ವಿಜಯಪುರ(ದೇವನಹಳ್ಳಿ): ಹೋಬಳಿಯ ಮಂಡಿಬೆಲೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಗೆಜ್ಜಿಕುಪ್ಪೆ ಮೂಲ ಸೌಕರ್ಯಗಳಿಂದ ವಂಚಿತವಾಗಿದೆ. ಮೂಲೆ ಗುಂಪಾಗಿದೆ.
ಇಲ್ಲಿ ಕೇವಲ 20 ಮನೆಗಳಿವೆ. 100 ಕ್ಕೂ ಹೆಚ್ಚು ಜನಸಂಖ್ಯೆ ಇದೆ. ಇಲ್ಲಿರುವ ಎಲ್ಲಾ ಮನೆಗಳು ಪರಿಶಿಷ್ಟರು(ಎಡಗೈ ಸಮುದಾಯ) ವಾಸವಿದ್ದಾರೆ. ಇದರಲ್ಲಿ ಬಹುತೇಕರು ಶೀಟ್ ಮನೆಯಲ್ಲಿ ವಾಸವಿದ್ದಾರೆ.
ನಾಲ್ಕೈದು ಮನೆಗಳಲ್ಲಿ ಹೊರತುಪಡಿಸಿದರೆ ಉಳಿದ ಮನೆಗಳಿಗೆ ಶೌಚಾಲಯ ಇಲ್ಲ. ಈ ಗ್ರಾಮ ಚರಂಡಿ ವ್ಯವಸ್ಥೆಯನ್ನೆ ಕಂಡಿಲ್ಲ. ಕೊಳಚೆ ನೀರು ಬೀದಿಯಲ್ಲೇ ಹರಿಯುತ್ತಿದೆ.
ಇಲ್ಲಿನ ನಿವಾಸಿಗಳು ಕೂಲಿ ಕಾರ್ಮಿಕರಾಗಿದ್ದು, ಸರ್ಕಾರದಿಂದ ಏನೇನು ಸೌಲಭ್ಯ ಸಿಗುತ್ತದೆ ಎಂಬ ಮಾಹಿತಿ ಇಲ್ಲದೆ ಸಂಕಷ್ಟದ ನಡುವೆಯೇ ಜೀವನ ದೂಡುತ್ತಿದ್ದಾರೆ.
ಇಲ್ಲಿನ ಜನ ಸ್ವಂತ ಭೂಮಿ ಹೊಂದಿಲ್ಲ. ರಾಜ್ಯ ಸರ್ಕಾರ ಆದಿಜಾಂಬವ ಅಭಿವೃದ್ಧಿ ನಿಗಮದಿಂದ ಭೂ ರಹಿತರಿಗೆ ಭೂಮಿ ಒದಗಿಸಲು ಭೂ ಒಡೆತನ ಯೋಜನೆ ಜಾರಿಗೆ ತಂದಿರುವುದು ಗೊತ್ತಿಲ್ಲ.
ನರೇಗಾ ಯೋಜನೆಯಡಿ ₹5 ಲಕ್ಷ ವೆಚ್ಚದಲ್ಲಿ ಚರಂಡಿ ಕಾಮಗಾರಿಗೆ ಗ್ರಾಮ ಪಂಚಾಯಿತಿಯಿಂದ ಬೋರ್ಡ್ ಅಳವಡಿಸಿ ಆರು ತಿಂಗಳು ಕಳೆದರೂ ಇದುವರೆಗೂ ಕಾಮಗಾರಿ ಆರಂಭವಾಗಿಲ್ಲ. ಗ್ರಾಮದಲ್ಲಿ ಬಹಳಷ್ಟು ಮಂದಿಗೆ ಉದ್ಯೋಗ ಖಾತ್ರಿ ಚೀಟಿ ಮಾಡಿಕೊಟ್ಟೊಲ್ಲ.
