ದೊಡ್ಡಬಳ್ಳಾಪುರ: ರಾಜ್ಯದಲ್ಲಿ ಜವಳಿ ಉದ್ಯಮವನ್ನು ಉತ್ತೇಜಿಸುವ ನಿಟ್ಟಿನಲ್ಲಿ ರಾಜ್ಯ ಸರ್ಕಾರ ಜಾರಿಗೆ ತಂದಿರುವ ನೂತನ ಜವಳಿ ಮತ್ತು ಸಿದ್ಧ ಉಡುಪು ನೀತಿ-2019-24 ದೇಶದಲ್ಲಿಯೇ ಮಾದರಿ ನೀತಿಯಾಗಿದೆ. ರಾಜ್ಯವನ್ನು ದೇಶದಲ್ಲಿಯೇ ಪ್ರಮುಖ ಜವಳಿ ತಾಣವನ್ನಾಗಿ ಮಾಡುವ ಗುರಿಯನ್ನು ಹೊಂದಿದೆ ಎಂದು ಕೈಮಗ್ಗ ಮತ್ತು ಜವಳಿ ಇಲಾಖೆಯ ಜಂಟಿ ನಿರ್ದೇಶಕ (ಜವಳಿ ನೀತಿ) ಆರ್.ಲಿಂಗರಾಜು ಹೇಳಿದರು.
ಕರ್ನಾಟಕ ಸಣ್ಣ ಕೈಗಾರಿಕೆಗಳ ಸಂಘದಿಂದ ನಗರದಲ್ಲಿ ಸೋಮವಾರ ನಡೆದ ನೂತನ ಜವಳಿ ಮತ್ತು ಸಿದ್ದ ಉಡುಪು ನೀತಿ-2019-24 ಮತ್ತು ಕೆ.ಎಸ್.ಎಫ್.ಸಿ ಯೋಜನೆಗಳ ಕುರಿತ ಸಂವಾದ ಸಭೆಯಲ್ಲಿ ಅವರು ಮಾತನಾಡಿದರು.
ನೂತನ ಜವಳಿ ಯೋಜನೆಯಲ್ಲಿ ಉದ್ದಿಮೆ ಸ್ಥಾಪಿಸುವವರಿಗೆ ಹಣಕಾಸು ಸೇರಿದಂತೆ ವಿವಿಧ ಸೌಲಭ್ಯ ನೀಡಲಾಗುತ್ತಿದೆ. ನೇಕಾರ ಉದ್ಯಮಿಗಳು ಯೋಜನೆಯ ಲಾಭ ಪಡೆದುಕೊಳ್ಳಬೇಕಿದೆ. ಈ ಯೋಜನೆಯಲ್ಲಿ ಉದ್ದಿಮೆ ಸ್ಥಾಪಿಸುವವರಿಗೆ ಹಣಕಾಸು ಸೇರಿದಂತೆ ವಿವಿಧ ಸೌಲಭ್ಯ ನೀಡಲಾಗುತ್ತಿದೆ. ನೇಕಾರ ಉದ್ಯಮಿಗಳು ಯೋಜನೆಯ ಲಾಭ ಪಡೆದುಕೊಳ್ಳಬೇಕಿದೆ ಎಂದರು.
ಕೃಷಿ ಕ್ಷೇತ್ರ ಹೊರತುಪಡಿಸಿದರೆ ಜವಳಿ ಕ್ಷೇತ್ರವು ಹೆಚ್ಚಿನ ಉದ್ಯೋಗ ನೀಡುವ ಕ್ಷೇತ್ರವಾಗಿದೆ. ಇತ್ತೀಚೆಗೆ ಬೆಂಗಳೂರಿನಲ್ಲಿ ನಡೆದ ಜಾಗತಿಕ ಬಂಡವಾಳ ಹೂಡಿಕೆದಾರರ ಸಮಾವೇಶದಲ್ಲಿ ಜವಳಿ ಕ್ಷೇತ್ರಕ್ಕೆ ₹4,200 ಕೋಟಿ ಬಂಡವಾಳ ಹೂಡಿಕೆಗೆ ವಿದೇಶಿ ಕಂಪನಿಗಳು ಮುಂದೆ ಬಂದಿವೆ. ಇದರಿಂದ 45 ಸಾವಿರ ಜನರಿಗೆ ಉದ್ಯೋಗ ದೊರೆಯಲಿದೆ ಎಂದು ತಿಳಿಸಿದರು.
