್ವವಿದ್ಯಾಲಯದ ವ್ಯಾಪ್ತಿಯಲ್ಲಿ ಪ್ರಾಧ್ಯಾಪಕರಾಗಿ ಸೇವೆ ಮಾಡಿ ನಿವೃತ್ತರಾದ ಪ್ರೊ.ಎಸ್.ಎಂ.ವೆಂಕಟೇಶಪ್ಪ, ಪ್ರೊ.ಚೆನ್ನನರಸಿಂಹಯ್ಯ, ಪ್ರೊ.ಪ್ರಕಾಶ್ ಅವರನ್ನು ಸನ್ಮಾನಿಸಲಾಯಿತು.

ಪಠ್ಯ ಪುಸ್ತಕ ಲೇಖಕರಾದ ಪ್ರೊ.ಈರಣ್ಣ, ಪ್ರೊ.ಚೈತ್ರ ಶೆಟ್ಟಿಗಾರ್, ಪ್ರೊ.ಎಂ.ನಂದೀಶ್, ಪ್ರೊ.ಜಗದೀಶ್, ಕಾಡುಗೊಡಿ ಪ್ರಥಮ ದರ್ಜೆ ಕಾಲೇಜಿನ ಪ್ರಾಂಶುಪಾಲ ಪ್ರೊ.ಮುನಿನಾರಾಯಣಪ್ಪ, ರಾಜ್ಯಶಾಸ್ತ್ರ ವಿಭಾಗದ ಬಿಒಎಸ್ ಅಧ್ಯಕ್ಷ ಡಾ.ಅಮೀರ್ ಪಾಷಾ, ಡಾ.ಕಾವಲಯ್ಯ, ಎನ್.ಶ್ರೀನಿವಾಸಚಾರ್, ಶ್ರೀನಿವಾಸಪ್ಪ, ಎಮ್.ವಿ.ದ್ಯಾವಪ್ಪ, ಭಾರತಿ ಶಾಮರಾಜ್, ಸೌಭಾಗ್ಯ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.