ಸೂಲಿಬೆಲೆ: ಇಂದಿನ ಸ್ಪರ್ಧಾತ್ಮಕ ವೇಗದ ಪ್ರಪಂಚದಲ್ಲಿ ಪುಸ್ತಕ ಓದುಗರ ಸಂಖ್ಯೆ ದಿನೇ ದಿನೇ ಕ್ಷೀಣಿಸುತ್ತಿದೆ ಎಂದು ಹೊಸಕೋಟೆ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಗ್ರಂಥಪಾಲಕ ಶರಣಬಸಪ್ಪ ಕಳವಳ ವ್ಯಕ್ತಪಡಿಸಿದರು.
ಸೂಲಿಬೆಲೆ ಸರ್ಕಾರಿಪ್ರಥಮ ದರ್ಜೆ ಕಾಲೇಜಿನಲ್ಲಿ ಶುಕ್ರವಾರ ಹಮ್ಮಿಕೊಂಡಿದ್ದ ಡಿಜಿಟಲ್ ಯುಗದಲ್ಲಿ ಗ್ರಂಥಾಲಯಗಳ ಪಾತ್ರ ವಿಶೇಷ ಉಪನ್ಯಾಸ ಹಾಗೂ ಕಾರ್ಯಾಗಾರ ಉದ್ಘಾಟಿಸಿ ಮಾತನಾಡಿದರು.
ಯಾವುದೇ ಪ್ರಶ್ನೆಗೆ ಉತ್ತರ ಗೂಗಲ್‌ನಲ್ಲಿ ಹುಡುಕುವ ಪರಿಸ್ಥಿತಿ ಎದುರಾಗಿದೆ. ಡಿಜಿಟಲ್ ಓದು ಜ್ಞಾನಾರ್ಜನೆಯಲ್ಲ, ಪುಸ್ತಕ ಓದುವುದರಿಂದ ಜ್ಞಾನ ಭಂಡಾರ ವೃದ್ದಿಯಾಗುತ್ತದೆ. ವಿದ್ಯಾರ್ಥಿಗಳಲ್ಲಿ ಓದುವ ಅಭಿರುಚಿ ಮೂಡಿಸಬೇಕು ಎಂದರು.
ಕಾಲೇಜು ಉಪಾಧ್ಯಕ್ಷ ಬಿ.ಎನ್.ಗೋಪಾಲಗೌಡ, ವಿದ್ಯಾರ್ಥಿಗಳು ಈಚಿನ ದಿನಗಳಲ್ಲಿ ಓದುವ ಅಭ್ಯಾಸದಿಂದ ವಿಮುಖರಾಗಿರುತ್ತಿರುವುದು ವಿಷಾದನೀಯ ಸಂಗತಿ. ಪಠ್ಯ ಮತ್ತು ಪಠ್ಯೇತರ ಚಟುವಟಿಕೆಗಳಿಗೂ ವಿದ್ಯಾರ್ಥಿಗಳು ಸ್ಪಂದಿಸುತ್ತಿಲ್ಲ ಅಂತರ್ಜಾಲ ಹೊಂದಿಕೊಡು ಜ್ಞಾನಭಂಡಾರದಿಂದ ದೂರವಾಗುತ್ತಿದ್ದಾರೆ ಎಂದರು.
ಸೂಲಿಬೆಲೆ ಪಿಯು ಕಾಲೇಜು ಉಪನ್ಯಾಸಕ ಕುಮಾರ್, ಶಾಲಾ–ಕಾಲೇಜಿನ ವಿದ್ಯಾರ್ಥಿಗಳಿಗೆ ಮೊಬೈಲ್ ಬಳಕೆ ಹುಚ್ಚು ಹಿಡಿದಿದೆ. ಇದರಿಂದ ಪಾಠ ಪ್ರವಚನಕ್ಕಿಂತ ಇತರೆ ಚಟುವಟಿಕೆಯೇ ಜಾಸ್ತಿಯಾಗಿದೆ. ಇದರಿಂದ ಕಾಲೇಜನ ವಾತಾವರಣ ಹಾಳಾಗುತ್ತಿದೆ. ಶಾಲಾ–ಕಾಲೇಜುಗಳಲ್ಲಿ ಮೊಬೈಲ್ ಬಳಕೆಯನ್ನು ಸಂಪೂರ್ಣವಾಗಿ ನಿಷೇಧಿಸಬೇಕು ಎಂದು ಒತ್ತಾಯಿಸಿದರು.
ಕಾಲೇಜು ಪ್ರಾಚಾರ್ಯ ಮೋಹನ್‌ಕುಮಾರ್, ಸಂಪನ್ಮೂಲ ವ್ಯಕ್ತಿ ಡಾ.ಅಮೀರ್‌ಪಾಷ, ಕುಮಾರ್ ಮಾತನಾಡಿದರು.
ಕಾಲೇಜು ಅಭಿವೃದ್ಧಿ ಸಮಿತಿ ಸದಸ್ಯರಾದ ದೇವಿದಾಸ್ ಸುಬ್ರಾಯ್ ಶೇಠ್, ಬೆಟ್ಟಹಳ್ಳಿಗೋಪಿನಾಥ್, ಆನಂದ್, ಎಂ.ಪ್ರಶಾಂತ್ , ಗ್ರಾಮ ಪಂಚಾಯಿತಿ ಕಾರ್ಯದರ್ಶಿ ಚಂದ್ರಪ್ಪ, ಗ್ರಂಥಪಾಲಕ ನರಸಪ್ಪ, ಉಪನ್ಯಾಸಕರಾದ ಸಂಗೀತಾ, ಶಶಿಕಲಾ, ಕಲ್ಪನಾ, ಶಿಕ್ಷಣ ಪೌಂಡೇಷನ್ ಹೆಮಂತ್ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.