ಬೆಂಗಳೂರು ಸಿದ್ದ ಉಡುಪುಗಳ ತಯಾರಿಕೆಯಲ್ಲಿ ಮುಂಚೂಣಿಯಲ್ಲಿದೆ. ದೇಶದಲ್ಲಿ 2ನೇ ಅತಿದೊಡ್ಡ ಜವಳಿ ಉದ್ಯಮ ರಾಜ್ಯವಾಗಿ ಕರ್ನಾಟಕ ಹೊರಹೊಮ್ಮಿದೆ. ಶೇ 65ರಷ್ಟು ರೇಷ್ಮೆ ಇಲ್ಲಿ ತಯಾರಾಗುತ್ತಿದೆ. ಆದರೆ ಇದಕ್ಕೆ ಪೂರಕವಾಗಿ ಜವಳಿ ಉದ್ಯಮಗಳು ಸಹ ಹೆಚ್ಚಾಗಬೇಕಿದೆ. ಸರ್ಕಾರ ಈ ನಿಟ್ಟಿನಲ್ಲಿ ನೂತನ ಜವಳಿ ನೀತಿ ಜಾರಿಮಾಡಿದ್ದು, ರಾಜ್ಯದ 4 ವಲಯಗಳಲ್ಲಿ ಸಹಾಯಧನ ನೀಡುತ್ತಿದೆ. ಉದ್ಯಮ ಸ್ಥಾಪಿಸಲು ಸಾಲಾಧಾರಿತ ಬಂಡವಾಳಕ್ಕೆ ಸಹಾಯಧನ ನೀಡಲಾಗುತ್ತದೆ. ಬಡ್ಡಿ ಸಹಾಯಧನ ಶೇ 5 ರಷ್ಟು ನೀಡಲಾಗುತ್ತದೆ. ಉದ್ಯಮಕ್ಕೆ ಹೊಸ ಜಮೀನು ಕೊಂಡರೆ ಮುದ್ರಾಂಕ ಶುಲ್ಕದಲ್ಲಿ ಪೂರ್ಣ ವಿನಾಯಿತಿ ಇದೆ ಎಂದು ಹೇಳಿದರು.
15 ಎಕರೆ ಜವಳಿ ಪಾರ್ಕ್ ಸ್ಥಾಪಿಸಿ, ನಿಯಮಾನುಸಾರ ಮೂಲ ಸೌಕರ್ಯ ಒದಗಿಸಿ, ಉದ್ಯಮ ಸ್ಥಾಪಿಸಿದರೆ ಶೇ 40ರಷ್ಟು ಸಹಾಯಧನ ನೀಡಲಾಗುತ್ತದೆ. ಜವಳಿ ಉದ್ಯಮದ ಬಳಿಕ ಸಹಾಯಧನ ನೀಡಲು ಬೇರೆ ರಾಜ್ಯಗಳಲ್ಲಿ 2 ರಿಂದ 3 ವರ್ಷಗಳಾಗಬಹುದು. ಆದರೆ ಕರ್ನಾಟಕದಲ್ಲಿ ಹೊಸ ಜವಳಿ ನೀತಿಯಡಿ ಆರು ತಿಂಗಳಲ್ಲಿಯೇ ಹಣ ಬಿಡುಗಡೆ ಮಾಡಲಾಗುವುದು. ಜವಳಿ ಉದ್ಯಮದಲ್ಲಿ ಸಾಂಪ್ರದಾಯಿಕ ಮಾದರಿಗಳ ಹೊರತಾಗಿ ತಾಂತ್ರಿಕ ಜವಳಿ ಸ್ಥಾಪಿಸಲು ಸಹ ಉತ್ತಮ ಅವಕಾಶವಿದ್ದು, ಬೆಂಗಳೂರು ಗ್ರಾಮಾಂತರ ಜಿಲ್ಲೆಯಲ್ಲಿ ಹೆಚ್ಚಿನ ಉದ್ದಿಮೆಗಳು ಸ್ಥಾಪನೆಯಾಗಬೇಕಿವೆ ಎಂದು ಕೈಮಗ್ಗ ಮತ್ತು ಜವಳಿ ಇಲಾಖೆಯ ಜಂಟಿ ನಿರ್ದೇಶಕ (ಜವಳಿ ನೀತಿ) ಆರ್.ಲಿಂಗರಾಜು ತಿಳಿಸಿದರು.
ಸಭೆಯಲ್ಲಿ ಕೆ.ಎಸ್.ಎಫ್.ಸಿ ಕಾರ್ಯಕಾರಿ ನಿರ್ದೇಶಕ ಎನ್.ವೆಂಕಟೇಶ್, ಕೇಂದ್ರ ರೇಷ್ಮೆ ಮಂಡಲಿ ಮಾಜಿ ಅಧ್ಯಕ್ಷ ಕೆ.ಎಂ.ಹನುಮಂತರಾಯಪ್ಪ, ಕರ್ನಾಟಕ ಸಣ್ಣ ಕೈಗಾರಿಕೆಗಳ ಸಂಘದ ಅಧ್ಯಕ್ಷ ಕೆ.ಎನ್.ನರಸಿಂಹಮೂರ್ತಿ, ಕೈಮಗ್ಗ ಮತ್ತು ಜವಳಿ ಇಲಾಖೆ ಜಂಟಿ ನಿರ್ದೇಶಕ ರವಿಕುಮಾರ್, ಕೆಎಸ್‍ಎಫ್‍ಸಿ ಪ್ರಧಾನ ವ್ಯವಸ್ಥಾಪಕ ಕಿಶೋರ್‌ಕುಮಾರ್, ಕಾಸಿಯ ಉಪಾಧ್ಯಕ್ಷ ಶಶಿಧರಶೆಟ್ಟಿ, ಗೌರವ ಪ್ರದಾನ ಕಾರ್ಯದರ್ಶಿ ಬಿ.ಪ್ರವೀಣ್,ಜಂಟಿ ಕಾರ್ಯದರ್ಶಿ ಎಸ್.ವೆಂಕಟೇಶನ್, ಭೀಮಾಶಂಕರ ಬಿ.ಪಾಟೀಲ,ಉಪಸಮಿತಿಯ ಅಧ್ಯಕ್ಷ ಡಿ.ವಿ.ಜಗದೀಶ್ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.