ಗ್ರಾಮದ ಸುತ್ತಲೂ ಸರ್ಕಾರಿ ಗೋಮಾಳ ಜಮೀನಿದೆ. ಬಲಾಢ್ಯರು ಒತ್ತುವರಿ ಮಾಡಿಕೊಂಡಿದ್ದಾರೆ. ಸ್ಮಶಾನಗಳಿಗೂ ಜಾಗವಿಲ್ಲ. ನಮಗೆ ನಿವೇಶನಗಳಿಗಾಗಿ ಭೂಮಿ ಮಂಜೂರು ಮಾಡಿಕೊಟ್ಟು ಹಂಚಿಕೆ ಮಾಡಿದರೆ, ನಾವು ಸಾಲ ಮಾಡಿಕೊಂಡಾದರೂ ಮನೆಗಳು ನಿರ್ಮಾಣ ಮಾಡಿಕೊಳ್ಳುತ್ತೇವೆ ಎಂದು ಗ್ರಾಮಸ್ಥರು ಗ್ರಾಮ ಪಂಚಾಯಿತಿಗೂ ಪತ್ರ ಬರೆದಿದ್ದಾರೆ. ಇದುವರೆಗೆ ಸ್ಪಂದನೆ ದೊರೆತಿಲ್ಲ.
‘ಎಷ್ಟು ಬಾರಿ ಹೋಗಿ ಅರ್ಜಿಗಳು ಕೊಟ್ಟರೂ ನಮ್ಮೂರಿನ ಕಡೆಗೆ ಯಾರೂ ಗಮನ ಹರಿಸುತ್ತಿಲ್ಲ’ ಸ್ಥಳೀಯ ನಿವಾಸಿ ರಾಜಣ್ಣ ಬೇಸರಿಸಿದರು.
‘ಚುನಾವಣೆಗಳಲ್ಲಿ ಮತ ಕೇಳಲು ಬರುವಾಗ ಇರುವ ಕಾಳಜಿ ನಂತರ ಇರುವುದಿಲ್ಲ. ನಮ್ಮೂರಿನ ಪರಿಸ್ಥಿತಿ ನೋಡಿದರೆ ಮನೆಗಳಲ್ಲಿ ಊಟ ಮಾಡುವುದಕ್ಕೂ ಮನಸ್ಸು ಬರುವುದಿಲ್ಲ’ ಲಕ್ಷ್ಮಮ್ಮ ಅಸಮಾಧಾನ ವ್ಯಕ್ತಪಡಿಸಿದರು.
ನರೇಗಾ ಕಾಮಗಾರಿಗಳ ಕುರಿತು ಜಿಲ್ಲಾ ಪಂಚಾಯಿತಿಗೆ ಆಕ್ಷೇಪಣೆ ಸಲ್ಲಿಕೆ ಆಗಿದೆ. ಜಿಲ್ಲಾ ಪಂಚಾಯಿತಿಯ ಓಂಬಡ್ಸ್‌ಮನ್ ಬಳಿ ವಿಚಾರಣೆ ನಡೆಯುತ್ತಿರುವ ಕಾರಣ ಚರಂಡಿ ನಿರ್ಮಾಣ ಕಾಮಗಾರಿ ಆರಂಭಿಸಿಲ್ಲ.ಸುಜಾತಮ್ಮ ಅಧ್ಯಕ್ಷೆ ಮಂಡಿಬೆಲೆ ಗ್ರಾ. ಪಂ.
15ನೇ ಹಣಕಾಸು ಯೋಜನೆಯಡಿ ಚರಂಡಿ ಕಾಮಗಾರಿಗಾಗಿ ಕ್ರಿಯಾಯೋಜನೆ ಮಾಡಿಕೊಂಡಿದ್ದೇವೆ. ಶೀಘ್ರವಾಗಿ ಕಾಮಗಾರಿ ಆರಂಭಿಸುತ್ತೇವೆ.ಗೋಪಾಲರಾವ್, ಪಿಡಿಒ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.