ದೇವನಹಳ್ಳಿ: ಬಡತನದಲ್ಲೇ ಜೀವನ ಸಾಗಿಸುತ್ತಿದ್ದ ಪರಿಶಿಷ್ಟ ಕುಟುಂಬವೊಂದು ಕಳೆದ ಒಂದು ವಾರದಿಂದ ಸುರಿದ ಮಳೆಯಿಂದ ಸೂರು ಕಳೆದುಕೊಂಡಿದೆ. ವಾರದಿಂದ ಸುರಿದ ಜಿಟಿಜಿಟಿ ಮಳೆಗೆ ಮನೆ ಕುಸಿದಿದೆ.
ತಾಲ್ಲೂಕಿನ ಕುಂದಾಣ ಹೋಬಳಿ ಸೋಲೂರು ಗ್ರಾಮದ ಹಾಲಿನ ಡೇರಿ ಸಮೀಪ ಮಣ್ಣಿನ ಮನೆಯಲ್ಲಿ ಬದುಕು ಕಟ್ಟಿಕೊಂಡಿದ್ದ ನಾರಾಯಣಮ್ಮ ಅವರ ಕುಟುಂಬಕ್ಕೆ ಶನಿವಾರ ರಾತ್ರಿ ಆಘಾತ ಉಂಟಾಗಿದ್ದು, ಮಳೆಗೆ ಮನೆಯ ಒಂದು ಭಾಗದ ಗೋಡೆಯೇ ಕುಸಿದು ಬಿದ್ದಿದೆ.
ಒಂದು ವಾರದಿಂದ ಸುರಿಯುತ್ತಿದ್ದ ಜಿಟಿ ಜಿಟಿ ಮಳೆಯಿಂದಾಗಿ ಶಿಥಿಲವಾಗಿದ್ದ ಮಣ್ಣಿನ ಗೋಡೆ ಹಠಾತ್ತನೆ ಹೊರ ಭಾಗಕ್ಕೆ ಕುಸಿದಿದ್ದು, ಮನೆಯಲ್ಲಿಯೇ ಮಲಗಿದ್ದ ಕುಟುಂಬಸ್ಥರಿಗೆ ಅದೃಷ್ಟವಶಾತ್ ಯಾವುದೇ ಪ್ರಾಣಾಪಯ ಸಂಭವಿಸಿಲ್ಲ.
‘ವಯಸ್ಸಾದ ಗಂಡನನ್ನು ಕಟ್ಟಿಕೊಂಡು, ತೋಟದಲ್ಲಿ ಕೂಲಿ ಮಾಡಿ ಒಂದೊತ್ತು ಊಟ ಮಾಡುವುದೇ ಕಷ್ಟವಾಗಿದೆ. ಇರುವ ಮನೆಯಲ್ಲಿಯೇ ಹೇಗೋ ಕಾಲ ಹಾಕುತ್ತಿದ್ದೇವು, ಮಳೆಯಿಂದಾಗಿ ಈಗ ಗೋಡೆ ಕುಸಿದಿದ್ದು ಕುಟುಂಬಕ್ಕೆ ಆಶ್ರಯವೇ ಇಲ್ಲದಂತಾಗಿದೆ’ ಎಂದು ಮಳೆಯಿಂದ ಮನೆಯನ್ನು ಕಳೆದುಕೊಂಡ ನಾರಾಯಣಮ್ಮ ನೋವು ಹೇಳಿಕೊಂಡರು.
‘ನನಗೆ 6ನೇ ತರಗತಿಗೆ ಹೋಗುವ ಹೆಣ್ಣು ಮಗಳು ಇದ್ದಾಳೆ. ಮಗಳ ಭವಿಷ್ಯಕ್ಕಾಗಿ ಕಷ್ಟಪಟ್ಟು ದುಡಿದು ಓದಿಸುತ್ತಿದ್ದೆ. ಈಗ ಮನೆಯೂ ಇಲ್ಲ. ಮುಂದೆ ಏನು ಮಾಡುವುದೋ ತಿಳಿಯದಾಗಿದೆ’ ಎಂದು ಕಣ್ಣೀರು ಹಾಕಿದರು.
‘ಮನೆಯ ದುರಸ್ತಿಗಾಗಿ ಈಗಾಗಲೇ ಸಾಕಷ್ಟು ಬಾರಿ ಪಂಚಾಯಿತಿಗೆ ಅನುದಾನ ಒದಗಿಸುವಂತೆ ಮನವಿ ಮಾಡಿದ್ದರೂ ಯಾರು ಸಹಾಯಕ್ಕೆ ನೇರವಾಗಲಿಲ್ಲ, ಈಗ ಮನೆ ಕುಸಿದು ಬಿದ್ದಿದೆ. ಆಶ್ರಯವಿಲ್ಲದೇ ಬೀದಿ ಪಾಲಾಗಿದ್ದೇವೆ’ ಎಂದು ಮನೆ ಕಳೆದುಕೊಂಡ ಕೇಶವ ಕುಮಾರ್ ಅಲವತ್ತುಕೊಂಡರು.
Cut-off box - ಸ್ಥಳಕ್ಕೆ ಧಾವಿಸದ ಅಧಿಕಾರಿಗಳು ಕಂದಾಯ ಇಲಾಖೆಯ ಅಧಿಕಾರಿಗಳು ಗ್ರಾಮ ಪಂಚಾಯಿತಿಯ ಸದಸ್ಯರಿಗೆ ಮಳೆಯಿಂದಾಗಿ ಮನೆ ಕಳೆದುಕೊಂಡಿರುವ ಕುಟುಂಬದ ಸ್ಥಿತಿಯ ಕುರಿತು ಪೋನ್ ಮೂಲಕ ತಿಳಿಸಿದ್ದರೂ ಭಾನುವಾರ ಮಧ್ಯಾಹ್ನದವರೆಗೂ ಯಾರು ಗಮನ ಹರಿಸಿಲ್ಲ. ಪ್ರಕೃತಿ ವಿಕೋಪದಿಂದಾಗಿ ಮನೆಯನ್ನು ಕಳೆದುಕೊಂಡಿರುವ ದಲಿತ ಕುಟುಂಬಕ್ಕೆ ಸಂತ್ವಾನ ಹೇಳಲು ಯಾವೊಬ್ಬ ಅಧಿಕಾರಿಯೂ ಬಂದಿಲ್ಲ ಎಂದು ಸ್ಥಳೀಯರು ದೂರಿದರು. ಕನಿಷ್ಠ ಗ್ರಾಮ ಸಹಾಯಕನೂ ಭೇಟಿ ನೀಡಿ ವಾಸ್ತವತೆಯ ಕುರಿತು ಪರಿಶೀಲನೆ ನಡೆಸದೇ ಇರುವುದು ಆಡಳಿತ ವರ್ಗದ ಕಾರ್ಯವೈಖರಿಗೆ ಹಿಡಿದ ಕೈಗನ್ನಡಿಯಾಗಿದೆ. ನೋವಿನಲ್ಲಿರುವ ಕುಟುಂಬಕ್ಕೆ ಪರಿಹಾರ ನೀಡಬೇಕೆಂದು ಎಂದು ಸ್ಥಳೀಯರು ಆಗ್ರಹಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.