ವಿಜಯಪುರ:ವೀರಗಲ್ಲುಗಳು ಇತಿಹಾಸದ ಅಮೂಲ್ಯ ಸ್ಮಾರಕಗಳು. ಅವುಗಳ ಸಂರಕ್ಷಣೆ ಎಲ್ಲರ ಜವಾಬ್ದಾರಿ ಎಂದು ಬಿಟ್ಟಸಂದ್ರ ಗುರುಸಿದ್ದಯ್ಯ ಅಭಿಪ್ರಾಯಪಟ್ಟಿದ್ದಾರೆ.
ವೆಂಕಟಗಿರಿಕೋಟೆ ನಿವಾಸಿ ಶ್ರೀನಿವಾಸಯ್ಯ ಅವರ ಖಾಲಿ ನಿವೇಶನದಲ್ಲಿ 9ನೇ ಶತಮಾನದ ಗಂಗರ ಕಾಲದ ಹಳಗನ್ನಡ ಲಿಪಿಯುಳ್ಳ ವೀರಗಲ್ಲು ಪತ್ತೆಹಚ್ಚಿ ಅದನ್ನು ಸಂರಕ್ಷಿಸುವ ಮೂಲಕ ಸರ್ಕಾರಕ್ಕೆ ಒತ್ತಾಯಿಸಿದರು.
ಐತಿಹಾಸಿಕ ಸ್ಮಾರಕಗಳಾದ ದೇವಾಲಯ, ಮಾಸ್ತಿಗಲ್ಲು, ವೀರಗಲ್ಲು ಮುಂದಿನ ಭವಿಷ್ಯಕ್ಕೆ ಮುಡುಪಾಗಿಡುವ ಯತ್ನ ಮಾಡಬೇಕಾಗಿದೆ. ಮುಂದಿನ ಪೀಳಿಗೆಗೆ ಇತಿಹಾಸ ತಿಳಿಸುವಂತಹ ಕೆಲಸವನ್ನು ಪುರಾತತ್ವ ಇಲಾಖೆ ಮಾಡಬೇಕು. ತಾಲ್ಲೂಕಿನಲ್ಲಿ ಇದುವರೆಗೂ ದಾಖಲೆಯಾಗದಿರುವ 30ಕ್ಕೂ ಹೆಚ್ಚು ಶಿಲಾಶಾಸನಗಳು, ವೀರಗಲ್ಲುಗಳು ಪತ್ತೆಯಾಗಿವೆ. ತುರುಗೋಳ್ ಶಾಸನ, ತಮಿಳು ಶಾಸನ, ಕನ್ನಡ ಶಾಸನಗಳು ಇದರಲ್ಲಿ ಸೇರಿವೆ ಎಂದು ಮಾಹಿತಿ ನೀಡಿದರು.
ವೆಂಕಟಗಿರಿಕೋಟೆಯಲ್ಲಿ ಪತ್ತೆಯಾಗಿರುವ ವೀರಗಲ್ಲಿನ ಜತೆಗೆ ಮಣ್ಣಿನಲ್ಲಿ ಹೂತು ಹೋಗಿರುವ ಮತ್ತಷ್ಟು ಕಲ್ಲುಗಳಿವೆ. ಇವುಗಳನ್ನು ಹೊರ ತೆಗೆಯುವ ಕೆಲಸ ಆಗಬೇಕಾಗಿದೆ. ಕರ್ನಾಟಕದಲ್ಲಿ ಕದಂಬರ ಕಾಲದಿಂದಲೂ ವೀರಗಲ್ಲುಗಳನ್ನು ಸ್ಥಾಪಿಸುವ ವಾಡಿಕೆ ಇದೆ. ವೀರಗಲ್ಲುಗಳು ಶಿಲೆಯಿಂದ ನಿರ್ಮಿತವಾಗಿರುತ್ತವೆ. ಶಿಲೆ ತಳಭಾಗದಲ್ಲಿ ಯೋಧ ವೀರಮರಣವನ್ನಪ್ಪಿದ ಕಾಲಮಾನ ಕೆತ್ತಲಾಗಿದೆ ಎಂದು ತಿಳಿಸಿದರು.
ಗಂಗರು ಸ್ಥಳೀಯರಾಗಿದ್ದು ಕೋಲಾರ, ಬೆಂಗಳೂರು, ತುಮಕೂರು, ಮೈಸೂರು, ಚಾಮರಾಜನಗರ, ಮಂಡ್ಯ, ಹಾಸನ ಜಿಲ್ಲೆ ಒಳಗೊಂಡಂತೆ ದಕ್ಷಿಣ ಕರ್ನಾಟಕದಲ್ಲಿ ಶಾತವಾಹನರ ನಂತರ ಅಧಿಕಾರಕ್ಕೆ ಬಂದವರು. ರೈತ ಸಮುದಾಯಕ್ಕೆ ಸೇರಿದವರಾಗಿದ್ದ ಇವರ ಮೊದಲ ರಾಜಧಾನಿ ಕೋಲಾರ. ಗಂಗರು 4ನೇ ಶತಮಾನದಿಂದ ಸುಮಾರು 10ನೇ ಶತಮಾನದವರೆಗೆ ದಕ್ಷಿಣ ಕರ್ನಾಟಕ ಮತ್ತು ತಮಿಳುನಾಡಿನ ಉತ್ತರಭಾಗ ಆಳಿದ ರಾಜಮನೆತನ. ಇಲ್ಲಿ ಪತ್ತೆ ಆಗಿರುವ ಶಾಸನ ಮತ್ತು ಅದರಲ್ಲಿನ ಕೆತ್ತನೆ ಗಂಗರು ಇಲ್ಲಿ ಆಳ್ವಿಕೆ ನಡೆಸಿದ್ದರು ಎನ್ನುವುದಕ್ಕೆ ಸಾಕ್ಷಿ ಎಂದು ಅಭಿಪ್ರಾಯಪಟ್ಟರು.
ವೆಂಕಟಗಿರಿಕೋಟೆಯಲ್ಲಿ ಸಿಕ್ಕಿರುವ ವೀರಗಲ್ಲು ಮೇಲೆ ಯುದ್ಧ ಸನ್ನಿವೇಶ, ಸ್ವರ್ಗಾರೋಹಣ ಚಿತ್ರಣ ಕಾಣಬಹುದು ಎಂದು ಹೇಳಿದರು.
ಸ್ಥಳೀಯ ನಿವಾಸಿ ಲಕ್ಷ್ಮಣರೆಡ್ಡಿ ಮಾತನಾಡಿ, ಗಂಗರು ಆಳ್ವಿಕೆ ಮಾಡಿರುವ ಈ ಭಾಗದಲ್ಲಿನ ವೀರಗಲ್ಲುಗಳ ರಕ್ಷಣೆಗೆ ಪುರಾತತ್ವ ಇಲಾಖೆ ಮುಂದಾಗಬೇಕು ಎಂದು ಮನವಿ ಮಾಡಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.