ಆನೇಕಲ್: ತಾಲ್ಲೂಕಿನ ಎಲೆಕ್ಟ್ರಾನಿಕ್‌ಸಿಟಿಯ ಐಎಸ್‌ಬಿಆರ್ ಕಾಲೇಜಿನಲ್ಲಿ ಶನಿವಾರ ಘಟಿಕೋತ್ಸವ ನಡೆಯಿತು.
ಘಟಿಕೋತ್ಸವ ಉದ್ಘಾಟಿಸಿದ ಟೈ ಗ್ಲೋಬಲ್ ಕಂಪನಿಯ ಸಿಇಓ ಅಧ್ಯಕ್ಷ ಮದನ್ ಪದಕ್ಕಿ, ವಿದ್ಯಾರ್ಥಿಗಳು ಕ್ರಿಯಾಶೀಲರಾಗಬೇಕು. ತಾವು ಪಡೆದ ಪದವಿ ಸಮಾಜಕ್ಕೆ ಕೊಡುಗೆಯಾಗಬೇಕು. ಪ್ರತಿಯೊಬ್ಬ ವಿದ್ಯಾರ್ಥಿಗೂ ಪದವಿಯ ನಂತರ ಜವಾಬ್ದಾರಿ ಹೆಚ್ಚುತ್ತದೆ. ವಿದ್ಯಾರ್ಥಿಗಳು ನಿರಂತರ ಕಲಿಕೆಯನ್ನು ಜೀವನದ ಭಾಗವನ್ನಾಗಿಸಿಕೊಳ್ಳಬೇಕು ಎಂದು ಸಲಹೆ ನೀಡಿದರು.
ಇತ್ತೀಚಿನ ದಿನಗಳಲ್ಲಿ ಮಾಹಿತಿ ತಂತ್ರಜ್ಞಾನ ಕ್ಷೇತ್ರಕ್ಕೆ ಹೆಚ್ಚು ಆದ್ಯತೆ ದೊರೆತಿದೆ. ಹಾಗಾಗಿ ವಿದ್ಯಾರ್ಥಿಗಳು ಕೃತಕ ಬುದ್ಧಿಮತ್ತೆ(ಎಐ), ಮೆಷಿನ್ ಲರ್ನಿಂಗ್‌ನಂತರ ಆಧುನಿಕ ತಂತ್ರಜ್ಞಾನವನ್ನು ವೃತ್ತಿ ಜೀವನದಲ್ಲಿ ಸಮರ್ಪಕವಾಗಿ ಬಳಸಿಕೊಳ್ಳಬೇಕು. ಇದರಿಂದ ವಿಫುಲ ಅವಕಾಶಗಳು ತೆರೆದುಕೊಳ್ಳಲಿದೆ ಎಂದು ಹೇಳಿದರು.
ಐಎಸ್‌ಬಿಆರ್ ಸಂಸ್ಥೆಯ ಮನೀಷ್ ಕೊತಾರಿ, ಶಿಕ್ಷಣ ಕ್ಷೇತ್ರದಲ್ಲಿಯೂ ಕೃತಕ ಬುದ್ಧಿಮತ್ತೆಯ ಪ್ರಭಾವ ಹೆಚ್ಚಾಗಿದೆ. ಆನ್‌ಲೈನ್, ಆಫ್‌ಲೈನ್ ಪದ್ಧತಿ ರೂಢಿಯಾಗಿದೆ. ಕೃತಕ ಬುದ್ಧಿಮತ್ತೆಯು ಉದ್ಯೋಗಗಳನ್ನು ಕಸಿಯುವುದಿಲ್ಲ ಬದಲಿಗೆ ಉತ್ಪಾದಕತೆ ಹೆಚ್ಚಿಸುತ್ತದೆ ಎಂದರು.
ಘಟಿಕೋತ್ಸವದಲ್ಲಿ ಪದವಿ ಪಡೆದ ವಿದ್ಯಾರ್ಥಿಗಳು ತಮ್ಮ ಶಿಕ್ಷಣವನ್ನು ವೃತ್ತಿ ಜೀವನದಲ್ಲಿ ಅಳವಡಿಸಿಕೊಳ್ಳಬೇಕು. ಯಶಸ್ಸು ಅಡ್ಡದಾರಿಯಿಂದ ದೊರೆಯುವುದಿಲ್ಲ. ನಿರಂತರ ಶ್ರಮ, ಸತತ ಅಭ್ಯಾಸದಿಂದ ಮಾತ್ರ ಯಶಸ್ಸು ದೊರೆಯುತ್ತದೆ. ಹಾಗಾಗಿ ವಿದ್ಯಾರ್ಥಿಗಳು ತಾಳ್ಮೆಯಿಂದ ವೃತ್ತಿ ಜೀವನ ಆರಂಭಿಸಬೇಕೆಂದು ಹೇಳಿದರು.
ಇಂಡಿಯನ್ ಸೆಂಟರ್ ಫಾರ್ ಎಕ್ಸಲೆನ್ಸ್‌ನ ಉಪಾಧ್ಯಕ್ಷ ರಮೇಶ್ ಕಲಂಜೆ, ಐಎಸ್‌ಬಿಆರ್ ಸಂಸ್ಥೆಯ ಪ್ರಕಾಶ್ ಕೊತಾರಿ, ಡಾ.ಕೆ.ಎಸ್.ಆನಂದರಾಮ್, ಸಿ.ಮನೋಹರ್, ಚಂದ್ರ ನಿರಂಜನ್, ನರಸಿಂಹನ್, ಲಕ್ಷ್ಮೀನಾರಾಯಣ್, ನರಸಯ್ಯ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.