ದೇವನಹಳ್ಳಿ: ಕೇಂದ್ರದ ಬಳಿ ಅಕ್ಕಿ ಇದ್ದರೂ ನೀಡಿತ್ತಿಲ್ಲ. ರಾಜ್ಯದಲ್ಲಿ ಅಕ್ಕಿ ವಿತರಣೆ ತಡವಾದರೆ ಇದಕ್ಕೆ ನೇರವಾಗಿ ಬಿಜೆಪಿ, ಕೇಂದ್ರ ಸರ್ಕಾರ ಮತ್ತು ಪ್ರಧಾನಿ ನರೇಂದ್ರ ಮೋದಿ ಕಾರಣ ಎಂದು ಆಹಾರ ಮತ್ತು ನಾಗರಿಕ ಸರಬರಾಜು ಸಚಿವ ಕೆ.ಎಚ್.ಮುನಿಯಪ್ಪ ಆರೋಪ ಮಾಡಿದ್ದಾರೆ.
ಸೋಮವಾರ ತಾಲ್ಲೂಕಿನ ಜಾಲಿಗೆ ಗ್ರಾಮದಲ್ಲಿ ಮಾತನಾಡಿದ ಅವರು, ಕೇಂದ್ರದ ಬಳಿ ಈಗಾಗಲೇ ಏಳು ಲಕ್ಷ ಟನ್ ಅಕ್ಕಿ ದಾಸ್ತಾನಿದೆ. ಮೊದಲು ಅಕ್ಕಿ ಪೂರೈಸಲು ಒಪ್ಪಿ, ಬಳಿಕ ಆದೇಶ ಹಿಂಪಡೆದಿದೆ. ಬಡವರಿಗೆ ನೀಡುವ ಅಕ್ಕಿಯಲ್ಲೂ ಕೇಂದ್ರ ಸರ್ಕಾರ ತಾರತಮ್ಯ ಮಾಡುತ್ತಿದೆ ಎಂದು ದೂರಿದರು.
‘ರಾಜ್ಯ ಸರ್ಕಾರ ಪುಕ್ಕಟ್ಟೆಯಾಗಿ ಅಕ್ಕಿ ಕೇಳುತ್ತಿಲ್ಲ. ಕೇಂದ್ರ ಸರ್ಕಾರ ಕೇಳಿದಷ್ಟು ಹಣ (ಪ್ರತಿ ಕೆ.ಜಿ.ಗೆ ₹34) ನೀಡಲು ಸಿದ್ಧರಿದ್ದೇವೆ. ಇದಕ್ಕೆ ಬಿಜೆಪಿ ಅಡ್ಡಗಾಲು ಹಾಕುತ್ತಿದ್ದು, ಬಡವರ ಅಕ್ಕಿಯಲ್ಲೂ ರಾಜಕೀಯ ಮಾಡುತ್ತಿದೆ. ಅಕ್ಕಿಯಲ್ಲೂ ರಾಜಕೀಯ ಮಾಡುತ್ತಿರುವ ಬಿಜೆಪಿ ಎಷ್ಟರ ಮಟ್ಟಿಗೆ ಬಡವರ ಪರ ಇದೆ ಎಂಬುದಕ್ಕೆ ಇದೊಂದು ತಾಜಾ ಉದಾಹರಣೆ’ ಎಂದರು.
ನೆರೆ ರಾಜ್ಯಗಳೊಂದಿಗೆ ಮಾತನಾಡಿ ಅಕ್ಕಿ ತರಲು ಸಿದ್ಧತೆ ನಡೆಸಿದ್ದೇವೆ. ಮಧ್ಯಪ್ರದೇಶ, ಛತ್ತೀಸಗಢ ಸರ್ಕಾರಗಳು ರಾಜ್ಯಕ್ಕೆ 1.5 ಲಕ್ಷ ಟನ್ ಅಕ್ಕಿ ಕೊಡಲು ಒಪ್ಪಿವೆ. ಆದರೆ, ಅಲ್ಲಿಂದ ತರಲು ಕನಿಷ್ಠ 15 ದಿನವಾದರೂ ಬೇಕು ಎಂದು ಮುನಿಯಪ್ಪ ಹೇಳಿದರು.
ಜನರಿಗೆ ಕಾಂಗ್ರೆಸ್ ನೀಡಿರುವ ಗ್ಯಾರಂಟಿ ಪ್ರಕಾರ ಹತ್ತು ಕೆ.ಜಿ ಅಕ್ಕಿ ನೀಡಲು ರಾಜ್ಯ ಸರ್ಕಾರ ಕಂಕಣ ಬದ್ಧವಾಗಿದೆ. ಏಕಾಏಕಿ ನಿಯಮಗಳನ್ನು ಗಾಳಿಗೆ ತೂರಿ ಅಕ್ಕಿ ಖರೀದಿಸಲು ಸಾಧ್ಯವಿಲ್ಲ. ಟೆಂಡರ್ ಕರೆದು ನಿಯಮಾನುಸಾರ ಅಕ್ಕಿಯನ್ನು ರಾಜ್ಯಕ್ಕೆ ಆಮದು ಮಾಡಿಕೊಳ್ಳುತ್ತೇವೆ. ಈಗಾಗಲೇ, ಎನ್‌ಸಿಸಿಎಫ್, ಕೇಂದ್ರಿಯ ಭಂಡಾರ್, ನಾಫೆಡ್ ಸಂಸ್ಥೆಗಳಿಗೆ ಅಕ್ಕಿ ಪೂರೈಸಲುಗೆ ಮನವಿ ಮಾಡಿದ್ದೇವೆ ಎಂದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.