ADVERTISEMENT

ಕೆರೆ ದುರಸ್ತಿಯ ಶಾಸನ ಪತ್ತೆ

​ಪ್ರಜಾವಾಣಿ ವಾರ್ತೆ
Published 13 ನವೆಂಬರ್ 2024, 16:42 IST
Last Updated 13 ನವೆಂಬರ್ 2024, 16:42 IST
ಹೊಸಕೋಟೆ ತಾಲ್ಲೂಕಿನ ದೊಡ್ಡನಲ್ಲೂರಹಳ್ಳಿ ಗ್ರಾಮದಲ್ಲಿ ಅನಾಥ ಸ್ಥಿತಿಯಲ್ಲಿ ಬಿದ್ದಿರುವ ಕೆರೆ ದುರಸ್ತಿ ಮಾಡಿಸಿರುವ ಶಾಸನ
ಹೊಸಕೋಟೆ ತಾಲ್ಲೂಕಿನ ದೊಡ್ಡನಲ್ಲೂರಹಳ್ಳಿ ಗ್ರಾಮದಲ್ಲಿ ಅನಾಥ ಸ್ಥಿತಿಯಲ್ಲಿ ಬಿದ್ದಿರುವ ಕೆರೆ ದುರಸ್ತಿ ಮಾಡಿಸಿರುವ ಶಾಸನ   

ಹೊಸಕೋಟೆ: ತಾಲ್ಲೂಕಿನ ಚೊಕ್ಕಹಳ್ಳಿ ಗ್ರಾಮ ಪಂಚಾಯಿತಿಯ ದೊಡ್ಡನಲ್ಲೂರಹಳ್ಳಿ ಗ್ರಾಮದಲ್ಲಿ ಕೆರೆ ದುರಸ್ತಿ ಮಾಡಿಸಿರುವ ಕುರಿತು ಮಾಹಿತಿ ಒಳಗೊಂಡ ಶಾಸನವೊಂದು ಪತ್ತೆಯಾಗಿದೆ. ದೊಡ್ಡನಲ್ಲೂರಹಳ್ಳಿ ಗ್ರಾಮವು ಸುಮಾರು 800 ವರ್ಷಗಳ ಇತಿಹಾಸ ಹೊಂದಿದ್ದು, ಕ್ರಿ.ಶ 1330ರಲ್ಲಿ ಸೋಮನಾಥನ ಮುಂದಾಳತ್ವದಲ್ಲಿ ತಾಯಿಲ ಸಮುದ್ರ ಈಗಿನ ನಲ್ಲೂರಹಳ್ಳಿಯ ಕೆರೆಯ ಹೂಳು ತೆಗೆಸಿ ದುರಸ್ತಿ ಮಾಡಿದ ತಮಿಳು ಶಾಸನ ಪತ್ತೆಯಾಗಿದೆ.

ಈಗಿನ ದೊಡ್ಡ ಹುಲ್ಲೂರು ಕೇಂದ್ರವಾಗಿದ್ದ ಪುಲಿಯೂರುನಾಡು ಅತಿ ಶ್ರೀಮಂತ ಪ್ರದೇಶ. ಈ ನಾಡಿನ ಮಹಾಮಂತ್ರಿ ಸಿಂಗಯ್ಯದಣ್ಣಾಯಕರಲ್ಲಿ ಅಧಿಕಾರಿಯಾಗಿದ್ದ ಮಹಾ ಸಾಮಂತಾಧಿಪತಿ ಸೋಮನಾಥನ್ ಮತ್ತು ನಾಡಿನ ಮೇಲ್ವಿಚಾರಕರಾದ ನಂಬಿಸೆಟ್ಟಿ, ಮಾರಸೆಟ್ಟಿ, ರಾಮಸೆಟ್ಟಿ, ಸಿಮಾಂಡೈಸೆಟ್ಟಿ ನಲ್ಲೂರಹಳ್ಳಿ, ವಡಗೂರಹಳ್ಳಿ (ವಳಗೆರೆಪುರ) ಜನರಿಂದ ತಾಯಿಲ ಸೀಯರ್ ಮಗನಾದ ವೈಯಣ್ಣನ್ ಹೂಳು ತೆಗೆಸಿ ದುರಸ್ತಿಮಾಡಿ ‘ತಾಯಿಲ ಸಮುದ್ರ’ ಕೆರೆಯನ್ನು ಮಾನ್ಯ ನೀಡಿ ಶಾಸನ ಹಾಕಿಸುತ್ತಾನೆ. ಈ ಶಾಸನವನ್ನು ಸೋಮನಾಥನ ಸಾಕ್ಷಿಯಾಗಿ ಅಣೈಯರ್ ಶಾಸನ ಬರೆಯುತ್ತಾನೆ.

ಶಾಸನವನ್ನು ಬಿ.ಎಲ್.ರೈಸ್ ಅವರು ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಇ.ಸಿ ಸಂಪುಟ 09ರಲ್ಲಿ ದಾಖಲಿಸುತ್ತಾರೆ. ಆದರೆ ಇಂತಹ ಮಹತ್ವ ಸಾರುವ ಶಾಸನ ಸ್ಥಳೀಯರ ಅಸಡ್ಡೆಯಿಂದ ಅನಾಥ ಸ್ಥಿತಿಯಲ್ಲಿ ಬಿದ್ದಿದೆ. ಪಕ್ಕದಲ್ಲಿ ಪ್ರಾಚೀನವಾದ ಗೋಪಾಲಸ್ವಾಮಿ ದೇವಾಲಯವಿದ್ದು, ಶಾಸನವನ್ನು ಕನಿಷ್ಠ ದೇವಾಲಯದ ಬಳಿ ಸಂರಕ್ಷಿಸುವ ಕೆಲಸ ಆಗಬೇಕಿದೆ ಎಂದು ಸಂಶೋಧಕ ವಿಜಯಶಂಕರ ಅಭಿಪ್ರಾಯಪಡುತ್ತಾರೆ.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.